ಮುಜಾಫರ್‌ಪುರ(ಬಿಹಾರ):ಯುವಕನೊಬ್ಬ ಅನಾರೋಗ್ಯದಿಂದ ರೈಲಿನಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ. ಹೌರಾದಿಂದ ಕಾಠಗೋದಾಮ್ಗೆ ಪ್ರಯಾಣಿಸುತ್ತಿದ್ದ 13019 ಸಂಖ್ಯೆಯ ಬಾಗ್ ಎಕ್ಸ್ಪ್ರೆಸ್ನಲ್ಲಿ ಈ ಘಟನೆ ಸಂಭವಿಸಿದೆ. ಮೃತ ಯುವಕನನ್ನು ಬಿಹಾರದ ಸರನ್ ಜಿಲ್ಲೆಯ ಜೈತ್‌ಪುರ ಗ್ರಾಮದ ನಿವಾಸಿ ದಿನೇಶ್ ಮಹತೋ (35) ಎಂದು ಗುರುತಿಸಲಾಗಿದೆ. ರೈಲಿನ ಮೂಲಕ ಮೃತದೇಹ ಮುಜಾಫರ್‌ಪುರ ತಲುಪಿದ ನಂತರ ಆತನ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ.
ಪ್ಲಾಸ್ಟಿಕ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕ: ಮಾಹಿತಿ ಪ್ರಕಾರ, ಯುವಕ ಪಶ್ಚಿಮಬಂಗಾಳದ ದುರ್ಗಾಪುರದ ಪ್ಲಾಸ್ಟಿಕ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಛತ್ ಹಬ್ಬದ ನಿಮಿತ್ತ ರಜೆ ಪಡೆದು ಮನೆಗೆ ತೆರಳುತ್ತಿದ್ದ. ದುರ್ಗಾಪುರದಲ್ಲಿ ಹೌರಾದಿಂದ ಕಾಠಗೋದಾಮ್ಗೆ ಹೋಗುವ 13019 ಸಂಖ್ಯೆಯ ಬಾಗ್ ಎಕ್ಸ್‌ಪ್ರೆಸ್‌ನ ಸಾಮಾನ್ಯ ಬೋಗಿಯಲ್ಲಿ ಹತ್ತಿದ್ದ. ಯುವಕ ಸರನ್ ಜಿಲ್ಲೆಯ ಎಕ್ಮಾ ನಿಲ್ದಾಣದಲ್ಲಿ ಇಳಿಯಬೇಕಾಗಿತ್ತು, ಆದರೆ ದುರಾದೃಷ್ಟವಶಾತ್ ಯುವಕ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ.
ಸಮಯಕ್ಕೆ ಸರಿಯಾಗಿ ಸಿಗದ ವೈದ್ಯರ ಚಿಕಿತ್ಸೆ: ಯುವಕನ ಜತೆಗೆ ದಿಗ್ವಾರ ಗ್ರಾಮದ ಕೌಶಲ್ ಕಿಶೋರ್ ಎಂಬುವವರು ಕೂಡ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಮಂಗಳವಾರ ರಾತ್ರಿ ದುರ್ಗಾಪುರದಲ್ಲಿ ಎಲ್ಲರೂ ಸಾಮಾನ್ಯ ಬೋಗಿಯ ಟಿಕೆಟ್‌ಗಳನ್ನು ತೆಗೆದುಕೊಂಡು ರೈಲು ಹತ್ತಿದ್ದರು. ಜನರಲ್ ಬೋಗಿಯಲ್ಲಿ ಸಾಕಷ್ಟು ಜನಸಂದಣಿ ಇತ್ತು. ಅಸನ್ಸೋಲ್ ಬರುತ್ತಿದ್ದಂತೆ ಯುವಕ ಅನಾರೋಗ್ಯಕ್ಕೆ ಒಳಗಾದಾಗ ಕೇವಲ ಎರಡು ನಿಲ್ದಾಣಗಳನ್ನು ಮಾತ್ರ ದಾಟಿದ್ದರು. ಯುವಕ ತೀವ್ರವಾಗಿ ನಡುಗಲು ಪ್ರಾರಂಭಿಸಿದ್ದ, ಈ ಕುರಿತು ರೈಲಿನ ಟಿಟಿಇಗೆ ಮಾಹಿತಿ ನೀಡಲಾಗಿದೆ ಎಂದು ಆತನ ಸ್ನೇಹಿತ ಹೇಳಿದ್ದಾರೆ. ಆದರೆ ಯುವಕನ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಲು ಯಾವ ವೈದ್ಯರು ಬರಲಿಲ್ಲ ಎಂದು ಅವರು ತಿಳಿಸಿದ್ದಾರೆ.