ಲಖನೌ (ಉತ್ತರ ಪ್ರದೇಶ): ಗ್ಯಾಂಗ್ಸ್ಟರ್, ಮಾಜಿ ಸಂಸದ ಅತೀಕ್ ಅಹ್ಮದ್ ತಮ್ಮ ಒಂದೇ ಒಂದು ಹೇಳಿಕೆಯಿಂದ ಉತ್ತರ ಪ್ರದೇಶ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಧೈರ್ಯಶಾಲಿ ಹಾಗೂ ಪ್ರಾಮಾಣಿಕ ಮುಖ್ಯಮಂತ್ರಿ ಎಂದು ಹೇಳಿಕೆ ನೀಡಿದ್ದು, ಚರ್ಚೆಗೆ ಗ್ರಾಸವಾಗಿದೆ.
ಸಮಾಜವಾದಿ ಪಕ್ಷದಿಂದ ಲೋಕಸಭೆ ಹಾಗೂ ವಿಧಾನಸಭೆಗೆ ಆಯ್ಕೆಯಾಗಿದ್ದ ಅತೀಕ್ ಅಹ್ಮದ್ ಮಾಫಿಯಾ ಡಾನ್ ಕೂಡ ಹೌದು. ಹತ್ಯೆ ಹಾಗೂ ಇತರ ಪ್ರಕರಣಗಳ ಆರೋಪಿಯಾದ ಅತೀಕ್ ಅಹ್ಮದ್ನನ್ನು ಸದ್ಯ ಗುಜರಾತ್‌ನ ಸಬರಮತಿ ಜೈಲಿನಲ್ಲಿ ಇರಿಸಲಾಗಿದೆ. ಗುರುವಾರ ಲಖನೌ ಪೊಲೀಸರು ಸಿಬಿಐ ವಿಶೇಷ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯಕ್ಕೆ ಅತೀಕ್ ಅಹ್ಮದ್ನನ್ನು ಹಾಜರುಪಡಿಸಿದ್ದಾರೆ.
ಪೊಲೀಸ್ ವಾಹನದಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿರುವ ಅತೀಕ್ ಅಹ್ಮದ್, ಯೋಗಿ ಆದಿತ್ಯನಾಥ್ ಧೈರ್ಯಶಾಲಿ ಮತ್ತು ಪ್ರಾಮಾಣಿಕ ಮುಖ್ಯಮಂತ್ರಿ ಎಂದು ಹೇಳಿದರು.
ಉತ್ತರ ಪ್ರದೇಶ ಸರ್ಕಾರವು ಅನೇಕ ಅಕ್ರಮ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತಿದೆ. ಇದರ ಭಾಗವಾಗಿಯೇ ಅತೀಕ್ ಅಹ್ಮದ್‌ಗೆ ಸೇರಿದ ಕೋಟ್ಯಂತರ ಮೌಲ್ಯದ ಆಸ್ತಿಗಳ ಮೇಲೂ ಬುಲ್ಡೋಜರ್ ಚಲಾಯಿಸಲಾಗಿದೆ. ಇದಲ್ಲದೇ, ಅತೀಕ್ ಅಹ್ಮದ್‌ಗೆ ಸಂಬಂಧಿಸಿದ ಇತರ ದಂಧೆಗಳ ವಿರುದ್ಧವೂ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಇದರ ನಡುವೆಯೂ ಯೋಗಿ ಆದಿತ್ಯನಾಥ್ ಅವರನ್ನು ಹೊಗಳಿ ಗ್ಯಾಂಗ್ಸ್ಟರ್ ಅತೀಕ್ ಅಹ್ಮದ್ ಅಚ್ಚರಿ ಮೂಡಿಸಿದ್ದಾರೆ.
ಇದನ್ನೂ ಓದಿ:ಕೆಟ್ಟ ದಿನಗಳಲ್ಲಿ ದಲಿತರನ್ನು ಮುಂದೆ ಕಳುಹಿಸುವ ಕಾಂಗ್ರೆಸ್‌ನದ್ದು ಹುಸಿ ರಾಜಕಾರಣ: ಮಾಯಾವತಿ