ನವದೆಹಲಿ : ಕುಸ್ತಿ ಫೆಡರೇಶನ್ ಆಫ್ ಇಂಡಿಯಾದ (ಡಬ್ಲ್ಯುಎಫ್‌ಐ) ನಿರ್ಗಮಿತ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ಮಾಡಿರುವ ಲೈಂಗಿಕ ಕಿರುಕುಳ ಆರೋಪ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಭಾರತದ ಕುಸ್ತಿಪಟು ಬಬಿತಾ ಫೋಗಟ್ ಅವರು ಟ್ವೀಟ್ವೊಂದನ್ನು ಮಾಡಿದ್ದು, ಸಾಕ್ಷಿ ಮಲಿಕ್ ಅವರು "ಕಾಂಗ್ರೆಸ್ನ ಕೈಗೊಂಬೆ" ಎಂದು ಆರೋಪಿಸಿದ್ದಾರೆ.
ಇಂದು ಹಿಂದಿಯಲ್ಲಿ ಟ್ವೀಟ್ ಮಾಡಿರುವ ಬಬಿತಾ ಫೋಗಟ್, "ನಿನ್ನೆ ನನ್ನ ತಂಗಿ ಮತ್ತು ಅವಳ ಗಂಡನ ವಿಡಿಯೋ ನೋಡುವಾಗ ನನಗೆ ತುಂಬಾ ಬೇಸರವಾಯಿತು. ಜೊತೆಗೆ ನಗು ಕೂಡಾ ಬಂತು. ಮೊದಲನೆಯದಾಗಿ, ಸಾಕ್ಷಿ ಮಲಿಕ್ ತೋರಿಸಿದ ಅನುಮತಿ ಪತ್ರದಲ್ಲಿ ನನ್ನ ಸಹಿ ಇಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ಗೌರವಾನ್ವಿತ ಪ್ರಧಾನ ಮಂತ್ರಿಗಳು ಮತ್ತು ದೇಶದ ನ್ಯಾಯಾಂಗ ವ್ಯವಸ್ಥೆಯ ಮೇಲೆ ನನಗೆ ನಂಬಿಕೆ ಇದೆ. ಖಂಡಿತವಾಗಿಯೂ ಸತ್ಯ ಹೊರಬರುತ್ತದೆ ಎಂದು ನಾನು ಮೊದಲನೇ ದಿನದಿಂದಲೇ ಹೇಳುತ್ತಿದ್ದೇನೆ. ಒಬ್ಬ ಮಹಿಳಾ ಆಟಗಾರ್ತಿಯಾಗಿ ನಾನು ದೇಶದ ಎಲ್ಲ ಆಟಗಾರ್ತಿಯರ ಜೊತೆಗಿರುತ್ತೇನೆ, ಮುಂದೆಯೂ ಕೂಡ ಇರುತ್ತೇನೆ" ಎಂದರು.
"ಅಕ್ಕ, ನೀವು ಬಾದಾಮಿ ಹಿಟ್ಟಿನಿಂದ ಮಾಡಿದ ರೊಟ್ಟಿಯನ್ನು ತಿನ್ನಬಹುದು, ಆದರೆ ನಾವು ನನ್ನ ದೇಶದ ಜನರು ಗೋಧಿಯಿಂದ ಮಾಡಿದ ಬ್ರೆಡ್ ಅನ್ನು ಸಹ ತಿನ್ನುತ್ತೇವೆ. ನೀವು ಕಾಂಗ್ರೆಸ್ ಕೈಗೊಂಬೆಯಾಗಿದ್ದೀರಿ ಎಂದು ದೇಶದ ಜನರಿಗೆ ಅರ್ಥವಾಗಿದೆ. ಈಗ ನಿಮ್ಮ ನಿಜವಾದ ಉದ್ದೇಶವನ್ನು ಹೇಳಬೇಕಾದ ಸಮಯ ಬಂದಿದೆ. ಏಕೆಂದರೆ, ಸಾರ್ವಜನಿಕರೇ ನಿಮಗೆ ಪ್ರಶ್ನೆ ಕೇಳುತ್ತಿದ್ದಾರೆ" ಎಂದು ಉತ್ತರ ಪ್ರದೇಶದ ಭಾರತೀಯ ಜನತಾ ಯುವ ಮೋರ್ಚಾದ ಸಹ ಉಸ್ತುವಾರಿಯೂ ಆಗಿರುವ ಬಬಿತಾ ಫೋಗಟ್ ಬೇಸರ ವ್ಯಕ್ತಪಡಿಸಿದ್ದಾರೆ.