ನವದೆಹಲಿ: ಲಕ್ನೋದಲ್ಲಿ ಇಂದು ಸರ್ದಾರ್ ಪಟೇಲ್ ರಾಷ್ಟ್ರೀಯ ದಿವ್ಯಾಂಗ್ ಟಿ20 ಕಪ್ ಕ್ರಿಕೆಟ್ ಟೂರ್ನಿಯನ್ನು ಸಿಎಂ ಯೋಗಿ ಆದಿತ್ಯನಾಥ್ ಉದ್ಘಾಟಿಸಿದರು. ಮುಖ್ಯಮಂತ್ರಿಯವರ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಿಂದ ಹಂಚಿಕೊಂಡ ಈ ಫೋಟೋದಲ್ಲಿ, ಯೋಗಿ ಬ್ಯಾಟ್ ಹಿಡಿದಿರುವುದನ್ನು ಕಾಣಬಹುದು. “ಇಂದು ಲಕ್ನೋದಲ್ಲಿ, ಕ್ರಿಕೆಟ್ ಪಿಚ್‌ನಲ್ಲಿ...” ಎಂಬ ಶೀರ್ಷಿಕೆಯನ್ನು ಫೋಟೋಗೆ ನೀಡಲಾಗಿದೆ.
ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಮುಖ್ಯಮಂತ್ರಿ ಬ್ಯಾಟ್ ಬೀಸಿ ಚೆಂಡನ್ನು ಹೊಡೆಯುತ್ತಾರೆ. ಕ್ರಿಕೆಟ್ ಮೈದಾನದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಯ ಗುಂಪು ಅವರನ್ನು ಸುತ್ತುವರೆದಿತ್ತು.
ಪಂದ್ಯಾವಳಿಯ ಕುರಿತು ಮಾತನಾಡಿದ ಸಿಎಂ, “ಆಧುನಿಕ ಭಾರತದ ವಾಸ್ತುಶಿಲ್ಪಿಗೆ ಗೌರವ ಸಲ್ಲಿಸಲು ಇಂದು ಬೆಳಿಗ್ಗೆಯಿಂದ ಅನೇಕ ಕಾರ್ಯಕ್ರಮಗಳು ನಡೆಯುತ್ತಿವೆ. ‘ರನ್ ಫಾರ್ ಯೂನಿಟಿ’ ನಂತರ 75 ಜಿಲ್ಲೆಗಳಲ್ಲಿ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿರುವುದು ಖುಷಿ ತಂದಿದೆ. ಅದರಲ್ಲಿ ಭಾಗವಹಿಸಿದ ಎಲ್ಲಾ ಸಂಘಟಕರು ಮತ್ತು ಪ್ರಾಯೋಜಕರನ್ನು ನಾನು ಅಭಿನಂದಿಸುತ್ತೇನೆ. ದೇಶದ ವಿಶೇಷ ಸಾಮರ್ಥ್ಯವುಳ್ಳ ಕ್ರಿಕೆಟಿಗರಿಗೆ ಈ ಪಂದ್ಯಾವಳಿಯು ದೊಡ್ಡ ಕೊಡುಗೆ" ಎಂದು ಶ್ಲಾಘಿಸಿದ್ದಾರೆ.
ದೇಶದಾದ್ಯಂತ 20 ಕ್ರಿಕೆಟ್ ತಂಡಗಳು ಟೂರ್ನಿಯಲ್ಲಿ ಪಾಲ್ಗೊಂಡಿವೆ. ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದ್ದು ಒಟ್ಟು 43 ಪಂದ್ಯಗಳು ನಡೆಯಲಿವೆ. ಆಟಗಾರರು ಪಂದ್ಯದ ಶುಲ್ಕವನ್ನು ಪಡೆಯುತ್ತಾರೆ ಮತ್ತು ಅವರ ಪ್ರಯಾಣ ವೆಚ್ಚವನ್ನೂ ಸಹ ಭರಿಸಲಾಗುವುದು. ಇದಲ್ಲದೆ, ಅಸಾಧಾರಣ ಪ್ರದರ್ಶನಕಾರರಿಗೆ ಸುಮಾರು ₹30 ಲಕ್ಷ ಬಹುಮಾನ ನೀಡಲಾಗುತ್ತದೆ. ನವೆಂಬರ್ 7 ರಂದು ಟೂರ್ನಿಯ ಸಮಾರೋಪ ಸಮಾರಂಭ ನಡೆಯಲಿದೆ.
ಇದನ್ನೂ ಓದಿ:ಮೋರ್ಬಿ ಸೇತುವೆ ಕುಸಿತ ಪ್ರಕರಣ.. ಭಾಷಣದ ವೇಳೆ ಭಾವುಕರಾದ ಪ್ರಧಾನಿ ಮೋದಿ