ನವದೆಹಲಿ:ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನ ಹಿನ್ನೆಲೆ ದೇಶಾದ್ಯಂತ ದಾಖಲೆಯ 2.5 ಕೋಟಿ ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ.
ಪುಟ್ಟ ರಾಜ್ಯವಾದ ಗೋವಾದಲ್ಲಿ 17,000ಕ್ಕೂ ಹೆಚ್ಚು ಮಂದಿಗೆ ವ್ಯಾಕ್ಸಿನ್ ಹಾಕಲಾಗಿದ್ದು, ಇಂದು ಗೋವಾದ ಆರೋಗ್ಯ ಕಾರ್ಯಕರ್ತರು, ವೈದ್ಯರು ಮತ್ತು ಲಸಿಕೆ ಫಲಾನುಭವಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ವೀಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ್ದಾರೆ.
ವೀಡಿಯೋ ಕಾನ್ಫರೆನ್ಸ್ನಲ್ಲಿ ಪ್ರಧಾನಿ ಮೋದಿ ಮಾತು ಈ ವೇಳೆ ಮಾತನಾಡಿದ ಪಿಎಂ ಮೋದಿ, "ನಾನು ದೇಶದ ಎಲ್ಲ ವೈದ್ಯಕೀಯ ಸಿಬ್ಬಂದಿ ಮತ್ತು ಜನರನ್ನು ಪ್ರಶಂಸಿಸಲು ಬಯಸುತ್ತೇನೆ. ನಿಮ್ಮ ಪ್ರಯತ್ನದಿಂದ ಭಾರತವು ಒಂದೇ ದಿನದಲ್ಲಿ 2.5 ಕೋಟಿ ಜನರಿಗೆ ಲಸಿಕೆ ಹಾಕುವ ದಾಖಲೆಯನ್ನು ಮಾಡಿದೆ ಎಂದು ಪ್ರಶಂಸಿದರು.
ಪ್ರತಿ ಸೆಕೆಂಡಿಗೆ 425ಕ್ಕೂ ಹೆಚ್ಚು ಜನರಂತೆ, ಪ್ರತಿ ನಿಮಿಷಕ್ಕೆ 26,000 ಮಂದಿಗೆ, ಪ್ರತಿ ಗಂಟೆಗೆ 15 ಲಕ್ಷಕ್ಕೂ ಹೆಚ್ಚು ಜನರಿಗೆ ನಿನ್ನೆ ಲಸಿಕೆ ನೀಡಲಾಗಿದೆ. ಸಮೃದ್ಧ ಮತ್ತು ಶಕ್ತಿಶಾಲಿ ಎಂದು ಪರಿಗಣಿಸಲ್ಪಟ್ಟ ದೇಶಗಳು ಸಹ ಇದನ್ನು ಮಾಡಲು ಸಾಧ್ಯವಾಗಲಿಲ್ಲ ಎಂದರು.
ಇದನ್ನೂ ಓದಿ: ದೇಶಾದ್ಯಂತ 2.25 ಕೋಟಿ ಕೋವಿಡ್ ಲಸಿಕೆ ಡೋಸ್ ವಿತರಣೆ: ಮೋದಿ ಜನ್ಮದಿನದಂದು ಐತಿಹಾಸಿಕ ದಾಖಲೆ
"ನಿನ್ನೆ ನನಗೆ ಅತ್ಯಂತ ಭಾವನಾತ್ಮಕ ದಿನವಾಗಿತ್ತು. ನಿಮ್ಮೆಲ್ಲರ ಪ್ರಯತ್ನದಿಂದ ನನಗೆ ಇದು ಅತ್ಯಂತ ವಿಶೇಷವಾದ ದಿನವಾಯಿತು" ಎಂದು ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದರು.
"ವಿಶ್ವದ ಅತಿದೊಡ್ಡ ಮತ್ತು ವೇಗವಾದ ವ್ಯಾಕ್ಸಿನೇಷನ್ ಅಭಿಯಾನದ ಯಶಸ್ಸಿನಲ್ಲಿ ಗೋವಾ ಪ್ರಮುಖ ಪಾತ್ರ ವಹಿಸುತ್ತದೆ. ಸಿಎಂ ಪ್ರಮೋದ್ ಸಾವಂತ್ ನೇತೃತ್ವದ ಗೋವಾ ಸರ್ಕಾರ ಭಾರೀ ಮಳೆ, ಚಂಡಮಾರುತ ಮತ್ತು ಪ್ರವಾಹದ ವಿರುದ್ಧ ಧೈರ್ಯದಿಂದ ಹೋರಾಡಿದೆ. ಈಗ ವ್ಯಾಕ್ಸಿನೇಷನ್ನಲ್ಲೂ ದಾಖಲೆ ಬರೆದಿದೆ" ಎಂದು ಪ್ರಶಂಸೆ ವ್ಯಕ್ತಪಡಿಸಿದರು.