ಕೊಲ್ಲಾಪುರ(ಮಹಾರಾಷ್ಟ್ರ): ಕೊಲ್ಲಾಪುರ ಜಿಲ್ಲಾ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ ಹಾಗೂ ಸ್ತ್ರೀರೋಗ ತಜ್ಞ ಡಾ. ಪ್ರವೀಣ್ ಚಂದ್ರ ಹೆಂಡ್ರೆ ಅವರ 30 ವರ್ಷದ ಪುತ್ರಿಯ ಮೃತದೇಹ ಭಾನುವಾರ ಫುಟ್ಪಾತ್ ಮೇಲೆ ಸಿಕ್ಕಿದೆ. ಕೈಗೆ ಇಂಜೆಕ್ಷನ್ ಸಿಕ್ಕಿ ಹಾಕಿಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಮೃತರನ್ನು ತಾರಾಬಾಯಿ ಪಾರ್ಕ್ ನಿವಾಸಿ ವೈದ್ಯೆ ಅಪೂರ್ವ ಪ್ರವೀಣ್ ಚಂದ್ರ ಹೆಂಡ್ರೆ ಎಂದು ಗುರುತಿಸಲಾಗಿದೆ. ಅಪೂರ್ವ ಹೆಂಡ್ರೆ ಶಸ್ತ್ರಚಿಕಿತ್ಸಕರಾಗಿದ್ದು, ನಗರದ ಆಸ್ಪತ್ರೆಯೊಂದರಲ್ಲಿ ಪ್ರಾಕ್ಟಿಸ್ ಮಾಡುತ್ತಿದ್ದರು. ರಾತ್ರಿ ಕಾರ್ಯಕ್ರಮವೊಂದಕ್ಕೆ ಹೋಗಿದ್ದ ಅವರು ತಡವಾಗಿ ಮನೆಗೆ ಮರಳಿದ್ದರು. ಸ್ವಲ್ಪ ಸಮಯದ ನಂತರ ಅಪೂರ್ವ ಮತ್ತೆ ಮನೆಯಿಂದ ಹೊರ ಹೋಗಿದ್ದಾರೆ. ಈ ವೇಳೆ ಹೊರಗಿನಿಂದ ಲಾಕ್ ಮಾಡಿದ್ದರು.
ಓದಿ:ಕೊಪ್ಪಳದಲ್ಲಿ ರೈಲಿಗೆ ಸಿಲುಕಿ ಮೆಡಿಕಲ್ ವಿದ್ಯಾರ್ಥಿನಿ ಆತ್ಮಹತ್ಯೆ
ಮನೆಯಿಂದ ಹೊರ ಹೋದ ಅಪೂರ್ವ ಮೇಲೆ ಪೋಷಕರಿಗೆ ಅನುಮಾನ ಬಂದಿದ್ದು, ಹೊರ ಹೋಗಲು ಯತ್ನಿಸಿದಾಗ ಬಾಗಿಲು ಮುಚ್ಚಿತ್ತು. ಹಿಂಬಾಗಿಲಿನಿಂದ ಹೊರಗೆ ಹೋಗಿ ಅಪೂರ್ವಳನ್ನು ಹುಡುಕಿದ್ದಾರೆ. ಆದರೆ ಅವರು ಎಲ್ಲಿಯೂ ಪತ್ತೆಯಾಗಲಿಲ್ಲ.
ಈ ಬಗ್ಗೆ ಬೆಳಗ್ಗೆ ಶಾಹುಪುರಿ ಪೊಲೀಸ್ ಠಾಣೆಗೆ ಡಾ. ಪ್ರವೀಣ್ ಚಂದ್ರ ಹೆಂಡ್ರೆ ದೂರು ನೀಡಲು ತೆರಳುತ್ತಿದ್ದಾಗ ಕಾಲ್ ಬಂದಿದೆ. ಡಿ ಮಾರ್ಟ್ ಪ್ರದೇಶದ ಪಾದಚಾರಿ ಮಾರ್ಗದಲ್ಲಿ ನಿಮ್ಮ ಮಗಳು ಬಿದ್ದಿದ್ದಾರೆ ಎಂದು ಪ್ರವೀಣ್ ಚಂದ್ರರಿಗೆ ಮಾಹಿತಿ ಸಿಕ್ಕಿದೆ. ಕೂಡಲೇ ಅವರು ಸ್ಥಳಕ್ಕೆ ಧಾವಿಸಿದರು. ಆಗ ಅಪೂರ್ವ ಕೈಗೆ ಇಂಜೆಕ್ಷನ್ ಸಿಕ್ಕಿ ಹಾಕಿಕೊಂಡಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ಸಿಪಿಆರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡುವ ಮುನ್ನವೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಅಪೂರ್ವ ಅವರ ಪರ್ಸ್‌ನಲ್ಲಿ ಔಷಧಿಯ ಬಾಟಲಿ ಮತ್ತು ಎರಡು ಇಂಜೆಕ್ಷನ್‌ಗಳು ಪತ್ತೆಯಾಗಿವೆ. ಅಪೂರ್ವ ಸಾವಿನ ಬಗ್ಗೆ ಅನುಮಾನಗಳು ಮೂಡಿದ್ದು, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.