ನವದೆಹಲಿ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ದೆಹಲಿಯ ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ತಗ್ಗು ಪ್ರದೇಶಗಳಲ್ಲಿರುವ ಜನರು ಶೀಘ್ರವಾಗಿ ಸ್ಥಳಾಂತರಗೊಳ್ಳುವಂತೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿದ್ದಾರೆ. ಯಮುನಾ ನದಿ ತುಂಬಿ ಹರಿಯುತ್ತಿದ್ದು, ನೀರು ದಾಖಲೆಯ 208.48 ಮೀಟರ್ ಮಟ್ಟ ತಲುಪಿದೆ. ಈ ಮೂಲಕ 45 ವರ್ಷಗಳ 207.49 ಮೀ ನೀರಿನ ಮಟ್ಟದ ದಾಖಲೆಯನ್ನು ಮುರಿದಿದೆ. ಇದರಿಂದಾಗಿ ನದಿ ಪಾತ್ರದ ಸುತ್ತಮುತ್ತಲಿನ ಹಲವು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ದೆಹಲಿ ಶಾಲಾ, ಕಾಲೇಜುಗಳಿಗೆ ರಜೆ : ಯಮುನಾ ನದಿಯಲ್ಲಿ ನೀರು ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ನಗರದ ಹಲವೆಡೆ ನೀರು ನುಗ್ಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಯಮುನಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚುತ್ತಿದೆ. ಪ್ರವಾಹದಿಂದಾಗಿ ಜಲಾವೃತಗೊಂಡಿರುವ ಪ್ರದೇಶಗಳಲ್ಲಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ.
ನಿಷೇಧಾಜ್ಞೆ ಜಾರಿ: ಯಮುನಾ ನದಿಯಲ್ಲಿ ನಿರಂತರವಾಗಿ ನೀರು ಏರಿಕೆಯಾಗುತ್ತಿದ್ದು ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಕರೆದು ಚರ್ಚೆ ನಡೆಸಿದ್ದಾರೆ. ನದಿ ಪಾತ್ರದಲ್ಲಿರುವ ಮನೆಗಳಿಗೆ ಮತ್ತು ಮಾರುಕಟ್ಟೆಗಳಿಗೆ ನೀರು ನುಗ್ಗಿದ್ದರಿಂದ ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ. ನಗರದ ರಿಂಗ್ ರೋಡ್, ವಾಜಿರಾಬಾದ್ನ ಮಜ್ನುನಾ ಕಾ ತಿಲಾ ಸೇರಿದಂತೆ ಹಲವು ಜನನಿಬಿಡ ಪ್ರದೇಶಗಳು ಜಲಾವೃತಗೊಂಡಿದ್ದು ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಈ ಸಂಬಂಧ ಮುಂಜಾಗೃತಾ ಕ್ರಮವಾಗಿ ಪೊಲೀಸರು ನೆರೆ ಪ್ರದೇಶಗಳಲ್ಲಿ ಸಿಆರ್ಪಿಸಿ ಸೆಕ್ಷನ್ 144 ವಿಧಿಸಿದ್ದಾರೆ. ನಾಲ್ಕು ಮತ್ತು ನಾಲ್ಕಕ್ಕಿಂತ ಹೆಚ್ಚು ಜನರು ಸಂಚರಿಸುವುದು, ಗುಂಪು ಸೇರುವುದು ಇತ್ಯಾದಿಗಳನ್ನು ನಿರ್ಬಂಧಿಸಲಾಗಿದೆ.