ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು 'ರಾಷ್ಟ್ರಪಿತ' ಎಂದು ಕರೆದ ನಂತರ ಹಲವು ಬೆದರಿಕೆಗಳನ್ನು ಎದುರಿಸಿದ ಆಲ್ ಇಂಡಿಯಾ ಇಮಾಮ್ ಆರ್ಗನೈಸೇಶನ್ ಮುಖ್ಯಸ್ಥ ಉಮರ್ ಅಹ್ಮದ್ ಇಲ್ಯಾಸಿ ಅವರಿಗೆ ವೈ ಪ್ಲಸ್ (ವೈ +) ಶ್ರೇಣಿ ಭದ್ರತೆಯನ್ನು ನೀಡಲಾಗಿದೆ.
ಸೆಪ್ಟೆಂಬರ್ 22ರಂದು ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಆಹ್ವಾನದ ಮೇರೆ ಉತ್ತರ ದೆಹಲಿಯ ಮದರಸಾ ತಜ್ವೀದುಲ್ ಕುರಾನ್‌ಗೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭೇಟಿ ನೀಡಿದ್ದರು. ಈ ಭೇಟಿ ಬಳಿಕ ಭಾಗವತ್ ಅವರನ್ನು ರಾಷ್ಟ್ರಪಿತ ಮತ್ತು ರಾಷ್ಟ್ರಋಷಿ ಎಂದು ಇಲ್ಯಾಸಿ ಬಣ್ಣಿಸಿದ್ದರು.
ಇದನ್ನೂ ಓದಿ:ಮೋಹನ್ ಭಾಗವತ್ ರಾಷ್ಟ್ರಪಿತ, ರಾಷ್ಟ್ರ ಋಷಿ ಇದ್ಧಂತೆ: ಇಮಾಮ್ಗಳ ಮುಖ್ಯಸ್ಥರ ಬಣ್ಣನೆ
ಮೋಹನ್ ಭಾಗವತ್ ಅವರು ಮಸೀದಿ ಭೇಟಿ ಹಾಗೂ ಅವರನ್ನು 'ರಾಷ್ಟ್ರಪಿತ' ಎಂದು ಕರೆದ ದಿನದಿಂದಲೂ ತಮಗೆ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿವೆ ಎಂದು ಇಮಾಮ್ ಉಮರ್ ಅಹ್ಮದ್ ತಿಳಿಸಿದ್ದಾರೆ. ನೀವು ಈಗ ನರಕದ ಬೆಂಕಿಯಲ್ಲಿ ಸುಟ್ಟು ಹೋಗುತ್ತೀರಿ ಎಂದು ಸೆಪ್ಟೆಂಬರ್ 23ರಂದು ಇಂಗ್ಲೆಂಡ್‌ನಿಂದ ಬೆದರಿಕೆ ಕರೆ ಬಂದಿತ್ತು. ನೀವು ಜೀವಂತವಾಗಿರುವುದಿಲ್ಲ ಎಂದು ಜೀವ ಬೆದರಿಕೆ ಹಾಕಲಾಗಿತ್ತು ಎಂದು ಇಲ್ಯಾಸಿ ಹೇಳಿದ್ದಾರೆ.
ಇಂಗ್ಲೆಂಡ್ನಂತೆ ದುಬೈ ಮತ್ತು ಕೋಲ್ಕತ್ತಾದಿಂದ ದೂರವಾಣಿ ಮೂಲಕ ಬೆದರಿಕೆ ಕರೆಗಳು ಬಂದಿವೆ ಎಂದು ತಿಲಕ್ ಲೇನ್ ಪೊಲೀಸ್ ಠಾಣೆಯಲ್ಲಿ ಅವರು ದೂರು ದಾಖಲಿಸಿದ್ದರು. ಜೊತೆಗೆ ಈ ಬಗ್ಗೆ ಗೃಹ ಸಚಿವಾಲಯಕ್ಕೂ ಮಾಹಿತಿ ನೀಡಿದ್ದರು. ಇದರ ಬೆನ್ನಲ್ಲೇ ಅವರಿಗೆ ಸರ್ಕಾರ ವೈ ಪ್ಲಸ್ ಶ್ರೇಣಿಯ ಭದ್ರತೆ ನೀಡಿದೆ.
ಗೃಹ ವ್ಯವಹಾರಗಳ ಸಚಿವಾಲಯವು ನೀಡಿರುವ ವೈ ಪ್ಲಸ್ ಶ್ರೇಣಿ ಭದ್ರತೆಗಾಗಿ ನಾನು ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ ಎಂದು ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ತಿಳಿಸಿದ್ದಾರೆ. ಅಲ್ಲದೇ, ಈ ಹಿಂದೆ ನೀಡಿದ್ದ ಹೇಳಿಕೆಗೆ ಈಗಲೂ ಬದ್ಧರಾಗಿರುವುದಾಗಿ ತಿಳಿಸಿರುವ ಅವರು, ಈ ಬೆದರಿಕೆಗಳಿಗೆ ಮಣಿಯುವುದಿಲ್ಲ ಮತ್ತು ತಮ್ಮ ಹೇಳಿಕೆಯನ್ನು ಹಿಂದೆ ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ:ಮೋಹನ್ ಭಾಗವತ್ ರಾಷ್ಟ್ರಪಿತ ಎಂದಿದ್ದ ಇಲ್ಯಾಸಿ: ಶಿರಚ್ಛೇದ ಮಾಡುವುದಾಗಿ ಬೆದರಿಕೆ ಕರೆ