ತೆಲಂಗಾಣ/ ಮೆಡ್ಚಲ್:ಸಾಲ ತೀರಿಸಲು ಕೇವಲ 2 ಸಾವಿರ ರೂ. ಹಣವನ್ನು ಯಾರೂ ಕೊಡದೇ ಹೋಗಿದ್ದಕ್ಕೆ ಬೇಸರಗೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಮೆಡ್ಚಲ್ ಜಿಲ್ಲೆಯ ಶಮೀರ್‌ಪೇಟೆ ಮಂಡಲದ ಪೊನ್ನಾಲದಲ್ಲಿ ನಡೆದಿದೆ.
ಮರ್ಯಾಲ ಆನಂದ್(23) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ತರ್ಕಪಲ್ಲಿಯ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. 3 ತಿಂಗಳ ಹಿಂದೆ ಆನಂದ್ ಸಿದ್ದಿಪೇಟೆ ಜಿಲ್ಲೆಯ ಗಜವೇಲ್ ಮಂಡಲದ ಕುಂಚೇರುಕಲಿಯಿಂದ (ಮೈಕ್ರೋ ಫೈನಾನ್ಸ್) 10,000 ರೂ. ಸಾಲ ಪಡೆದಿದ್ದರು.
ಅ.22 ರಂದು ಆನಂದ್ ಮನೆಗೆ ಫೈನಾನ್ಸ್ನ ಓರ್ವ ಮಹಿಳೆ ಮತ್ತು 5 ಮಂದಿ ಇತರರು ಭೇಟಿ ನೀಡಿ ಸಾಲ ನೀಡುವಂತೆ ಆನಂದ್ ಮೇಲೆ ಒತ್ತಡ ಹೇರಿದ್ದರು. ಕನಿಷ್ಠ 2,000 ರೂ. ಪಾವತಿಸಿದರೆ ಹೊಸ ಡಾಕ್ಯುಮೆಂಟ್ ಮಾಡುವುದಾಗಿ ಒತ್ತಾಯಿಸಿದ್ದರು.
ಈ ವೇಳೆ ಆನಂದ್ ತನಗೆ ಪರಿಚಯವಿರುವ ಎಲ್ಲರ ಬಳಿ ಹಣ ಕೇಳಿದ್ದಾರೆ. ಆದರೆ ಯಾರೂ ಕೊಟ್ಟಿಲ್ಲ. ಇತ್ತ ಫೈನಾನ್ಸ್ ಕಂಪನಿಯವರು ಹಣ ನೀಡುವವರೆಗೂ ಹೋಗಲ್ಲ ಎಂದು ಆನಂದ್ ಮನೆಯಲ್ಲೆ ಕುಳಿತಿದ್ದಾರೆ. ಯಾರೋ ಆನಂದ್ಗೆ 1000 ರೂ ಹಣ ನೀಡಿದ್ದು, ಆ ಹಣದಲ್ಲಿ ಆನಂದ್ ಫೈನಾನ್ಸ್ ಕಂಪನಿಯವರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ.
ನಂತರ ಅವರು ಹೊಸ ಡಾಕ್ಯುಮೆಂಟ್ ಬರೆದುಕೊಂಡು ತೆರಳಿದ್ದಾರೆ. ಇತ್ತ ಆನಂದ್ ತನಗೆ ಯಾರೂ 2000 ರೂಪಾಯಿ ನೀಡಲಿಲ್ಲವಲ್ಲ ಎಂದು ಮನನೊಂದು ತನ್ನ ರೂಮಿಗೆ ಬಂದು ಫ್ಯಾನ್ಗೆ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಆನಂದ್ ಕುಟುಂಬಸ್ಥರು ಶಮೀರ್‌ಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.