ಮುಂಬೈ: ಮಹಾರಾಷ್ಟ್ರದಲ್ಲಿ ರಾಜಕೀಯ ಕೆಸರೆರಚಾಟ ಮುಂದುವರೆದಿದ್ದು, ಆಡಳಿತಾರೂಢ ಮಹಾರಾಷ್ಟ್ರ ವಿಕಾಸ ಅಘಾಡಿ ಹಾಗೂ ಪ್ರತಿಪಕ್ಷ ಬಿಜೆಪಿ ಮಧ್ಯೆ ಆರೋಪ-ಪ್ರತ್ಯಾರೋಪಗಳು ಜೋರು ಪಡೆದಿವೆ. ಈ ಮಧ್ಯೆ ಶಿವಸೇನೆಯು ಬಿಜೆಪಿ ಹಾಗೂ ಕೇಂದ್ರದ ವಿರುದ್ಧದ ವಾಗ್ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಇಂದು ಮತ್ತೊಂದು ಸಂಪಾದಕೀಯ ಪ್ರಕಟಿಸಿ ಸರ್ಕಾರ ಬೀಳಿಸುವ ಯತ್ನಗಳನ್ನು ಖಂಡಿಸಿದೆ.
ಪರಮ್ ಬೀರ್ ಸಿಂಗ್ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಪತ್ರ ಬರೆದಿದ್ದನ್ನೇ ದೊಡ್ಡ ವಿಷಯವಾಗಿ ಪರಿಗಣಿಸುತ್ತಿರುವ ಬಿಜೆಪಿಗೆ ತನ್ನ ಆಡಳಿತದ ರಾಜ್ಯಗಳಲ್ಲಿ ಏನು ನಡೆಯುತ್ತಿದೆ ಎಂಬುದು ಯಾಕೆ ಗಮನಕ್ಕೆ ಬರುತ್ತಿಲ್ಲ ಎಂದು ಶಿವಸೇನೆ ಪ್ರಶ್ನಿಸಿದೆ. ಗುಜರಾತ್ನಲ್ಲಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅಲ್ಲಿನ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದಾಗ ಅವರನ್ನು ಜೈಲಿಗಟ್ಟಲಾಯಿತು. ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರವಿರುವ ಉತ್ತರ ಪ್ರದೇಶದಲ್ಲಿ ಬಡ್ತಿ ಹಾಗೂ ವರ್ಗಾವಣೆಯಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆಯುತ್ತಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಈ ವಿಷಯಗಳ ಕುರಿತು ಕೇಂದ್ರ ಗೃಹ ಸಚಿವಾಲಯ ಯಾಕೆ ಏನೂ ಕ್ರಮ ಕೈಗೊಂಡಿಲ್ಲ ಎಂದು ಸಾಮ್ನಾ ಸಂಪಾದಕೀಯದಲ್ಲಿ ಪ್ರಶ್ನೆ ಮಾಡಲಾಗಿದೆ.