ಮಧೆಪುರ:ಪ್ರೀತಿಸಿ ಮದುವೆಯಾದ ಯುವಕನ ಮೇಲೆ ಕೆಲ ಗ್ರಾಮಸ್ಥರು ಅಮಾನವೀಯವಾಗಿ ನಡೆದುಕೊಂಡಿದಲ್ಲದೇ ಕಂಬಕ್ಕೆ ಕಟ್ಟಿ ಥಳಿಸಿರುವ ಘಟನೆ ಇಲ್ಲಿನ ಪುರೈನಿ ಗ್ರಾಮದಲ್ಲಿ ನಡೆದಿದೆ.
ಕುಮಾರ್ಖಂಡ್ ಪೊಲೀಸ್ ಠಾಣಾ ವ್ಯಾಪ್ತಿಯ ಪುರೈನಿ ಗ್ರಾಮದ ಯುವಕ ಬದ್ರುದ್ದೀನ್ ಮೂರು ವರ್ಷಗಳ ಹಿಂದೆ ಇಜಾಜುಲ್ ಹಕ್ ಅಲಿಯಾಸ್ ಪನ್ನಾ ಕುಟುಂಬದ ಹುಡುಗಿಯೊಬ್ಬಳೊಂದಿಗೆ ಪ್ರೇಮ ವಿವಾಹವಾಗಿದ್ದ. ಅಂದಿನಿಂದ ಅವನಿಗೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗುತ್ತಿತ್ತು. ಈ ಬಗ್ಗೆ ಬದ್ರುದ್ದೀನ್ 20 ದಿನಗಳ ಹಿಂದೆ ಪೊಲೀಸರಿಗೆ ದೂರು ನೀಡಿದ್ದ. ಆದ್ರೂ ಸಹ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎನ್ನಲಾಗಿದೆ.
ಪ್ರೀತಿಸಿ ಮದುವೆಯಾದ ಯುವಕನಿಗೆ ಬಿಸಿ ನೀರು ಎರಚಿ, ಥಳಿಸಿ, ಮೂತ್ರ ಕುಡಿಸಲು ಯತ್ನಿಸಿದ ಯುವತಿ ಕುಟುಂಬಸ್ಥರು ಪೊಲೀಸರ ಸಡಿಲತೆ ನೋಡಿ ಇಜಾಜುಲ್ ಹಕ್ ಮತ್ತು ಆತನ ಸಹಚರರು ಮಂಗಳವಾರ ಮುಂಜಾನೆ ಬದ್ರುದ್ದೀನ್ನನ್ನು ತಮ್ಮ ಮನೆಗೆ ಕರೆದೊಯ್ದರು. ಬಳಿಕ ಆತನ ಕೈ-ಕಾಲುಗಳನ್ನು ಕಂಬಕ್ಕೆ ಕಟ್ಟಿ 30ರಿಂದ 40 ಜನ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಗಂಭೀರವಾಗಿ ಹಲ್ಲೆಗೊಳಗಾಗಿದ್ದ ಬದ್ರುದ್ದೀನ್ ಕುಡಿಯಲು ನೀರು ಕೇಳಿದ್ದಾನೆ. ಈ ವೇಳೆ ಯುವತಿ ಕುಟುಂಬಸ್ಥರು ಆತನಿಗೆ ಮೂತ್ರ ಕುಡಿಸಲು ಪ್ರಯತ್ನಿಸಿದ್ದಾರೆ. ಇದಕ್ಕೆ ನಿರಾಕರಿಸಿದ್ದಕ್ಕೆ ಆತನ ದೇಹದ ಮೇಲೆ ಕುದಿಯುವ ನೀರನ್ನು ಎರಚಿ ದರ್ಪ ತೋರಿದ್ದಾರೆ. ಬಳಿಕ ತೀವ್ರವಾಗಿ ಗಾಯಗೊಂಡಿದ್ದರಿಂದ ಬದ್ರುದ್ದೀನ್ನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದಾದ ನಂತರ ಇಜಾಜುಲ್ ಹಕ್ ಬೆಂಬಲಿಗರು ಬದ್ರುದ್ದೀನ್ ಮನೆಯ ಮೇಲೆ ಹಲ್ಲೆ ನಡೆಸಿದ್ದಾರೆ.
ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಬದ್ರುದ್ದೀನ್ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಧೆಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಡಿಯೋ ವೈರಲ್ ಆದ ನಂತರ ಪ್ರಕರಣ ಬೆಳಕಿಗೆ ಬಂದಿದ್ದು, ಈ ಬಗ್ಗೆ ತನಿಖೆ ಕೈಗೊಳ್ಳಲಾಗುವುದು. ಬಳಿಕ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಎಸ್ಪಿ ಯೋಗೇಂದ್ರ ಕುಮಾರ್ ತಿಳಿಸಿದ್ದಾರೆ.