ನವದೆಹಲಿ: ಲೈಂಗಿಕ ಕಿರುಕುಳ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಈ ಬೆನ್ನಲ್ಲೇ ಬೆಳಗ್ಗೆಯಿಂದ ಎಲ್ಲಾ ಕ್ರೀಡಾಪಟುಗಳು ಪ್ರತಿಭಟನಾ ಸ್ಥಳದಲ್ಲಿಯೇ ತಮ್ಮ ವ್ಯಾಯಾಮ ಮತ್ತು ತರಬೇತಿ ಪ್ರಾರಂಭಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಒಲಿಂಪಿಯನ್ ಬಜರಂಗ್ ಪುನಿಯಾ, "ನಾವು ಇಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ದೇಶಕ್ಕಾಗಿ ಪದಕ ಗೆಲ್ಲುವ ಜವಾಬ್ದಾರಿಯನ್ನು ಜನತೆ ನಮಗೆ ನೀಡಿದ್ದು, ಅದನ್ನು ಈಡೇರಿಸಬೇಕಾಗಿದೆ. ಹಾಗಾಗಿ, ಇಲ್ಲಿಯೇ ತರಬೇತಿ ಪ್ರಾರಂಭಿಸಲಾಗಿದೆ. ಇಲ್ಲಿಯವರೆಗೆ ದೆಹಲಿ ಪೊಲೀಸರು ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸಿಲ್ಲ. ಆದ್ದರಿಂದ ನಮ್ಮ ಪ್ರತಿಭಟನೆ ಮುಂದುವರೆಯಲಿದೆ" ಎಂದು ಹೇಳಿದರು.
ಏಳು ಮಂದಿ ಕುಸ್ತಿಪಟುಗಳು ಡಬ್ಲ್ಯುಎಫ್‌ಐ ಮುಖ್ಯಸ್ಥರ ವಿರುದ್ಧ ದೂರು ನೀಡಿದರೂ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿಲ್ಲ ಎಂದು ಆರೋಪಿಸಿ ಕುಸ್ತಿಪಟುಗಳು ಭಾನುವಾರದಿಂದ ತಮ್ಮ ಪ್ರತಿಭಟನೆ ಪುನರಾರಂಭಿಸಿದ್ದಾರೆ. ಜೊತೆಗೆ, ಪೊಲೀಸರು ಎಫ್‌ಐಆರ್ ದಾಖಲಿಸುವವರೆಗೆ ಹೋರಾಟ ಮುಂದುವರಿಸುವುದಾಗಿ ಪಟ್ಟು ಹಿಡಿದ್ದಾರೆ. ಈ ಹಿಂದೆ ಆಶ್ವಾಸನೆ ನೀಡಿದ್ದರಿಂದ ನಾವು ಜನವರಿಯಲ್ಲಿ ತಮ್ಮ ಪ್ರತಿಭಟನೆಯನ್ನು ಕೊನೆಗೊಳಿಸಿದ್ದೆವು. ಅದು ಸುಳ್ಳು ಆಶ್ವಾಸನೆಯಾಗಿದ್ದು, ಈ ಬಾರಿ ಕ್ರಮ ಕೈಗೊಳ್ಳದ ಹೊರತು ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ತಿಳಿಸಿದ್ದಾರೆ.
ಈ ಮಧ್ಯೆ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸುವಂತೆ ಕೋರಿ ಪ್ರತಿಭಟನಾನಿರತ ಕುಸ್ತಿಪಟುಗಳು ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಬಳಿಕ, ಸುಪ್ರೀಂ ಕೋರ್ಟ್ ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ. ಮತ್ತು ಆರೋಪವನ್ನು ಗಂಭೀರವಾಗಿ ಪರಿಗಣಿಸಿ, ಈ ಕುರಿತು ವಿವರ ಕಲೆಹಾಕಿ ಶುಕ್ರವಾರದ ವಿಚಾರಣೆಗೆ ನೀಡುವಂತೆ ತಿಳಿಸಿದೆ.
ಇದನ್ನೂ ಓದಿ :ಕುಸ್ತಿ ಫೆಡರೇಷನ್ ಅಧ್ಯಕ್ಷರ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ಎಫ್‌ಐಆರ್ ದಾಖಲಿಸುವಂತೆ ಸುಪ್ರೀಂಗೆ ಮೊರೆ
ಇನ್ನೊಂದಡೆ, ಎಫ್‌ಐಆರ್ ಕುರಿತು ಸೋಮವಾರ ಮಾಹಿತಿ ನೀಡಿದ ಪೊಲೀಸರು, "ನಾವು ಸಾಕಷ್ಟು ಸಾಕ್ಷ್ಯಾಧಾರಗಳನ್ನು ಪಡೆದ ನಂತರ ಈ ಕುರಿತು ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. ಜೊತೆಗೆ, ಆರೋಪದ ಬಗ್ಗೆ ತನಿಖೆ ನಡೆಸಲು ರಚಿಸಲಾಗಿದ್ದ ತನಿಖಾ ಸಮಿತಿಯ ವರದಿಯನ್ನು ಸಹ ಪೊಲೀಸರು ಕೇಳಿದ್ದಾರೆ.
ಹಿಂದಿನ ಪ್ರತಿಭಟನೆ: ಜನವರಿ 18 ರಂದು ಮೊದಲ ಬಾರಿ ಎಲ್ಲ ಕುಸ್ತಿಪಟುಗಳು ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಕುಳಿತಿದ್ದರು. ಭಜರಂಗ್ ಪೂನಿಯಾ, ವಿನೇಶ್ ಫೊಗಟ್, ರವಿ ದಹಿಯಾ ಹಾಗೂ ಸಾಕ್ಷಿ ಮಲಿಕ್ ಸೇರಿದಂತೆ ಅನೇಕ ಕುಸ್ತಿಪಟುಗಳು ಪ್ರತಿಭಟನೆ ನಡೆಸಿದ್ದರು. ಆ ವೇಳೆ ಲೈಂಗಿಕ ಕಿರುಕುಳದ ಆರೋಪಿ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಭಾರತೀಯ ಕುಸ್ತಿ ಒಕ್ಕೂಟದಿಂದ ಕಿತ್ತೊಗೆಯಬೇಕೆಂದು ಆಗ್ರಹಿಸಿದ್ದರು. ಬಳಿಕ, ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಪ್ರಕರಣವನ್ನು ಪರಿಶೀಲಿಸಲು ತನಿಖಾ ಸಮಿತಿಯನ್ನು ಶೀಘ್ರದಲ್ಲಿ ರಚಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ಕ್ರೀಡಾ ತಾರೆ ಮೇರಿ ಕೋಮ್ ಅವರ ಅಧ್ಯಕ್ಷತೆಯಲ್ಲಿ 7 ಸದಸ್ಯರ ಸಮಿತಿಯನ್ನು ರೂಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕುಸ್ತಿಪಟುಗಳು ಪ್ರತಿಭಟನೆ ಹಿಂಪಡೆದಿದ್ದರು.