ನವದೆಹಲಿ: ವಿವಾದಾತ್ಮಕ ಮೂರು ಕೃಷಿ ಕಾನೂನುಗಳ ವಿರುದ್ಧ ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ 100 ದಿನಗಳನ್ನ ಪೂರೈಸಿ ಮುನ್ನುಗ್ಗುತ್ತಿದೆ. ಈ ಪ್ರತಿಭಟನೆಯ ಬಗ್ಗೆ ಜನರಿಗೆ ಅರಿವು ಮೂಡಿಸಲು ಯೂತ್ ಕಾಂಗ್ರೆಸ್ ನ ಇಬ್ಬರು ಸದಸ್ಯರು ಕರ್ನಾಟಕದಿಂದ ದೆಹಲಿವರೆಗೆ ಬೈಕ್‌ನಲ್ಲಿ ಸವಾರಿ ಮಾಡಿದ್ದಾರೆ.
ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಸಮಿತಿಯ ಇಬ್ಬರು ಯೂತ್ ಕಾಂಗ್ರೆಸ್ ಸದಸ್ಯರು ಬೈಕ್‌ನಲ್ಲಿ ಸುಮಾರು 3000 ಕಿಲೋಮೀಟರ್ ದೂರವನ್ನು ಕ್ರಮಿಸಿ ದೆಹಲಿಗೆ ಬಂದು ತಲುಪಿದ್ದಾರೆ. ತಮ್ಮ ಪ್ರಯಾಣದ ಸಮಯದಲ್ಲಿ, ಅವರು ರೈತರ ನಿರಂತರ ಆಂದೋಲನದ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯ ಮಾಡಿದ್ದಾರೆ.
ರೈತರ ಪ್ರತಿಭಟನೆಯ ಬಗ್ಗೆ ಜಾಗೃತಿ ಮೂಡಿಸಲು 3000 ಕಿ.ಮೀ. ಬೈಕ್‌ನಲ್ಲಿ ತೆರಳಿದ ಕರ್ನಾಟಕದ ಯುವಕರು ಯೂತ್ ಕಾಂಗ್ರೆಸ್ ಸದಸ್ಯ ಶಿವಸಾಗರ್ ತೇಜಸ್ವಿ ಮಾತನಾಡಿ, "ರೈತರು ಕಳೆದ 3 ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಈ ಸರ್ಕಾರವು ಅವರ ಬೇಡಿಕೆಗಳನ್ನು ಸ್ವೀಕರಿಸಲು ಸಿದ್ಧವಾಗಿಲ್ಲ. ಈ ರೈತರು ಏಕೆ ಪ್ರತಿಭಟನೆ ನಡೆಸುತಿದ್ದಾರೆ ಎಂದು ನಾವು ಜನರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಿದ್ದೇವೆ. ಅವರು ಮಾಡುತ್ತಿರುವುದು ಪ್ರತಿಭಟನೆ ಸಂಪೂರ್ಣವಾಗಿ ಸರಿಯಾಗಿದೆ. ನಾವೆಲ್ಲರೂ ಅವರನ್ನು ಬೆಂಬಲಿಸಲು ಮುಂದೆ ಬರಬೇಕು. ಅದಕ್ಕಾಗಿಯೇ ನಾವು ಸುಮಾರು 2800 - 3000 ಕಿ.ಮೀ ಬೈಕ್ ಸವಾರಿ ಮೂಲಕ ಇಲ್ಲಿಗೆ ಬಂದಿದ್ದೇವೆ. " ಎಂದರು
ಓದಿ : ಉಚಿತ ಕೊಡುಗೆಗಳ ರಾಜಕೀಯ: ತಮಿಳುನಾಡನ್ನು ಎತ್ತ ಕರೆದೊಯ್ಯಲಿದೆ?
ಈ ಯೂತ್ ಕಾಂಗ್ರೆಸ್ ಸದಸ್ಯರು ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಹರಿಯಾಣ ರಾಜ್ಯದ ಮೂಲಕ ದೆಹಲಿಯನ್ನ ತಲುಪಿದ್ದಾರೆ. ಈ ಮಧ್ಯೆ, ಅವರು ಮೂರು ಕೃಷಿ ಕಾನೂನುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಾ, ಈ ಮೂರು ಕಾನೂನುಗಳ ಬಗ್ಗೆ ಜನರ ಅಭಿಪ್ರಾಯಗಳೇನು ಎಂಬುದನ್ನ ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದಾರಂತೆ.