ಕರ್ನಾಟಕ

karnataka

ಬರೋಬ್ಬರಿ 45 ವರ್ಷದ ದಾಖಲೆ ಮುರಿದ ಯಮುನಾ ನದಿ: ತುರ್ತು ಸಭೆ ಕರೆದ ದೆಹಲಿ ಸಿಎಂ, ಕೇಂದ್ರ ಗೃಹ ಸಚಿವರಿಗೆ ಪತ್ರ

By

Published : Jul 12, 2023, 6:57 PM IST

ರಾಷ್ಟ್ರ ರಾಜಧಾನಿಯಲ್ಲಿ ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಅವಲೋಕಿಸಲು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತುರ್ತು ಸಭೆ ಕರೆದಿದ್ದಾರೆ. ಜತೆಗೆ ಸಿಎಂ ಕೇಜ್ರಿವಾಲ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.

Yamuna river
ಯಮುನಾ ನದಿ

ನವದೆಹಲಿ:ಉತ್ತರ ಭಾರತದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ದೆಹಲಿಯಲ್ಲಿ ಯಮುನಾ ನದಿ ಉಕ್ಕಿ ಹರಿಯುತ್ತಿದೆ. ನೀರಿನ ಮಟ್ಟ ಬುಧವಾರದಂದು 207.55 ಮೀಟರ್‌ಗಳಷ್ಟು ಗರಿಷ್ಠ ಮಟ್ಟವನ್ನು ತಲುಪಿದ್ದು, 44 ವರ್ಷಗಳ ದಾಖಲೆಯನ್ನು ಮುರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದರಿಂದ ಹಲವರ ಬದುಕು ಛಿದ್ರಗೊಂಡಿದೆ. ಅಪಾಯದ ಮಟ್ಟ ಮೀರಿ ನದಿ ಹರಿಯುತ್ತಿರುವ ಕಾರಣ ಹಲವು ಪ್ರದೇಶಗಳು ಮುಳುಗಡೆಯಾಗಿವೆ. ರಾಜಧಾನಿಯ ಬಹುತೇಕ ಪ್ರದೇಶಗಳು ಜಲಾವೃತಗೊಂಡಿವೆ. ಯಮುನಾ ನದಿ ಪಾತ್ರ ಸೇರಿದಂತೆ ಅಪಾಯದ ಮುನ್ಸೂಚನೆ ಇರುವ ಹಲವು ಪ್ರದೇಶಗಳಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ.

ಇಂದು ಮಧ್ಯಾಹ್ನ 12 ಗಂಟೆಗೆ ನೀರಿನ ಮಟ್ಟ 207.48 ಮೀಟರ್ ಇತ್ತು ಎಂದು ದೆಹಲಿ ಪ್ರವಾಹ ನಿಯಂತ್ರಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಯಮುನಾದಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತುರ್ತು ಸಭೆ ಕರೆದಿದ್ದಾರೆ. ಭಾನುವಾರ ಯಮುನಾದಲ್ಲಿ ನೀರು ಅಪಾಯದ ಮಟ್ಟವನ್ನು ಮೀರಿತ್ತು. ಜು.12 ರಂದು ಬೆಳಗ್ಗೆ 8 ಗಂಟೆಗೆ ಹಳೆಯ ರೈಲ್ವೆ ಸೇತುವೆಯಲ್ಲಿ 207.25 ಮೀಟರ್ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 1978ರಲ್ಲಿ ಯಮುನಾ ನದಿಯಲ್ಲಿ 207.49 ಮೀಟರ್‌ಗಳಷ್ಟು ನೀರು ಹರಿದಿದ್ದು ಹಿಂದಿನ ದಾಖಲೆಯಾಗಿತ್ತು.

2013ರಲ್ಲಿ ನದಿಯಲ್ಲಿ ನೀರಿನ ಮಟ್ಟ 207.33 ಮೀಟರ್‌ಗೆ ತಲುಪಿತ್ತು. ನೀರಿನ ಮಟ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಕ್ಷಣಾ ಮತ್ತು ಪುನರ್ವಸತಿ ತಂಡಗಳು ತಗ್ಗು ಪ್ರದೇಶಗಳಲ್ಲಿ ವಾಸಿಸುವವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುತ್ತಿದ್ದಾರೆ. ಭಾರತೀಯ ಹವಾಮಾನ ಇಲಾಖೆ (IMD) ಮಂಗಳವಾರ ದೆಹಲಿಗೆ ಆರೆಂಜ್ ಅಲರ್ಟ್​ ಘೋಷಿಸಿದೆ.

"ಯಾವುದೇ ಪರಿಸ್ಥಿತಿಯನ್ನು ಎದುರಿಸಲು ದೆಹಲಿ ಸರ್ಕಾರ ಸಂಪೂರ್ಣ ಸಿದ್ಧವಾಗಿದೆ. ನಾವು ನಿಯಮಿತವಾಗಿ ಯಮುನಾ ನದಿಯ ಬಳಿ ತೆರವು ನಡೆಸುತ್ತಿದ್ದೇವೆ. ನೀರು ಪೋಲಾಗುವುದನ್ನು ತಡೆಯಲು ಹಲವು ಒಡ್ಡುಗಳನ್ನು ಅಳವಡಿಸಲಾಗಿದೆ. ನಾವು ನಿರಂತರವಾಗಿ ಪರಿಸ್ಥಿತಿ ಗಮನಿಸುತ್ತಿದ್ದೇವೆ"-ಲೋಕೋಪಯೋಗಿ ಸಚಿವೆ ಅತಿಶಿ .

ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ:ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ಹರಿಯುತ್ತಿರುವ ಯಮುನೆಯ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗದಂತೆ ನೋಡಿಕೊಳ್ಳಲು ಕೇಂದ್ರ ಮಧ್ಯಸ್ಥಿಕೆ ವಹಿಸಬೇಕೆಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿದ್ದಾರೆ.

ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿರುವ ಅವರು, " ಯಮುನೆಯ ನೀರಿನ ಮಟ್ಟ ಮತ್ತಷ್ಟು ಹೆಚ್ಚಾಗದಂತೆ ತಡೆಯಲು ಸಾಧ್ಯವಾದರೆ ಹರ್ಯಾಣದ ಹತ್ನಿಕುಂಡ್ ಬ್ಯಾರೇಜ್‌ನಿಂದ ನೀರನ್ನು ಸೀಮಿತ ವೇಗದಲ್ಲಿ ಬಿಡುಗಡೆ ಮಾಡಿ" ಎಂದು ವಿನಂತಿಸಿದ್ದಾರೆ ಮತ್ತು ದೆಹಲಿಯಲ್ಲಿ ಕೆಲವೇ ವಾರಗಳಲ್ಲಿ ಜಿ -20 ಶೃಂಗಸಭೆ ನಡೆಯಲಿದೆ. ದೇಶದ ರಾಜಧಾನಿಯಲ್ಲಿ ಪ್ರವಾಹದ ಸುದ್ದಿ ಜಗತ್ತಿಗೆ ಒಳ್ಳೆಯ ಸಂದೇಶವನ್ನು ನೀಡುವುದಿಲ್ಲ. ನಾವು ಒಟ್ಟಾಗಿ ದೆಹಲಿಯ ಜನರನ್ನು ಈ ಪರಿಸ್ಥಿತಿಯಿಂದ ರಕ್ಷಿಸಬೇಕಾಗಿದೆ" ಎಂದು ಕೇಜ್ರಿವಾಲ್ ಶಾಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಟ್ವಿಟರ್‌ನಲ್ಲಿ ಯಮುನಾ ನೀರಿನ ಮಟ್ಟ ಕುರಿತು ಮಾಹಿತಿ ಹಂಚಿಕೊಂಡಿರುವ ಕೇಜ್ರಿವಾಲ್ "ಕೇಂದ್ರ ಜಲ ಆಯೋಗವು ಇಂದು ರಾತ್ರಿ ಯಮುನಾ ನದಿಯಲ್ಲಿ 207.72 ಮೀಟರ್ ನೀರಿನ ಮಟ್ಟವನ್ನು ಅಂದಾಜಿಸಿದೆ. ದೆಹಲಿಗೆ ಇದು ಒಳ್ಳೆಯ ಸುದ್ದಿ ಅಲ್ಲ. ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ಮಳೆ ಇಲ್ಲ. ಆದಾಗ್ಯೂ, ಹತ್ನಿಕುಂಡ್ ಬ್ಯಾರೇಜ್‌ನಿಂದ ಹರಿಯಾಣದಿಂದ ಹೆಚ್ಚಿನ ಪ್ರಮಾಣದ ನೀರನ್ನು ಬಿಡುಗಡೆ ಮಾಡುವುದರಿಂದ ಯಮುನೆಯ ಮಟ್ಟವು ಏರುತ್ತಿದೆ. ಗರಿಷ್ಠ ಪ್ರವಾಹ ಮಟ್ಟ 207.49 ಮೀ (1978 ರಲ್ಲಿ) ಪ್ರಸ್ತುತ ಮಟ್ಟ 207.55 ಮೀ" ಎಂದು ಅವರು ಟ್ವೀಟ್ ಮಾಡಿದ್ದಾರೆ.

ಪ್ರವಾಹದ ಭೀತಿ:ಉತ್ತರ ಭಾರತದಾದ್ಯಂತ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ರಾಜಧಾನಿ ದೆಹಲಿಯಲ್ಲಿ ಯಮುನಾ ನದಿಯ ನೀರಿನ ಮಟ್ಟದಲ್ಲಿ ಏರಿಕೆಯಾಗಿರುವುದರಿಂದ ಪ್ರವಾಹದ ಭೀತಿ ಎದುರಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚುತ್ತಿರುವ ಪ್ರವಾಹದ ಅಪಾಯದ ದೃಷ್ಟಿಯಿಂದ ಓಖ್ಲಾ ಬ್ಯಾರೇಜ್‌ನ ಎಲ್ಲ ಗೇಟ್‌ಗಳನ್ನು ತೆರೆಯಲಾಗಿದೆ.

ಕೇಂದ್ರ ಜಲ ಆಯೋಗ(ಸಿಡಬ್ಲ್ಯೂಸಿ)ದ ಪ್ರವಾಹ ಮೇಲ್ವಿಚಾರಣಾ ಪೋರ್ಟಲ್ ಪ್ರಕಾರ "ಸೋಮವಾರ ಸಂಜೆ 5 ಗಂಟೆಗೆ ಹಳೆಯ ರೈಲ್ವೆ ಸೇತುವೆಯ ನೀರಿನ ಮಟ್ಟ 205.4 ಮೀಟರ್‌ನಿಂದ ಮಂಗಳವಾರ ರಾತ್ರಿ 8 ಗಂಟೆಗೆ 206.76 ಮೀಟರ್‌ಗೆ ಏರಿದೆ. ಹರಿಯಾಣದ ಹತ್ನಿಕುಂಡ್ ನಿಂದ ನದಿಗೆ ಹೆಚ್ಚಿನ ನೀರು ಬಿಟ್ಟಿರುವುದೇ ಇದಕ್ಕೆ ಕಾರಣ. ಯಮುನಾ ನದಿಯ ನೀರಿನ ಮಟ್ಟ 207 ಮೀಟರ್‌ಗೆ ಏರುತ್ತಿರುವ ಬಗ್ಗೆ ಸಿಡಬ್ಲ್ಯೂಸಿ ಆತಂಕ ವ್ಯಕ್ತಪಡಿಸಿತ್ತು.

ಯಮುನೆಯ ನೀರಿನ ಮಟ್ಟ ಏರಿಕೆ (ಬುಧವಾರದ ಅಂಕಿ ಅಂಶಗಳು)

ಸಮಯ ನೀರಿನ ಮಟ್ಟ (ಮೀಟರ್‌ಗಳಲ್ಲಿ)
04:00.am 207.06
05:00.am 207.08
06:00.am 207.14
07:00.am 207.18
08:00.am 207.25
09:00.am 207.32
10:00.am 207.37
11:00. am 207.38
12:00. am 207.48

3 ಬಾರಿ 207 ಮೀ.​ಗಡಿ ದಾಟಿದ ಯಮುನೆ:1978ರಲ್ಲಿ ದೆಹಲಿಯ ಅನೇಕ ಪ್ರದೇಶಗಳು ಸಂಪೂರ್ಣವಾಗಿ ಪ್ರವಾಹದಲ್ಲಿ ಮುಳುಗಿದ್ದವು. ನಂತರ ಹರಿಯಾಣದಿಂದ ಸಾಕಷ್ಟು ನೀರನ್ನು ಯಮುನಾ ನದಿಗೆ ಬಿಡಲಾಯಿತು. ಆಗ ಯಮುನಾ ನದಿಯ ಮಟ್ಟವು ಕಬ್ಬಿಣದ ಸೇತುವೆಯ ಮೇಲೆ 207.49 ಮೀಟರ್‌ಗಳ ಗಡಿಯನ್ನು ಮುಟ್ಟಿತ್ತು. ಯಮುನಾ ನದಿಯ ಮಟ್ಟ ಈ ಮಟ್ಟಕ್ಕೆ ಏರಿದ್ದು ಇದೇ ಮೊದಲು. ಇದಕ್ಕೂ ಮುನ್ನ ಯಮುನಾ ನದಿಯ ನೀರಿನ ಮಟ್ಟ ಎರಡು ಬಾರಿ 207 ಮೀಟರ್‌ಗಳ ಗಡಿ ದಾಟಿತ್ತು. 2010 ರಲ್ಲಿ 207.11 ಮೀಟರ್ ಮತ್ತು 2013 ರಲ್ಲಿ 207.32 ಮೀಟರ್‌ಗೆ ಏರಿತು. ಆಗ ರಾಜಧಾನಿ ದೆಹಲಿಯಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಸುತ್ತಲೂ ನೀರು ಮಾತ್ರ ಕಾಣುತ್ತಿತ್ತು. ಆದರೆ ಈಗ ಅಂತಹ ಸನ್ನಿವೇಶಗಳು ಮತ್ತೊಮ್ಮೆ ಎದುರಾಗುವಂತಿದೆ.

ಮಂಗಳವಾರ 85 ಮಂದಿ ರಕ್ಷಣೆ: ಯಮುನಾ ನದಿಯ ನೀರಿನ ಮಟ್ಟ ನಿರಂತರವಾಗಿ ಏರುತ್ತಿರುವ ಬಗ್ಗೆ ದೆಹಲಿಯಲ್ಲಿ ಉನ್ನತ ಮಟ್ಟದ ಸಭೆ ನಡೆಯುತ್ತಿದೆ. ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಎಲ್‌ಜಿ ವಿಕೆ ಸಕ್ಸೇನಾ ಪರಿಸ್ಥಿತಿ ಕುರಿತು ಹಲವು ಸಭೆಗಳನ್ನು ನಡೆಸಿದ್ದಾರೆ. ಇದಲ್ಲದೇ ಯಮುನಾ ನದಿಯ ಕೆಳಭಾಗದಲ್ಲಿ ಪ್ರವಾಹ ಪೀಡಿತ ಜನರಿಗಾಗಿ ಶಿಬಿರಗಳನ್ನು ಸಹ ಸ್ಥಾಪಿಸಲಾಗಿದೆ. ಮಂಗಳವಾರ ತಡರಾತ್ರಿ ಬೋಟ್ ಕ್ಲಬ್ ತಂಡ ಪ್ರವಾಹದಲ್ಲಿ ಸಿಲುಕಿದ್ದ 85 ಜನರನ್ನು ರಕ್ಷಿಸಿತ್ತು. ಅವರನ್ನು ಪರಿಹಾರ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ. ನಿರಾಶ್ರಿತರಿಗೆ ಸರ್ಕಾರದಿಂದ ಎಲ್ಲ ಆಹಾರ ಮತ್ತು ಪಾನೀಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.

ಸಂತ್ರಸ್ತರ ನೆರವಿಗೆ ಜಮಾಯಿಸಿದ ಸಂಘ ಸಂಸ್ಥೆಗಳು:ರಾಜಕೀಯ ಪಕ್ಷಗಳು, ಸಾಮಾಜಿಕ ಸಂಘಟನೆಗಳು ಕೂಡ ಪ್ರವಾಹ ಸಂತ್ರಸ್ತರ ನೆರವಿಗೆ ಮುಂದಾಗಿವೆ. ಭಾರತೀಯ ಜನತಾ ಪಕ್ಷವು ವಿವಿಧ ಪ್ರದೇಶಗಳಲ್ಲಿ 8 ಪರಿಹಾರ ಶಿಬಿರಗಳನ್ನು ಸ್ಥಾಪಿಸಿದೆ. ಇದಲ್ಲದೇ, ದೆಹಲಿ ಗುರುದ್ವಾರ ಸಿಖ್ ನಿರ್ವಹಣಾ ಸಮಿತಿಯಿಂದಲೂ ಲಾಂಗರ್‌ಗೆ ವ್ಯವಸ್ಥೆ ಮಾಡಲಾಗಿದೆ.

ಅಪಾರ ಬೆಳೆ ಹಾನಿ:ಯಮುನಾ ನದಿಯ ಪ್ರವಾಹದಿಂದಾಗಿ ಸಾಕಷ್ಟು ಬೆಳೆ ಹಾನಿಯಾಗಿದೆ. ಯಮುನಾ ಖದರ್ ನಲ್ಲಿ ಹಲವು ಹೆಕ್ಟೇರ್ ಗದ್ದೆಗಳು ಹಾಳಾಗಿವೆ. ಹತ್ತಾರು ನರ್ಸರಿ ಗಿಡಗಳೂ ನಾಶವಾಗಿವೆ. ಇದರಿಂದ ರೈತರಿಗೆ ಕೋಟಿಗಟ್ಟಲೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ವಿಪತ್ತು ನಿರ್ವಹಣೆಗೆ ಕೇಂದ್ರದಿಂದ ರಾಜ್ಯಗಳಿಗೆ ಹಣ:ಭಾರತ ಸರ್ಕಾರ ಇಂದು 22 ರಾಜ್ಯ ಸರ್ಕಾರಗಳಿಗೆ ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿಗಳಿಗೆ (SDRF) 7,532 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ.

ದೇಶದ ವಿವಿಧ ಭಾಗಗಳಲ್ಲಿ ಘಟಿಸಿದ ಮಳೆ ಅನಾಹುತಗಳು:

  • ಪಂಜಾಬ್​ನಲ್ಲಿ 10 ಸಾವಿರ ಜನರ ಸ್ಥಳಾಂತರ:ಕಳೆದ ಮೂರು ದಿನಗಳಲ್ಲಿ ಪಂಜಾಬ್‌ನ ಅಧಿಕಾರಿಗಳು ಸುಮಾರು 10 ಸಾವಿರ ಜನರನ್ನು ಅಪಾಯಕಾರಿ ಪ್ರದೇಶಗಳಿಂದ ಸ್ಥಳಾಂತರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಂಜಾಬ್‌ನ ಪಟಿಯಾಲ, ರೂಪನಗರ, ಮೋಗಾ, ಲುಧಿಯಾನ, ಮೊಹಾಲಿ, ಎಸ್‌ಬಿಎಸ್ ನಗರ ಮತ್ತು ಫತೇಘರ್ ಸಾಹಿಬ್ ಜಿಲ್ಲೆಗಳಲ್ಲಿ ಸುಮಾರು 10 ಸಾವಿರ ಜನರನ್ನು ಸ್ಥಳಾಂತರಿಸಲಾಗಿದೆ. ಸರ್ಕಾರದ ಅಂಕಿ- ಅಂಶಗಳ ಪ್ರಕಾರ, ಪಂಜಾಬ್ ಮತ್ತು ಹರಿಯಾಣದಲ್ಲಿ ಮಳೆ ಸಂಬಂಧಿತ ಘಟನೆಗಳ ಪರಿಣಾಮವಾಗಿ 18 ಜನರು ಸಾವನ್ನಪ್ಪಿದ್ದಾರೆ. ಅವರಲ್ಲಿ ಏಳು ಮಂದಿ ಹರಿಯಾಣದವರು. ಪಂಜಾಬ್​​ನಲ್ಲಿ ಮನೆ ಕುಸಿದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ.
    ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಯಮುನೆ
  • ಅಂಬಾಲಾ ಪ್ರವಾಹದಿಂದ ಹೆಚ್ಚು ಹಾನಿಗೊಳಗಾದ ಜಿಲ್ಲೆ:ಹರಿಯಾಣದ 'ಅಂಬಾಲಾ' ಪ್ರವಾಹದಿಂದ ಹೆಚ್ಚು ಹಾನಿಗೊಳಗಾದ ಜಿಲ್ಲೆ ಎಂದು ಹರಿಯಾಣ ಸಿಎಂ ಘೋಷಿಸಿದ್ದಾರೆ. ವೈಮಾನಿಕ ಸಮೀಕ್ಷೆಯ ನಂತರ ಪ್ರವಾಹ ಪರಿಸ್ಥಿತಿ ಕುರಿತು ಹರಿಯಾಣ ಮುಖ್ಯಮಂತ್ರಿ ಎಂಎಲ್ ಖಟ್ಟರ್ ಪ್ರತಿಕ್ರಿಯಿಸಿದ್ದಾರೆ. "ಅಂಬಾಲವು ಪ್ರವಾಹದಿಂದ ಹೆಚ್ಚು ಹಾನಿಗೊಳಗಾದ ಜಿಲ್ಲೆಯಾಗಿದೆ. 40 ಗ್ರಾಮಗಳು ಭಾರೀ ಪ್ರಮಾಣದಲ್ಲಿ ಜಲಾವೃತವಾಗಿವೆ. ನಮಗೆ ಸಹಾಯ ಬೇಕಾದಲ್ಲೆಲ್ಲ ಆಸ್ಥಳಗಳಿಗೆ ಎನ್​ಡಿಆರ್​ಎಫ್​ ಮತ್ತು ಸೇನೆಯನ್ನು ಕರೆಸಿದ್ದೇವೆ ಎಂದು ತಿಳಿಸಿದ್ದಾರೆ.
    ಜಲಾವೃತಗೊಂಡ ಕೃಷಿ ಭೂಮಿ
  • ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ:ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಇಂದು ರಾಜ್ಯದ ಮಳೆ ಪೀಡಿತ ಜಿಲ್ಲೆಗಳ ವೈಮಾನಿಕ ಸಮೀಕ್ಷೆ ನಡೆಸಿದರು. ಎಲ್ಲ ಸಂತ್ರಸ್ತ ವ್ಯಕ್ತಿಗಳಿಗೆ ನೆರವು ನೀಡುವ ಕಾರ್ಯ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
  • ಧೌಲಿ ಮತ್ತು ಕಾಳಿ ನದಿಗಳ ನೀರಿನ ಮಟ್ಟ ಹೆಚ್ಚಳ: ಉತ್ತರಾಖಂಡದ ಪಿಥೋರಗಢ್ ಜಿಲ್ಲೆಯ ಗಡಿ ಪ್ರದೇಶವಾದ ಧಾರ್ಚುಲಾದಲ್ಲಿ ಚಿರ್ಕಿಲಾ ಅಣೆಕಟ್ಟಿನಿಂದ ನೀರನ್ನು ಬಿಡುಗಡೆ ಮಾಡುವುದರಿಂದ ಧೌಲಿ ಮತ್ತು ಕಾಳಿ ನದಿಗಳ ನೀರಿನ ಮಟ್ಟ ಹೆಚ್ಚಾಗಿದೆ.
    ಸುರಕ್ಷಿತ ಸ್ಥಳಗಳಿಗೆ ಜನರ ಸ್ಥಳಾಂತರ
  • ಗುಡ್ಡ ಕುಸಿತ: ಉತ್ತರಾಖಂಡದ ಚಮೋಲಿಯಲ್ಲಿ ಭೀಕರ ಮಳೆಯ ಪರಿಣಾಮ ಗುಡ್ಡ ಕುಸಿದಿದೆ. ಆಯ್ದ ರಾಜ್ಯಗಳಿಗೆ ಐಎಂಡಿ ರೆಡ್ ಅಲರ್ಟ್ ನೀಡಿದೆ.
  • ಈ ರಾಜ್ಯಗಳಿಗೆ IMD ಎಚ್ಚರಿಕೆ:ಬಿಹಾರ, ಪಶ್ಚಿಮ ಬಂಗಾಳ, ಸಿಕ್ಕಿಂ ಮತ್ತು ಮೇಘಾಲಯಕ್ಕೆ ರೆಡ್ ಅಲರ್ಟ್ ನೀಡಿದೆ. ಅಲ್ಲಿ ಜುಲೈ 12 ರಂದು ತೀವ್ರ ಮಳೆ ಮತ್ತು ಸಂಭಾವ್ಯ ಅಪಾಯಕಾರಿ ಪ್ರವಾಹವನ್ನು ನಿರೀಕ್ಷಿಸಲಾಗಿದೆ. ಅದರ ಹೊರತಾಗಿ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿಯೂ ರೆಡ್ ಅಲರ್ಟ್ ನೀಡಲಾಗಿದೆ. ಇಂತಹ ಅಪಾಯಕಾರಿ ಹವಾಮಾನ ಪರಿಸ್ಥಿತಿಗಳಲ್ಲಿ ಜನರು ಜಾಗರೂಕರಾಗಿರಲು ಎಚ್ಚರಿಕೆ ನೀಡಿದೆ.
  • ಮುಂದಿನ 2 ದಿನಗಳಲ್ಲಿ ಮತ್ತೆ ಭೂಕುಸಿತ ಸಾಧ್ಯತೆ:ಹಿಮಾಚಲ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 4 ಜಿಲ್ಲೆಗಳಲ್ಲಿ ಮಾತ್ರ ಭಾರಿ ಮಳೆಯಾಗಿದೆ. ಮುಂದಿನ 2 ದಿನಗಳಲ್ಲಿ ಮಳೆ ಕಡಿಮೆಯಾಗುವ ಸಾಧ್ಯತೆಯಿದೆ. ಜುಲೈ 14 ರಂದು ಮತ್ತೆ ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ಮುಂದಿನ 48 ಗಂಟೆಗಳಲ್ಲಿ ಕೆಲವು ಸ್ಥಳಗಳಲ್ಲಿ ಭೂಕುಸಿತ ಸಂಭವಿಸಬಹುದು ಎಂದು ಐಎಂಡಿ ವಿಜ್ಞಾನಿ ಸುರೇಂದರ್ ಪಾಲ್ ಹೇಳಿದರು.
    ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಯಮುನೆ
  • ಭರದಿಂದ ಸಾಗಿದ ಪರಿಹಾರ ಕಾರ್ಯ:ಪ್ರವಾಹ ಪೀಡಿತ ಪಂಜಾಬ್ ಮತ್ತು ಹರಿಯಾಣದಲ್ಲಿ ಪರಿಹಾರ ಕಾರ್ಯ ಭರದಿಂದ ಸಾಗಿವೆ. ಭಾರಿ ಮಳೆಯಿಂದಾಗಿ ಪಂಜಾಬ್ ಮತ್ತು ಹರಿಯಾಣದಲ್ಲಿ ಪ್ರವಾಹ ಉಂಟಾಗಿದ್ದು, ಪರಿಹಾರ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಲಾಗಿದೆ.
  • ಕೇದಾರನಾಥ ಧಾಮ ಯಾತ್ರೆ ಸ್ಥಗಿತ:ಉತ್ತರಾಖಂಡದ ಸೋನ್‌ಪ್ರಯಾಗ ಮತ್ತು ಗೌರಿಕುಂಡ್‌ನಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಕೇದಾರನಾಥ ಧಾಮ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ಖಚಿತಪಡಿಸಿದ್ದಾರೆ. ನಿರಂತರ ಹವಾಮಾನ ವೈಪರೀತ್ಯದಿಂದ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಜಿಲ್ಲಾಡಳಿತ ಈ ನಿರ್ಧಾರ ಕೈಗೊಂಡಿದೆ. ಮಳೆಯಿಂದಾಗಿ ರಾಜ್ಯದ ನಾಲ್ಕು ರಸ್ತೆಗಳು ಮತ್ತು ಹತ್ತು ಸಂಪರ್ಕ ರಸ್ತೆಗಳು ಅವಶೇಷಗಳಿಂದ ಮುಚ್ಚಲ್ಪಟ್ಟಿವೆ. ಭಾರಿ ಮಳೆಯಿಂದಾಗಿ ಮಂದಾಕಿನಿ ಮತ್ತು ಅಲಕನಂದಾ ನದಿಗಳು ಹೆಚ್ಚಿನ ಮಟ್ಟದಲ್ಲಿ ಹರಿಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತೀವ್ರ ಹವಾಮಾನ ಪರಿಸ್ಥಿತಿಗಳಿಗೆ ಪ್ರತಿಕ್ರಿಯಿಸಿದ ಭಾರತೀಯ ಹವಾಮಾನ ಇಲಾಖೆ (IMD) ಈ ವಾರದ ಆರಂಭದಲ್ಲಿ ಜುಲೈ 12ಕ್ಕೆ ಆರೆಂಜ್​ ಅಲರ್ಟ್​ ನೀಡಿತ್ತು. ಉತ್ತರಾಖಂಡ ಮತ್ತು ಪಶ್ಚಿಮ ಉತ್ತರ ಪ್ರದೇಶದ ನೆರೆಯ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿತ್ತು.

ಇದನ್ನೂ ಓದಿ:ಉತ್ತರ ಭಾರತದಲ್ಲಿ ಮಳೆಯ ರುದ್ರನರ್ತನ; 39ಕ್ಕೂ ಹೆಚ್ಚು ಮಂದಿ ಸಾವು, ಹಿಮಾಚಲದಲ್ಲಿ ಜಲಪ್ರಳಯ!

ABOUT THE AUTHOR

...view details