ಲಖನೌ(ಉತ್ತರಪ್ರದೇಶ):ಇಂದು ಯೋಗಿ ಆದಿತ್ಯನಾಥ್ ಸತತ ಎರಡನೇ ಬಾರಿಗೆ ಉತ್ತರಪ್ರದೇಶ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಹಲವು ಪ್ರಥಮಗಳಿಗೆ ಸಾಕ್ಷಿಯಾಗಲಿದ್ದಾರೆ. ಇದುವರೆಗೂ ಇದ್ದ ಹಲವು ನಂಬಿಕೆಗಳಿಗೆ ತಿಲಾಂಜಲಿ ಇಡಲಿದ್ದಾರೆ. ಇದುವರೆಗೂ ಇದ್ದ ಕಟ್ಟುಕಥೆಗಳನ್ನು ಯೋಗಿ ಆದಿತ್ಯನಾಥ ಸುಳ್ಳು ಮಾಡಲಿದ್ದಾರೆ. 37 ವರ್ಷಗಳ ನಂತರ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿದ ಮೊದಲ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಈಗಾಗಲೇ ಇತಿಹಾಸ ನಿರ್ಮಿಸಿದ್ದಾರೆ. ಅವರು ತಮ್ಮ ಎರಡನೇ ಅವಧಿಯನ್ನು ಪೂರ್ಣಗೊಳಿಸುವ ವೇಳೆಗೆ, ದೇಶದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯದ ಮುಖ್ಯಮಂತ್ರಿಯಾಗಿ ದೀರ್ಘಕಾಲ ಸೇವೆ ಸಲ್ಲಿಸಿದ ಕೀರ್ತಿಯನ್ನ ಅವರು ಪಡೆಯಲಿದ್ದಾರೆ.
ನೋಯ್ಡಾ ನಂಬಿಕೆ ಸುಳ್ಳು ಮಾಡಿದ ಯೋಗಿಗೆ ಯೋಗ:ಅಧಿಕಾರದಲ್ಲಿದ್ದಾಗ ನೋಯ್ಡಾಗೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂಬ ನಂಬಿಕೆಯನ್ನು ಈಗಾಗಲೇ ಮುರಿದಿರುವ ಸಿಎಂ ಯೋಗಿ ಆದಿತ್ಯನಾಥ ಇಂದು ಮತ್ತೊಮ್ಮೆ ಉತ್ತರಪ್ರದೇಶ ಸಿಎಂ ಆಗಿ ಪ್ರಮಾಣ ಸ್ವೀಕರಿಸಲಿದ್ದಾರೆ. 1988 ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ವೀರ್ ಬಹದ್ದೂರ್ ಸಿಂಗ್ ಅವರು ನೋಯ್ಡಾಗೆ ಭೇಟಿ ನೀಡಿದ ಕೆಲವೇ ದಿನಗಳಲ್ಲಿ ರಾಜೀನಾಮೆ ನೀಡಿದ್ದರು. ಇದಾದ ಬಳಿಕ ನೋಯ್ಡಾಗೆ ಭೇಟಿ ನೀಡಿದವರು ಅಧಿಕಾರ ಕಳೆದುಕೊಂಡಿದ್ದರು.
ವೀರ್ ಬಹದ್ದೂರ್ ಸಿಂಗ್ ಅವರ ಉತ್ತರಾಧಿಕಾರಿ ನಾರಾಯಣ ದತ್ ತಿವಾರಿ ಕೂಡಾ 1989ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡಿದ್ದರು. ಅಧಿಕಾರ ಕಳೆದುಕೊಳ್ಳುವ ಮುನ್ನ ಎನ್. ಡಿ. ತಿವಾರಿ ನೋಯ್ಡಾಕ್ಕೆ ಭೇಟಿ ನೀಡಿದ್ದರು ಎಂಬುದು ಗಮನಾರ್ಹ. ಇದು ಹಲವು ಸಿಎಂಗಳು ನೋಯ್ಡಾಗೆ ಭೇಟಿ ನೀಡದಂತೆ ಮಾಡಿತ್ತು. ಇನ್ನು ಮುಲಾಯಂ ಸಿಂಗ್ ಯಾದವ್, ಕಲ್ಯಾಣ್ ಸಿಂಗ್ ಮತ್ತು ರಾಜನಾಥ್ ಸಿಂಗ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ಬಳಿಕ ನೋಯ್ಡಾ ಭೇಟಿಗೆ ಮುಂದಾಗಿರಲಿಲ್ಲ. ಆದರೆ ಇವರೆಲ್ಲ ಪೂರ್ಣಾವಧಿ ಸಿಎಂ ಆಗಿಯೂ ಅಧಿಕಾರ ಪೂರೈಸಿರಲಿಲ್ಲ ಎಂಬುದು ಗಮನಾರ್ಹ.
ನೋಯ್ಡಾ ಭೇಟಿ ಭಯ ಎಷ್ಟಿತ್ತು ಎಂದರೆ, ರಾಜನಾಥ್ ಸಿಂಗ್ ಕೂಡ ದೆಹಲಿ - ನೋಯ್ಡಾ - ದೆಹಲಿ (ಡಿಎನ್‌ಡಿ) ಮೇಲ್ಸೇತುವೆಯನ್ನು ದೆಹಲಿಯಿಂದಲೇ ಉದ್ಘಾಟಿಸಿದ್ದರು. ಅಂತೆಯೇ 2013 ರಲ್ಲಿ ನೋಯ್ಡಾದಲ್ಲಿ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ಎಡಿಬಿ) ಶೃಂಗಸಭೆಗೆ ಅಖಿಲೇಕ್ ಯಾದವ್ ಹಾಜರಾಗಿರಲಿಲ್ಲ. ಈ ಹಿಂದೆ 2012 ರಲ್ಲಿ ಅಖಿಲೇಶ್ ಯಾದವ್ ಅವರು ಲಖನೌದಿಂದಲೇ ಯಮುನಾ ಎಕ್ಸ್‌ಪ್ರೆಸ್‌ವೇ ಉದ್ಘಾಟಿಸಿದ್ದರು.