ಹೈದರಾಬಾದ್ (ತೆಲಂಗಾಣ):ಜೂಜು, ಕುಡಿತ ಮನೆಹಾಳು ಮಾಡುತ್ತದೆ ಎಂದು ಗೊತ್ತಿದ್ದರೂ ಅವುಗಳ ಚಟಕ್ಕೆ ಬಿದ್ದು ನಾಶವಾದ ಅದೆಷ್ಟೋ ಸುದ್ದಿ ನೋಡಿದ್ದೇವೆ. ಅದೇ ತೆರನಾದ ಮತ್ತೊಂದು ಘಟನೆ ತೆಲಂಗಾಣದಿಂದ ವರದಿಯಾಗಿದೆ. ಸರ್ಕಾರಕ್ಕೆ ಭೂಮಿ ನೀಡಿ ಬಂದ ಪರಿಹಾರದ 92 ಲಕ್ಷ ಹಣವನ್ನು ಮಗನೊಬ್ಬ ಆನ್ಲೈನ್ ಕ್ಯಾಸಿನೋದಲ್ಲಿ ಕಳೆದುಕೊಂಡು, ಕುಟುಂಬವನ್ನು ಬೀದಿಗೆ ತಂದಿದ್ದಾನೆ.
ರಂಗಾರೆಡ್ಡಿ ಜಿಲ್ಲೆಯ ಸೀತಾರಾಮಪುರಂ ಗ್ರಾಮದ ಹರ್ಷವರ್ಧನ್ ರೆಡ್ಡಿ ಜೂಜಿನಲ್ಲಿ ಹಣ ಕಳೆದುಕೊಂಡವ. ಕೃಷಿ ಕುಟುಂಬದ ಹಿನ್ನೆಲೆಯ ಈತ ಪದವಿ ವ್ಯಾಸಂಗ ಮಾಡುತ್ತಿದ್ದಾನೆ. ತಂದೆ ಶ್ರೀನಿವಾಸ್ರೆಡ್ಡಿ ಅವರಿಗೆ ಗ್ರಾಮದಲ್ಲಿ 10 ಎಕರೆ ಜಮೀನಿತ್ತು. ಇತ್ತೀಚೆಗೆ ಸರ್ಕಾರ ಆ ಜಮೀನನ್ನು ಟಿಎಸ್‌ಐಐಸಿಗೆ ಹಸ್ತಾಂತರಿಸಿದೆ. ಭೂಸ್ವಾಧೀನದಡಿ ಎಕರೆಗೆ 10.5 ಲಕ್ಷ ರೂಪಾಯಿಯಂತೆ ಒಟ್ಟಾರೆ 1.05 ಕೋಟಿ ರೂಪಾಯಿ ಪರಿಹಾರ ನೀಡಿದೆ.
ಬಂದ ಹಣದಲ್ಲಿ ತಂದೆ ಮತ್ತೊಂದೆಡೆ ಜಮೀನು ತೆಗೆದುಕೊಳ್ಳಲು 70 ಲಕ್ಷ ರೂಪಾಯಿಗೆ ವ್ಯಾಪಾರ ಕುದುರಿಸಿದ್ದರು. ಮುಂಗಡವಾಗಿ 20 ಲಕ್ಷ ರೂ. ನೀಡಲಾಗಿತ್ತು. ಉಳಿದ 85 ಲಕ್ಷ ರೂಪಾಯಿಯನ್ನು ತಂದೆ- ತಾಯಿ ಖಾತೆಗೆ ವರ್ಗಾಯಿಸಿಕೊಂಡಿದ್ದರು.