ಲಕ್ನೋ(ಉತ್ತರ ಪ್ರದೇಶ): ಗ್ಯಾಂಗ್ ಸ್ಟಾರ್ ಮತ್ತು ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ನ ಹತ್ಯೆ ಬೆನ್ನಲ್ಲೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಾಫಿಯಾಗಳಿಗೆ ಎಚ್ಚರಿಕೆ ನೀಡಿದ್ದಾರೆ. ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಮಾಫಿಯಾಗಳು ಯಾರಿಗೂ ಬೆದರಿಕೆ ಹಾಕಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಮಂಗಳವಾರ ಲಕ್ನೋದ ಟೆಕ್ಸ್ಟೈಲ್ಸ್ ಪಾರ್ಕ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಹಿಂದೆ ರಾಜ್ಯವು ಗಲಭೆಗಳಿಗೆ ಕುಖ್ಯಾತಿ ಪಡೆದಿತ್ತು. 2012 ರಿಂದ 2017ರ ಅವಧಿಯಲ್ಲಿ ರಾಜ್ಯದಲ್ಲಿ 700ಕ್ಕೂ ಹೆಚ್ಚು ಗಲಭೆಗಳು ನಡೆದಿದ್ದವು. ಆದರೆ 2017ರಿಂದ 2023ರ ಅವಧಿಯಲ್ಲಿ ಒಂದೇ ಒಂದು ಗಲಭೆಯೂ ನಡೆದಿಲ್ಲ ಮತ್ತು ಇದುವರೆಗೂ ಒಂದೂ ಕರ್ಫ್ಯೂ ವಿಧಿಸಿಲ್ಲ ಎಂದು ಸಿಎಂ ಯೋಗಿ ತಿಳಿಸಿದ್ದಾರೆ.
ಮೊದಲು ರಾಜ್ಯವು ಬಿಕ್ಕಟ್ಟನ್ನು ಎದುರಿಸುತ್ತಿತ್ತು. ಆದರೆ ಇಂದು ಕ್ರಿಮಿನಲ್ಗಳು ಮತ್ತು ಮಾಫಿಯಾಗಳು ಬಿಕ್ಕಟ್ಟಿನಲ್ಲಿವೆ. ಈಗ ಗ್ಯಾಂಗ್ ಸ್ಟರ್ಗಳು ಮತ್ತು ಮಾಫಿಯಾಗಳು ಉದ್ಯಮಿಗಳಿಗೆ ಕರೆ ಮಾಡಿ ಬೆದರಿಕೆ ಹಾಕಲು ಸಾಧ್ಯವಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ ಎಂದು ಹೇಳಿದರು.
ಗ್ಯಾಂಗ್ ಸ್ಟರ್ ಅತೀಕ್ ಅಹ್ಮದ್, ಅಶ್ರಫ್ ಹತ್ಯೆ: ಕಳೆದ ವಾರ ಪ್ರಯಾಗ್ರಾಜ್ ಜಿಲ್ಲೆಯಲ್ಲಿ ಮಾಧ್ಯಮಗಳ ಮುಂದೆಯೇ ಗ್ಯಾಂಗ್ ಸ್ಟರ್ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದರು. ಪೊಲೀಸರು ಪ್ರಯಾಗ್ರಾಜ್ನ ವೈದ್ಯಕೀಯ ಕಾಲೇಜಿಗೆ ಅಶ್ರಫ್ ಮತ್ತು ಅತೀಕ್ನನ್ನು ವೈದ್ಯಕೀಯ ತಪಾಸಣೆಗೆಂದು ಕರೆತಂದಿದ್ದರು. ಈ ವೇಳೆ ಮಾಧ್ಯಮದ ಸೋಗಿನಲ್ಲಿ ಬಂದಿದ್ದ ಆರೋಪಿಗಳು ಪೊಲೀಸರ ಉಪಸ್ಥಿತಿಯಲ್ಲೇ ಇಬ್ಬರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದರು.
ಹಂತಕರು ವಿವಿಧ ಕ್ರಿಮಿನಲ್ ಪ್ರಕರಣಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಜನಪ್ರಿಯರಾಗಬೇಕೆಂದು ಪಾತಕ ಲೋಕದಲ್ಲಿ ಕುಖ್ಯಾತಿ ಪಡೆದಿದ್ದ ಅತೀಕ್ ಮತ್ತು ಆತನ ಸಹೋದರ ಅಶ್ರಫ್ನನ್ನು ಹತ್ಯೆಗೈಯಲು ಸಂಚು ರೂಪಿಸಿದ್ದರು. ಬಂಧಿತರನ್ನು ಅರುಣ್ ಮೌರ್ಯ, ಸನ್ನಿ ಸಿಂಗ್ ಮತ್ತು ಲವಲೇಶ್ ತಿವಾರಿ ಎಂದು ಗುರುತಿಸಲಾಗಿದೆ. ಗುಂಡಿನ ದಾಳಿ ನಡೆದ ಕೂಡಲೇ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ಪ್ರಕಾರ, ಅತೀಕ್‌ಗೆ ಕನಿಷ್ಠ ಎಂಟು ಬಾರಿ ಗುಂಡು ಹಾರಿಸಲಾಗಿದ್ದು, ಅವನ ತಲೆ, ಕುತ್ತಿಗೆ ಮತ್ತು ಎದೆಯಲ್ಲಿ ಗುಂಡುಗಳು ಪತ್ತೆಯಾಗಿದೆ. ಈ ಹತ್ಯೆಯ ಸಂಬಂಧ ಉತ್ತರ ಪ್ರದೇಶ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿದೆ.
ಇದಕ್ಕೂ ಮುನ್ನ ಝಾನ್ಸಿ ಜಿಲ್ಲೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಅತೀಕ್ ಅಹ್ಮದ್ ಮಗ ಅಸಾದ್ ವಿಶೇಷ ಕಾರ್ಯಪಡೆಗಳ ಗುಂಡಿನ ದಾಳಿಗೆ ಮೃತಪಟ್ಟಿದ್ದನು. ಪೊಲೀಸರ ಸಮ್ಮುಖದಲ್ಲೇ ಗ್ಯಾಂಗ್ ಸ್ಟರ್ ಅತೀಕ್ ಮತ್ತು ಅಶ್ರಫ್ ಹತ್ಯೆ ನಡೆದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗಾಗಿ ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶರ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನು ರಚಿಸುವಂತೆ ಕೋರಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಎಪ್ರಿಲ್ 24ಕ್ಕೆ ವಿಚಾರಣೆ ನಿಗದಿ ಮಾಡಿದೆ.
ಇದನ್ನೂ ಓದಿ:ಅತೀಕ್ ಅಹ್ಮದ್ ಪರ ವಕೀಲ ದಯಾಶಂಕರ್ ಮಿಶ್ರಾ ಮನೆ ಬಳಿ ಕಚ್ಚಾ ಬಾಂಬ್ ಸ್ಫೋಟ