ನವದೆಹಲಿ: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ತಮ್ಮ ಪುತ್ರ ರಾಹುಲ್ ಗಾಂಧಿಗೆ ಮದುವೆ ಮಾಡುವ ಮನಸ್ಸು ಮಾಡಿದ್ದು, ತಕ್ಕ ಹುಡುಗಿಯನ್ನು ಹುಡುಕಿಕೊಡುವಂತೆ ತಮ್ಮನ್ನು ಭೇಟಿಯಾದ ರೈತ ಮಹಿಳೆಯರ ಬಳಿ ಹೇಳಿಕೊಂಡಿದ್ದಾರೆ. ಶನಿವಾರ ಹರಿಯಾಣದ ಇಬ್ಬರು ಮಹಿಳಾ ರೈತರೊಂದಿಗೆ ಕೆಲವು ಅಮೂಲ್ಯವಾದ ಸಮಯ ಕಳೆದ ಕಳೆದ ಸೋನಿಯಾ ಗಾಂಧಿ ಅವರು ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಹರ್ಯಾಣದ ಸೋನೆಪತ್ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ರೈತರಿಗೆ ಔತಣಕೂಟ ನೀಡುವುದಾಗಿ ರಾಹುಲ್ ಗಾಂಧಿ ಭರವಸೆ ನೀಡಿದ್ದರು. ಈ ಭರವಸೆಯನ್ನು ಈಡೇರಿಸುವ ಸಲುವಾಗಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ, ಜಿಲ್ಲೆಯ ಕೆಲ ರೈತ ಮಹಿಳೆಯರನ್ನು ತಮ್ಮ ನಿವಾಸಕ್ಕೆ ಊಟಕ್ಕೆ ಆಹ್ವಾನಿಸಿದ್ದರು.
ಆಹ್ವಾನಿತ ಮಹಿಳೆಯರು, ಸೋನಿಯಾ ಗಾಂಧಿ ಅವರನ್ನು ಭೇಟಿಯಾದ ವೇಳೆ ರಾಹುಲ್ ಗಾಂಧಿ ಮದುವೆ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಅವರ ಮಾತಿಗೆ ಸೋನಿಯಾ ಗಾಂಧಿ ‘ನೀವು ಅವರಿಗೆ ಸೂಕ್ತ ಹುಡುಗಿಯನ್ನು ಹುಡುಕಿಕೊಡಿ’ ಎಂದು ಲಘುವಾಗಿಯೇ ಕೇಳಿಕೊಂಡಿದ್ದಾರೆ. ಅಲ್ಲೇ ನಿಂತು ಈ ಸಂಭಾಷಣೆಯನ್ನು ಕೇಳುತ್ತಿದ್ದ ರಾಹುಲ್, 'ಅದು ಆಗುತ್ತೆ...' ಎಂದು ನಸುನಗುತ್ತಲೇ ಹೇಳಿದ್ದಾರೆ. ಈ ವೇಳೆ ಅಲ್ಲಿದ್ದ ರೈತ ಮಹಿಳೆಯೊಬ್ಬರು ರಾಹುಲ್ ಗಾಂಧಿಗೆ ತಮ್ಮ ಕೈತುತ್ತು ನೀಡಿದ್ದಾರೆ. ಈ ಚರ್ಚೆ ವೇಳೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ರಾಹುಲ್ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಹಾಜರಿದ್ದರು.
ರೈತ ಮಹಿಳೆಯ ಜೊತೆ ದನಿಗೂಡಿಸಿದ ಪ್ರಿಯಾಂಕಾ ಗಾಂಧಿ "ರಾಹುಲ್ ಗಾಂಧಿ ಬಾಲ್ಯದಲ್ಲಿ ನನಗಿಂತ ಹೆಚ್ಚು ಕಿಡಿಗೇಡಿಯಾಗಿದ್ದರು. ಆದರೂ, ನಾನು ಅವರನ್ನು ಹೆಚ್ಚು ಕಾಡಿದ್ದೇನೆ" ಎಂದು ಕೆಲವು ಹಳೆಯ ಘಟನಾವಳಿಗಳನ್ನು ಮೆಲುಕು ಹಾಕಿದರು.
ಸೋನಿಪತ್‌ನ ಮದೀನಾ ಗ್ರಾಮಕ್ಕೆ ತೆರಳಿದ್ದ ರಾಹುಲ್: ಇತ್ತೀಚೆಗೆ (ಜುಲೈ 8ರಂದು) ರಾಹುಲ್ ಗಾಂಧಿ ದಿಢೀರ್ ಸೋನಾಪತ್ನ ಮದೀನಾ ಗ್ರಾಮಕ್ಕೆ ತೆರಳಿದ್ದರು. ಗ್ರಾಮದ ಜನರೊಂದಿಗೆ ಕೆಲಕಾಲ ಸಂವಾದ ನಡೆಸಿದ್ದ ಅವರು, ಬಳಿಕ ಅಲ್ಲಿಯೇ ಸಮೀಪದ ಭತ್ತದ ಗದ್ದೆಗೆ ತೆರಳಿದ್ದರು. ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತರೊಂದಿಗೆ ಕೆಲಕಾಲ ಸಂವಾದ ನಡೆಸಿದ್ದರು. ಮಾತನಾಡುತ್ತಿದ್ದ ವೇಳೆ ರಾಹುಲ್ ಗಾಂಧಿ ಅವರನ್ನು ‘ದೆಹಲಿ ದರ್ಶನ’ಕ್ಕೆ ಕರೆಸುವುದಾಗಿ ಭರವಸೆ ನೀಡಿದ್ದರು.
ರಾಷ್ಟ್ರ ರಾಜಧಾನಿ ನಮ್ಮಿಂದ ಇಷ್ಟು ಹತ್ತಿರವಿದ್ದರೂ ಯಾವತ್ತೂ ದೆಹಲಿಗೆ ಹೋಗಲು ಸಾಧ್ಯವಾಗಿಲ್ಲ ಎಂದು ಅಲ್ಲಿದ್ದ ಕೆಲವು ರೈತರು ಕಾಂಗ್ರೆಸ್ ನಾಯಕರ ಮುಂದೆ ತಮ್ಮ ಕಷ್ಟಗಳನ್ನು ಹೇಳಿಕೊಂಡಿದ್ದರು. ಅವರ ಕಷ್ಟ ಹಾಗೂ ಆಸೆಯನ್ನು ಆಲಿಸಿದ ರಾಹುಲ್ ಗಾಂಧಿ, ದೆಹಲಿ ದರ್ಶನ ಮಾಡಿಸುವುದಾಗಿ ಮಾತು ಕೊಟ್ಟಿದ್ದರು. ಬಳಿಕ ಈ ಬಗ್ಗೆ ಸಹೋದರಿ ಪ್ರಿಯಾಂಕಾ ಗಾಂಧಿ ಜೊತೆ ಚರ್ಚೆ ಮಾಡಿದ್ದ ರಾಹುಲ್ ಗಾಂಧಿ, ತಮ್ಮ ನಿವಾಸದಲ್ಲಿ ಔತಣಕೂಟಕ್ಕೂ ಏರ್ಪಾಡು ಮಾಡಿದ್ದರು.
ರೈತ ಮಹಿಳೆಯರನ್ನು ಭೇಟಿ ಮಾಡಿದ ಬಳಿಕ ಟ್ವಿಟರ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ರಾಹುಲ್ ಗಾಂಧಿ, 'ಅಮ್ಮ, ಪ್ರಿಯಾಂಕಾ ಮತ್ತು ನನ್ನನ್ನು ಕೆಲವು ವಿಶೇಷ ಅತಿಥಿಗಳು ಭೇಟಿಯಾದ ಸ್ಮರಣೀಯ ದಿನವಿದು. ಸೋನಿಪತ್‌ನ ರೈತ ಸಹೋದರಿಯರಿಗೆ ದೆಹಲಿ ದರ್ಶನ ಮಾಡಿಸಲಾಯಿತು. ಬಳಿಕ ಮನೆಯಲ್ಲಿ ಅವರೊಂದಿಗೆ ಔತಣಕೂಟ ನಡೆಯಿತು. ಊಟದ ಜೊತೆಗೆ ಅವರೊಂದಿಗೆ ಮಾತುಕತೆ ಕೂಡ ನಡೆಯಿತು. ದೇಸಿ ತುಪ್ಪ, ಸಿಹಿ ಲಸ್ಸಿ, ಮನೆಯಲ್ಲಿ ತಯಾರಿಸಿದ ಉಪ್ಪಿನಕಾಯಿ ಹಾಗೂ ಬೆಲೆ ಕಟ್ಟಲಾಗದಷ್ಟು ಉಡುಗೊರೆಗಳನ್ನು ಸ್ವೀಕರಿಸಲಾಯಿತು' ಎಂದಿದ್ದಾರೆ. ಕಾಂಗ್ರೆಸ್ ಪಕ್ಷ ಕೂಡ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದೆ.
'ರಾಹುಲ್ ಗಾಂಧಿ ಅವರು ಸೋನಿಪತ್‌ನ ರೈತ ಸಹೋದರಿಯರನ್ನು ದೆಹಲಿಗೆ ಕರೆಸುವುದಾಗಿ ಭರವಸೆ ನೀಡಿದ್ದರು. ಅದರಂತೆ ರೈತ ಸಹೋದರಿಯರನ್ನು ದೆಹಲಿಗೆ ಕರೆಸಿ ಅವರ ಭರವಸೆಗಳನ್ನು ಈಡೇರಿಸಿದ್ದಾರೆ' ಎಂದು ಕಾಂಗ್ರೆಸ್ ಶೀರ್ಷಿಕೆ ಬರೆದುಕೊಂಡಿದೆ. ವಿಡಿಯೊದಲ್ಲಿ, ಗಾಂಧಿ ಕುಟುಂಬವು ಮಹಿಳೆಯರೊಂದಿಗೆ ಸಂವಾದ ನಡೆಸುತ್ತಿರುವುದು ಮತ್ತು ಅವರಿಗೆ ಊಟೋಪಚಾರ ಮಾಡುವುದು ಒಳಗೊಂಡಿದೆ. ಇದರಲ್ಲಿ ರಾಹುಲ್ ಗಾಂಧಿ ಮಹಿಳೆಯರಿಗೆ ಊಟ ಇಷ್ಟವಾಯಿತೋ ಇಲ್ಲವೋ, ಎಲ್ಲರೂ ಸಿಹಿತಿಂಡಿ ತಿಂದಿದ್ದಾರೋ ಇಲ್ಲವೋ ಎಂದು ಕೇಳುತ್ತಿರುವುದು ಕೂಡ ಕಂಡುಬಂತು. ಇದೇ ವೇಳೆ ಅವರು ಮಕ್ಕಳಿಗೆ ಚಾಕೊಲೇಟ್ ಕೂಡ ನೀಡಿದರು.
ಇದನ್ನೂ ಓದಿ:Rahul Gandhi: ಕೇರಳದ ಕೊಟ್ಟಕಲ್‌ನ ವಿಶ್ವಂಭರ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದ ರಾಹುಲ್ ಗಾಂಧಿ