ಬೆಂಗಳೂರು: ಭಾರತೀಯರ ನೆಚ್ಚಿನ ಮತ್ತು ಅಗ್ಗದ ಪ್ರಯಾಣ ಎಂದರೆ ಅದುವೇ ರೈಲ್ವೆ ಪ್ರಯಾಣ. ಆರಾಮದಾಯಕ ಪ್ರವಾಸಕ್ಕೆ ಬಹುತೇಕ ಜನರು ಒಲವು ತೋರುವುದು ಭಾರತೀಯ ರೈಲ್ವೆಗೆ. ದೀರ್ಘಕಾಲದ, ರಾತ್ರಿ ಪ್ರಯಾಣಗಳು ರೈಲಿನಲ್ಲಿ ಹಿತಕರ ಕೂಡ. ಕಾರಣ ರೈಲಿನಲ್ಲಿ ಆರಾಮಾಗಿ ಓಡಾಡುವುದರ ಜೊತೆಗೆ ರಾತ್ರಿ ನಿದ್ದೆಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ. ಮಕ್ಕಳಲ್ಲಿ ಈ ರೈಲು ಸದಾ ಕೌತುಕ ಮೂಡಿಸುತ್ತದೆ. ಇದೇ ಕಾರಣಕ್ಕೆ ರೈಲಿನ ಮೊದಲ ಪ್ರಯಾಣ ಬಲು ಸೊಗಸಾಗಿರುತ್ತದೆ. ದೇಶದಲ್ಲಿ ಅತ್ಯಂತ ಉದ್ದದ ಸಂಪರ್ಕ ವ್ಯವಸ್ಥೆ ಹೊಂದಿರುವ ಈ ರೈಲುಗಳು ಪ್ರಯಾಣದ ಅನುಭವವೇ ಮಜವಾಗಿರುತ್ತದೆ.
ಇಂತಹ ಅದ್ಬುತ ರೈಲ್ವೆ ಪ್ರಯಾಣದ ಅನುಭೂತಿ ಪ್ರತಿಯೊಬ್ಬರ ಬಳಿ ಇರುತ್ತದೆ. ಅನೇಕ ಬಾರಿ ಇದನ್ನು ಆಪ್ತರ ಬಳಿ ಹೇಳಿರುತ್ತೇವೆ. ಇದೀಗ ನೀವು ಆ ಕಥೆಯನ್ನು ಭಾರತೀಯ ರೈಲ್ವೆಗೆ ಹೇಳಿ ಬಹುಮಾನ ಕೂಡ ಗೆಲ್ಲಬಹುದಾಗಿದೆ. ಈ ಸಂಬಂಧ ರೈಲ್ವೆ ಇಲಾಖೆ ಸ್ಪರ್ಧೆ ಏರ್ಪಡಿಸಿದ್ದು, ಇದರ ಮಾಹಿತಿ ಇಲ್ಲಿದೆ.
ಏನಿದು ಸ್ಪರ್ಧೆ: 'ರೈಲ್ವೆ ಯಾತ್ರಾ ವೃತ್ತಾಂತ ಪುರಸ್ಕರ್ ಯೋಜನೆ' (ರೈಲು ಪ್ರಯಾಣದ ಸ್ಪರ್ಧೆ) ಅಡಿ ಭಾರತದ ನಿವಾಸಿಗಳು ತಮ್ಮ ಅತ್ಯದ್ಬುತ ರೈಲ್ವೆ ಪ್ರಯಾಣದ ಕುರಿತು ಅನುಭವಗಳನ್ನು ಬರೆದು ರೈಲ್ವೆ ಇಲಾಖೆಗೆ ಬರೆದು ಕಳಿಸಬಹುದು. ಅತ್ಯದ್ಭುತ ರೈಲು ಪ್ರಯಾಣದ ಅನುಭವ ಬರೆದು ಆಯ್ಕೆಗೊಂಡವರಿಗೆ 10 ಸಾವಿರ ಬಹುಮಾನವನ್ನು ಘೋಷಣೆ ಮಾಡಲಾಗಿದೆ. ಎರಡನೇ ಸ್ಪರ್ಧಿಗೆ 8 ಸಾವಿರ ರೂ, ಮೂರನೇ ಬಹುಮಾನ ಪಡೆದವರಿಗೆ 6 ಸಾವಿರ ರೂ ಘೋಷಣೆ ಮಾಡಲಾಗಿದೆ. ಇದರ ಜೊತೆಗೆ 5 ಸಮಾಧಾನಕರ ಬಹುಮಾನ ಇದೆ. ಇವರಿಗೆ ತಲಾ 4 ಸಾವಿರ ಬಹುಮಾನ ಇದೆ.