ರಾಜ್‌ಕೋಟ್ (ಗುಜರಾತ್):ಬದಲಾಗುತ್ತಿರುವ ಜೀವನ ಶೈಲಿ ಮತ್ತು ಆಹಾರದಿಂದಾಗಿ ಮನುಷ್ಯನಾ ಜೀವಿತಾವಧಿ ಕುಂಟಿತವಾಗುತ್ತಿದೆ. ಮನುಷ್ಯನ ಜೀವಿತಾವಧಿ 100 ಎಂದು ಮೊದಲು ಹೇಳಲಾಗುತ್ತಿದೆಯಾದರೂ , ಈಗ ಸರಾಸರಿ 65 ರಿಂದ 75 ರ ನಡುವೆ ಆಗಿದೆ. ಅಲ್ಲದೇ ಈಗ ಯುವಕರಲ್ಲಿ ಕಂಡು ಬರುತ್ತಿರುವ ಹೃದಯಾಘಾತದಿಂದ ಸಣ್ಣ ವಯಸ್ಸಿನಲ್ಲೇ ಸಾವನಪ್ಪುವವರ ಸಂಖ್ಯೆಯೂ ಹೆಚ್ಚಾಗಿದೆ. ಜಿಮ್ ಮತ್ತು ಸ್ಪೋರ್ಟ್ಸ್ನಲ್ಲಿ ಇರುವಾಗ ಹೃದಯಾಘಾತ ಆಗಿರುವ ಘಟನೆಗಳು ಮರುಕಳಿಸುತ್ತಿವೆ.
ಗುಜರಾತ್ನ ರಾಜ್ಕೋಟ್ನಲ್ಲಿ ಕ್ರಿಕೆಟ್ ಆಡುವ ವೇಳೆ 31 ವರ್ಷದ ಹಾರ್ದಿಕ್ ಚೌಹಾಣ್ ಎಂಬುವವರು ಮೈದಾನದಲ್ಲಿ ಕುಸಿದು ಬಿದ್ದು ಪ್ರಾಣ ಬಿಟ್ಟಿದ್ದಾರೆ. ಇಂಟರ್ ಪ್ರೆಸ್ ಕ್ರಿಕೆಟ್ ಟೂರ್ನಮೆಂಟ್ ಅಡಿಯಲ್ಲಿ ವಿವಿಧ ತಂಡಗಳ ನಡುವೆ ನಡೆಯುತ್ತಿದ್ದ ಪಂದ್ಯದಲ್ಲಿ ಈ ಘಟನೆ ಆಗಿದೆ. ಪಂದ್ಯದಲ್ಲಿ 18 ಎಸೆತದಲ್ಲಿ 30 ರನ್ ಗಳಿಸಿ ಕ್ರೀಸ್ನಲ್ಲಿದ್ದ ಹಾರ್ದಿಕ್ಗೆ ಎದೆಯಲ್ಲಿ ನೋವು ಕಾಣಿಸಿಕೊಂಡು, ಪ್ರಜ್ಞೆ ತಪ್ಪಿ ಪೀಲ್ಡ್ನಲ್ಲೇ ಬಿದ್ದಿದ್ದಾರೆ. ಕೂಡಕಲೇ ಅವರನ್ನು ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನವಾಗಲಿಲ್ಲ. ಹಾರ್ದಿಕ್ ಚೌಹಾಣ್ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಕ್ರಿಕೆಟ್ ಆಡುತ್ತಿದ್ದ ವೇಳೆ ಹೃದಯಾಘಾತ ಆದ ಮೂರನೇ ಘಟನೆ ಇದಾಗಿದೆ. ಕೆಲ ದಿನಗಳ ಹಿಂದೆ ರಾಜ್‌ಕೋಟ್‌ನ ಶಾಸ್ತ್ರಿ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ವೇಳೆ ಮತ್ತು ನಗರದ ಗಾಂಧಿಗ್ರಾಮ್ ಪ್ರದೇಶದ ಭಾರತಿ ನಗರದಲ್ಲಿ ವಾಸಿಸುತ್ತಿದ್ದ ಯುವಕ ಕೂಡ ಕ್ರಿಕೆಟ್ ಆಡಿದ ನಂತರ ಹೃದಯಾಘಾತಕ್ಕೆ ಒಳಗಾಗಿದ್ದರು.
ಈ ಘಟನೆಗೆ ಸಂಬಂಧಿಸಿದಂತೆ ರಾಜ್‌ಕೋಟ್‌ನ ಖ್ಯಾತ ಹೃದಯ ತಜ್ಞ ಡಾ.ರಾಜೇಶ್ ತೈಲಿ ಮಾತನಾಡಿ, "ಚಿಕ್ಕ ವಯಸ್ಸಿನಲ್ಲಿ ಹೃದಯಾಘಾತ ಮತ್ತು ಹಠಾತ್ ಸಾವಿಗೆ ನಮ್ಮ ಜೀವನಶೈಲಿ ಪ್ರಮುಖ ಕಾರಣವಾಗಿದೆ. ಅದರಲ್ಲಿ ಅತಿಯಾದ ಒತ್ತಡದ ಜೀವನ, ಅನಿಯಮಿತ ಆಹಾರ, ವೈವಿಧ್ಯಮಯ ಆಹಾರ ಪದ್ಧತಿಗಳು ಇದಕ್ಕೆ ಕಾರಣವಾಗಿವೆ" ಎಂದಿದ್ದಾರೆ.