ನವದೆಹಲಿ: 370ನೇ ವಿಧಿಯಡಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ಕೇಂದ್ರ ಸರ್ಕಾರದ ಕ್ರಮ ಪ್ರಶ್ನಿಸಿದ ಅರ್ಜಿಗಳ ಮೇಲಿನ ವಿಚಾರಣೆ ಇಂದು (ಗುರುವಾರ) ಸುಪ್ರೀಂ ಕೋರ್ಟ್ನ ಸಂವಿಧಾನಿಕ ಪೀಠದಲ್ಲಿ ನಡೆಯಿತು.
ಕೇಂದ್ರದ ಪರವಾಗಿ ವಾದಗಳನ್ನು ಪ್ರಾರಂಭಿಸಿದ ಸಾಲಿಸಿಟರ್ ಜನರಲ್ (ಎಸ್ಜಿ) ತುಷಾರ್ ಮೆಹ್ತಾ, ಈ ವಿಷಯದಲ್ಲಿ ಸುಪ್ರೀಂ ಕೋರ್ಟ್ ಸಂವಿಧಾನ ಪೀಠ ನೀಡಲಿರುವ ತೀರ್ಪು ಐತಿಹಾಸಿಕವಾಗಿರಲಿದೆ ಮತ್ತು ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳ ಮನಸ್ಸಿನಲ್ಲಿರುವ 'ಮಾನಸಿಕ ದ್ವಂದ್ವ'ವನ್ನು ಕೊನೆಗೊಳಿಸುತ್ತದೆ ಎಂದು ಹೇಳಿದರು.
"ಸಂವಿಧಾನದ ಪ್ರಾರಂಭದಿಂದಲೂ, ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿದೆ. ಆದರೆ ಮಾನಸಿಕ ದ್ವಂದ್ವವು ಉಳಿದುಕೊಂಡಿದೆ. ಅದು ಪ್ರಚೋದಿಸಲ್ಪಟ್ಟ ಅಥವಾ ಬೇರೆ ರೀತಿಯಿಂದ ಹುಟ್ಟಿದ ಭಾವನೆಯಾಗಿರಬಹುದು, ಅದು ಸಂವಿಧಾನ ಪೀಠದ ತೀರ್ಪಿನಿಂದ ಕೊನೆಗೊಳ್ಳುತ್ತದೆ. ಒಟ್ಟಾರೆಯಾಗಿ ಆ ಸ್ಥಿತಿಯು ಕೊನೆಗೊಳ್ಳುತ್ತದೆ" ಎಂದು ಎಸ್ಜಿ ಮೆಹ್ತಾ ತಿಳಿಸಿದರು. ವಿಶೇಷ ಸ್ಥಾನಮಾನವು ತಾತ್ಕಾಲಿಕವೇ ಅಥವಾ ಶಾಶ್ವತವೇ ಎಂಬ ಬಗ್ಗೆ 370 ನೇ ವಿಧಿಯಲ್ಲಿನ ಸ್ವರೂಪದಿಂದ ಉಂಟಾಗುವ ಗೊಂದಲದಿಂದಾಗಿ ಈ 'ಮಾನಸಿಕ ದ್ವಂದ್ವ' ಉಂಟಾಗಿದೆ ಎಂದು ಅವರು ಹೇಳಿದರು.
ಕೇಂದ್ರದ ಕ್ರಮವನ್ನು ಸಮರ್ಥಿಸಿಕೊಂಡ ತುಷಾರ್ ಮೆಹ್ತಾ, 370 ನೇ ವಿಧಿಯು ಜಮ್ಮು ಮತ್ತು ಕಾಶ್ಮೀರದ ಜನರ ಅಭಿವೃದ್ಧಿಗೆ ಹಾನಿಕಾರಕವಾಗಿದೆ. ಇದರಿಂದಾಗಿ ಅವರು ಕೇಂದ್ರ ಸರ್ಕಾರದಿಂದ ಜಾರಿಯಾಗುವ ಕಲ್ಯಾಣ ಯೋಜನೆಗಳು ಮತ್ತು ಸಾಂವಿಧಾನಿಕ ಹಕ್ಕುಗಳಿಂದ ವಂಚಿತರಾಗಿದ್ದಾರೆ ಪೀಠಕ್ಕೆ ವಿವರಿಸಿದರು.
ಜಮ್ಮು ಮತ್ತು ಕಾಶ್ಮೀರದ ಜನರಿಗೆ ಮತ್ತಷ್ಟು ಹೆಚ್ಚಿನ ಮೂಲಭೂತ ಹಕ್ಕುಗಳು ಮತ್ತು ಇತರ ಹಕ್ಕುಗಳನ್ನು ನೀಡಲಾಗುವುದು. ಅವರು ಈಗ ಸಂಪೂರ್ಣವಾಗಿ ಭಾರತದ ಭಾಗವಾಗಲಿದ್ದಾರೆ. ಕಳೆದ 75 ವರ್ಷಗಳಿಂದ ಕಣಿವೆಯ ಜನರು ತಮ್ಮ ಸವಲತ್ತುಗಳಿಂದ ವಂಚಿತರಾಗಿದ್ದಾರೆ ಎಂದು ಮೆಹ್ತಾ ಹೇಳಿದರು. ಜಮ್ಮು ಮತ್ತು ಕಾಶ್ಮೀರವು 1939 ರಲ್ಲಿ ತನ್ನದೇ ಆದ ಸಂವಿಧಾನವನ್ನು ಹೊಂದಿರುವ ಏಕೈಕ ರಾಜ್ಯವಾಗಿತ್ತು, ಹೀಗಾಗಿ ಅದಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂಬ ಅರ್ಜಿದಾರರ ವಾದವನ್ನು ಎಸ್ ಜಿ ಮೆಹ್ತಾ ಪ್ರಶ್ನಿಸಿದರು. ಈ ವಾದವು ವಾಸ್ತವಿಕ ಆಂಶಗಳಿಂದ ಕೂಡಿಲ್ಲ ಎಂದರು.
62 ರಾಜ್ಯಗಳು ತಮ್ಮದೇ ಆದ ಸಂವಿಧಾನ ಹೊಂದಿದ್ದವು. ಇದನ್ನು ಸಂವಿಧಾನ ಅಥವಾ ಆಂತರಿಕ ಆಡಳಿತದ ಸಾಧನ ಎಂದು ಹೇಳಲಾಗಿತ್ತು. ಅಲ್ಲದೆ ಇನ್ನೂ 286 ರಾಜ್ಯಗಳು 1930 ರ ದಶಕದ ಉತ್ತರಾರ್ಧದಲ್ಲಿ ತಮ್ಮ ಸಂವಿಧಾನವನ್ನು ರೂಪಿಸುವ ಪ್ರಕ್ರಿಯೆಯಲ್ಲಿದ್ದವು. ಆದರೆ ವಿಲೀನ ಪೂರ್ಣಗೊಂಡ ನಂತರ, ರಾಜ್ಯದ ಸಾರ್ವಭೌಮತ್ವವು ಕಳೆದುಹೋಗುತ್ತದೆ ಮತ್ತು ಭಾರತ ಸರ್ಕಾರ ಕಾಯ್ದೆ, 1935 ರ ನಿಬಂಧನೆಗಳು ಜಾರಿಯಾದಾಗ ಅದು ದೊಡ್ಡ ಸಾರ್ವಭೌಮತ್ವಕ್ಕೆ ಸೇರುತ್ತದೆ ಎಂದರು.
"ವಾಸ್ತವವಾಗಿ, ಅವುಗಳಲ್ಲಿ ಕೆಲವು (ರಾಜಪ್ರಭುತ್ವದ ರಾಜ್ಯಗಳು) ತಮ್ಮ ಸಂವಿಧಾನಗಳನ್ನು ರಚಿಸಿದ್ದವು ಮತ್ತು ನಂತರ ತಕ್ಷಣವೇ ಸೇರ್ಪಡೆಗೆ ಸಹಿ ಹಾಕಿದವು. ಕರಡು ಸೇರ್ಪಡೆ ಒಪ್ಪಂದವು ಎಲ್ಲರಿಗೂ ಸಾಮಾನ್ಯವಾಗಿತ್ತು. ಎಲ್ಲರೂ ಒಂದೇ ಕರಡಿಗೆ ಸಹಿ ಹಾಕಿದರು" ಎಂದು ಅವರು ಸುಪ್ರೀಂ ಕೋರ್ಟ್ ಮುಂದೆ ವಾದಿಸಿದರು.
ಭಾರತದ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ 5 ನ್ಯಾಯಾಧೀಶರ ಸಂವಿಧಾನ ಪೀಠವು ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ನೀಡಲಾದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕುವ ಮತ್ತು ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ 2019 ರ ರಾಷ್ಟ್ರಪತಿ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸುತ್ತಿದೆ. ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಬಿ.ಆರ್.ಗವಾಯಿ ಮತ್ತು ಸೂರ್ಯಕಾಂತ್ ಅವರನ್ನೊಳಗೊಂಡ ಸಾಂವಿಧಾನಿಕ ಪೀಠವು ಆಗಸ್ಟ್ 28 ರಂದು ಈ ವಿಷಯದ ವಿಚಾರಣೆಯನ್ನು ಮುಂದುವರಿಸಲಿದೆ.
ಇದನ್ನೂ ಓದಿ : ಸಣ್ಣ ಮೊತ್ತದ ಆಫ್ಲೈನ್ ಡಿಜಿಟಲ್ ಪೇಮೆಂಟ್ ಮಿತಿ 500 ರೂ.ಗೆ ಹೆಚ್ಚಳ