ಕರ್ನಾಟಕ

karnataka

ETV Bharat / bharat

ವ್ಯಾಸಂಗಕ್ಕೆ ಲಂಡನ್​ಗೆ ತೆರಳಿದ್ದ ಹೈದರಾಬಾದ್​ ಯುವತಿಯ ಕೊಂದ ಬ್ರೆಜಿಲ್​ ಯುವಕ - ರಾಜ್ಯ ಸರ್ಕಾರಕ್ಕೆ ಮನವಿ

ಕೆಲವು ವರ್ಷಗಳಿಂದ ಒಂದೇ ಫ್ಲ್ಯಾಟ್​ನಲ್ಲಿ ಸ್ನೇಹಿತನಂತೆ ಇದ್ದ ಯುವಕನೇ ತೇಜಸ್ವಿನಿಯನ್ನು ಚೂರಿಯಿಂದ ಚುಚ್ಚಿ ಕೊಲೆ ಮಾಡಿದ್ದಾನೆ.

Tejaswini Reddy
ಹೈದರಾಬಾದ್ ಯುವತಿ ತೇಜಸ್ವಿನಿ ರೆಡ್ಡಿ

By

Published : Jun 14, 2023, 6:51 PM IST

ಹೈದರಾಬಾದ್​:ಉನ್ನತ ವ್ಯಾಸಂಗಕ್ಕಾಗಿ ಲಂಡನ್‌ಗೆ ತೆರಳಿದ್ದ ತೆಲುಗು ನಾಡಿನ ಯುವತಿ ಮೇಲೆ ವಿದೇಶಿ ಯುವಕನೊಬ್ಬ ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಈ ಘಟನೆಯಲ್ಲಿ ಯುವತಿ ಸಾವನ್ನಪ್ಪಿದ್ದು, ಆಕೆಯನ್ನು ಕಾಪಾಡಲೆಂದು ಮುಂದೆ ಹೋದ ಆಕೆಯ ಸ್ನೇಹಿತೆ ಗಂಭೀರವಾಗಿ ಗಾಯಗೊಂಡಿದ್ದಾರೆ.

ಕುಟುಂಬಸ್ಥರ ನೀಡಿರುವ ಮಾಹಿತಿ ಪ್ರಕಾರ, ರಂಗಾರೆಡ್ಡಿ ಜಿಲ್ಲೆಯ ಬ್ರಾಹ್ಮಣಪಲ್ಲಿಯ ತೇಜಸ್ವಿನಿ ರೆಡ್ಡಿ (27) ಮೂರು ವರ್ಷಗಳ ಹಿಂದೆ ಎಂಎಸ್ ಮಾಡಲು ಲಂಡನ್‌ಗೆ ಹೋಗಿದ್ದರು. ಎರಡು ತಿಂಗಳ ಹಿಂದೆ ಕೋರ್ಸ್ ಮುಗಿದಿದ್ದು, ಕಳೆದ ತಿಂಗಳು ಯುವತಿ ಮನೆಗೆ ಮರಳಬೇಕಿತ್ತು. ಕಾರಣಾಂತರಗಳಿಂದ ಆಕೆ ಬರಲಾಗಲಿಲ್ಲ. ಈ ತಿಂಗಳ ಕೊನೆಯ ವಾರದಲ್ಲಿ ಭಾರತಕ್ಕೆ ಆಗಮಿಸಲು ಎಲ್ಲಾ ತಯಾರಿಯೂ ಆಗಿತ್ತು.

ತೇಜಸ್ವಿನಿ ಲಂಡನ್‌ನಲ್ಲಿ ತನ್ನ ಸ್ನೇಹಿತರೊಂದಿಗೆ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದರು. ಫ್ಲ್ಯಾಟ್​ನಲ್ಲಿ ಹುಡುಗಿಯರು ಮತ್ತು ಹುಡುಗರು ಒಟ್ಟಿಗೆ ವಾಸಿಸುತ್ತಿದ್ದರು. ಅವರ ಫ್ಲಾಟ್‌ಮೇಟ್‌ಗಳಲ್ಲಿ ಬ್ರೆಜಿಲ್‌ನ ಯುವಕನೂ ಇದ್ದ. ಇಷ್ಟು ವರ್ಷಗಳ ಕಾಲ ಎಲ್ಲರೂ ಒಟ್ಟಿಗೆ ಇದ್ದರು, ಜೊತೆಗೆ ಎಲ್ಲವೂ ಚೆನ್ನಾಗಿಯೇ ಇತ್ತು. ಇದ್ದಕ್ಕಿದ್ದಂತೆ ಏನಾಯ್ತೋ ಗೊತ್ತಿಲ್ಲ, ತೇಜಸ್ವಿನಿ ಮೇಲೆ ಬ್ರೆಜಿಲ್ ಯುವಕನೊಬ್ಬ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಈ ದಾಳಿಯಲ್ಲಿ ತೇಜಸ್ವಿನಿ ಸಾವನ್ನಪ್ಪಿದ್ದು, ಆಕೆಯನ್ನು ಕಾಪಾಡಲೆಂದು ಮುಂದಾದ ಆಕೆಯ ಸ್ನೇಹಿತೆಯ ಮೇಲೂ ಹಲ್ಲೆ ನಡೆಸಿದ್ದು, ಆಕೆ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಅಲ್ಲಿನ ಪೊಲೀಸರು ಸ್ಥಳಕ್ಕಾಗಮಿಸಿದ್ದು, ಬ್ರೆಜಿಲ್ ಯುವಕನನ್ನು ಬಂಧಿಸಿದ್ದಾರೆ.

ತೇಜಸ್ವಿನಿ ಸಾವಿನ ಸುದ್ದಿ ತಿಳಿದು ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಇನ್ನು 15 ದಿನಗಳಲ್ಲಿ ಮಗಳು ಭಾರತಕ್ಕೆ ಬರುತ್ತಾಳೆ ಎಂದು ಕಾತರದಿಂದ ಕಾಯುತ್ತಿದ್ದೆವು ಎಂದು ಮನದಲ್ಲೇ ಬೇಸರ ವ್ಯಕ್ತಪಡಿಸಿದ್ದಾರೆ. ಮಗಳ ಮೃತದೇಹವನ್ನು ಆದಷ್ಟು ಬೇಗ ಭಾರತಕ್ಕೆ ತರುವಂತೆ ತೇಜಸ್ವಿನಿ ಪೋಷಕರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಅಮೆರಿಕದಲ್ಲಿ ಗುಂಡಿನ ದಾಳಿಗೆ ಹೈದರಾಬಾದ್​ ಮೂಲದ ಟೆಕ್ಕಿ ಬಲಿ: ಕಳೆದ ತಿಂಗಳು ಅಮೆರಿಕದ ಟೆಕ್ಸಾಸ್​ನಲ್ಲಿ ನಡೆದಿದ್ದ ಗುಂಡಿನ ದಾಳಿಯಲ್ಲಿ ಹೈದರಾಬಾದ್​ ಮೂಲದ ಟೆಕ್ಕಿ ಐಶ್ವರ್ಯಾ ಎನ್ನುವವರು ಸಾವನ್ನಪ್ಪಿದ್ದರು. ಟೆಕ್ಸಾಸ್​ನ ಅಲೆನ್​ ಪ್ರೀಮಿಯರ್​ ಶಾಪಿಂಗ್​ ಕಾಂಪ್ಲೆಕ್ಸ್​ನಲ್ಲಿ ಹೈದರಾಬಾದ್​ನ ತಾತಿಕೊಂಡದ ಐಶ್ವರ್ಯಾ ಶಾಪಿಂಗ್​ ಮಾಡುತ್ತಿದ್ದ ವೇಳೆ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದನು. ಆ ಗುಂಡಿನ ದಾಳಿಯಲ್ಲಿ ಐಶ್ವರ್ಯಾ ಅವರು ಸೇರಿದಂತೆ 8 ಮಂದಿ ಸಾವನ್ನಪ್ಪಿದ್ದರು. ಹಾಗೂ ಇತರ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.

ಐಶ್ವರ್ಯ ರಂಗಾರೆಡ್ಡಿ ಜಿಲ್ಲೆಯ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ನರಸಿರೆಡ್ಡಿ ಅವರ ಪುತ್ರಿಯಾಗಿದ್ದು, ಬೆರಳಚ್ಚು ಆಧಾರದ ಮೇಲೆ ಐಶ್ವರ್ಯಾ ಅವರನ್ನು ಗುರುತಿಸಲಾಗಿತ್ತು. ಹೈದರಾಬಾದ್​ನಲ್ಲಿ ಇಂಜಿನಿಯರಿಂಗ್​ ಓದಿದ್ದ ಐಶ್ವರ್ಯಾ ಅವರು ಮಿಚಿಗನ್​ ವಿಶ್ವವಿದ್ಯಾಲಯದಲ್ಲಿ ನಿರ್ಮಾಣ ನಿರ್ವಹಣ ಕೋರ್ಸ್​ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಪರ್ಫೆಕ್ಟ್​ ಜನರಲ್​ ಕಾಂಟ್ರ್ಯಾಕ್ಟ್​ ಕಂಪನಿಯಲ್ಲಿ ಸಿವಿಲ್​ ಇಂಜಿನಿಯರ್​ ಆಗಿ ಸೇರಿದ್ದ ಐಶ್ವರ್ಯಾ ಅವರು ಇತ್ತೀಚೆಗಷ್ಟೇ ಪ್ರಾಜೆಕ್ಟ್​ ಮ್ಯಾನೇಜರ್​ ಆಗಿ ಬಡ್ತಿ ಪಡೆದಿದ್ದರು.

ಇದನ್ನೂ ಓದಿ:ಮಾದಕ ದ್ರವ್ಯ ಮಾರಾಟ ಯತ್ನ; ಹೈದರಾಬಾದ್‌ನಲ್ಲಿ ತೆಲುಗು ಚಿತ್ರ ನಿರ್ಮಾಪಕ ಅರೆಸ್ಟ್

ABOUT THE AUTHOR

...view details