ನವದೆಹಲಿ:ವಾಯುಮಾಲಿನ್ಯ ತಡೆಗೆ ಪಟಾಕಿ ಸಿಡಿಸಬಾರದು ಎಂದು ನ್ಯಾಯಾಲಯವೇ ತಾಕೀತು ಮಾಡಬೇಕಿಲ್ಲ. ಮಾಲಿನ್ಯ ತಡೆಗಟ್ಟುವುದು ಪ್ರತಿಯೊಬ್ಬರ ಕರ್ತವ್ಯ. ಅದನ್ನು ಅರಿತುಕೊಂಡರೆ ಸಾಕು ಎಂದು ಸುಪ್ರೀಂಕೋರ್ಟ್ ಮಂಗಳವಾರ ಹೇಳಿದೆ. ಪರಿಸರವನ್ನು ಕಲುಷಿತಗೊಳಿಸುವ ಆಚರಣೆಗಳು ಸ್ವಾರ್ಥಪರವಾಗಿವೆ. ದೀಪಾವಳಿ ಸೇರಿದಂತೆ ಇತರ ಹಬ್ಬಗಳಲ್ಲಿ ಪಟಾಕಿ ಸಿಡಿಸುವುದನ್ನು ತಡೆಯುವ ಕುರಿತು ನ್ಯಾಯಾಲಯದ ಆದೇಶಗಳನ್ನು ಪಾಲಿಸುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಇದೇ ವೇಳೆ ಸೂಚಿಸಿತು.
ರಾಜಸ್ಥಾನದಲ್ಲಿ ವಾಯು ಮತ್ತು ಶಬ್ಧ ಮಾಲಿನ್ಯ ವಿಪರೀತವಾಗಿದ್ದು, ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ನಿರ್ದೇಶನ ನೀಡಲು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ದೊಡ್ಡವರಿಂದಲೇ ಹೆಚ್ಚು ಸಮಸ್ಯೆ:ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ಎಂ ಎಂ ಸುಂದ್ರೇಶ್ ಅವರಿದ್ದ ಪೀಠವು, ಪಟಾಕಿಗಳ ಬಳಕೆ ನಿಲ್ಲಿಸುವವರೆಗೆ ಅವುಗಳ ಮೇಲೆ ಸಂಪೂರ್ಣವಾಗಿ ನಿಷೇಧ ತರಲು ಸಾಧ್ಯವಿಲ್ಲ. ಜನರು ತಮ್ಮ ಕರ್ತವ್ಯವನ್ನು ಮರೆಯುತ್ತಾರೆ. ಪರಿಸರದ ವಿಷಯಕ್ಕೆ ಬಂದಾಗ ಅದು ನ್ಯಾಯಾಲಯದ ಕರ್ತವ್ಯ ಎಂಬ ತಪ್ಪು ಗ್ರಹಿಕೆ ಹೊಂದಿದ್ದಾರೆ. ಇತ್ತೀಚೆಗೆ ಮಕ್ಕಳ ಬದಲಿಗೆ ದೊಡ್ಡವರೇ ಹೆಚ್ಚಾಗಿ ಪಟಾಕಿಗಳನ್ನು ಬಳಸುತ್ತಿದ್ದಾರೆ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.
ಈ ವಿಚಾರದಲ್ಲಿ ಜನರನ್ನು ಸಂವೇದನಾಶೀಲಗೊಳಿಸಬೇಕಿದೆ. ನಿರ್ದಿಷ್ಟ ದಿನಗಳಿಗೆ ಪಟಾಕಿಗಳ ಬಳಕೆಯನ್ನು ಸೀಮಿತಗೊಳಿದರೆ, ಮಾಲಿನ್ಯ ಕಡಿಮೆಯಾಗುವುದಿಲ್ಲ. ವಾಯು ಮತ್ತು ಶಬ್ಧ ಮಾಲಿನ್ಯವನ್ನು ತಡೆಯುವುದು ಪ್ರತಿಯೊಬ್ಬರ ಮೇಲಿನ ಹೊಣೆಯಾಗಿದೆ ಎಂದು ಕೋರ್ಟ್ ಹೇಳಿತು.