ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ನಿವಾಸದಲ್ಲಿ ಶುಕ್ರವಾರ ಸಂಜೆ ನಡೆದ ಎರಡನೇ ಸಭೆಯ ಬಳಿಕ ಭಾರತೀಯ ಕುಸ್ತಿಪಟುಗಳು ತಮ್ಮ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ. 'ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಪ್ರತಿಭಟನೆ ಮೊಟಕುಗೊಳಿಸುತ್ತಿರುವುದಾಗಿ' ಕುಸ್ತಿಪಟು ಬಜರಂಗ್ ಪುನಿಯಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಅವರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಜಂತರ್ ಮಂತರ್ನಲ್ಲಿ ಬುಧವಾರದಿಂದ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದರು.
ಕುಸ್ತಿಪಟುಗಳಾದ ಭಜರಂಗ್ ಪುನಿಯಾ, ವಿನೇಶ್ ಫೋಗಟ್, ಸಾಕ್ಷಿ ಮಲಿಕ್, ರವಿ ದಹಿಯಾ, ದೀಪಕ್ ಪುನಿಯಾ ಸೇರಿದಂತೆ ಇತರರು ನಿನ್ನೆ ಸಂಜೆ 7 ಗಂಟೆಗೆ ಕ್ರೀಡಾ ಸಚಿವರ ನಿವಾಸದಲ್ಲಿ ಸಭೆ ನಡೆಸಿ, ಸತತ ಐದು ಗಂಟೆಗಳಿಗೂ ಹೆಚ್ಚು ಕಾಲ ಚರ್ಚಿಸಿದರು. "ನಮ್ಮ ಕ್ರೀಡಾ ಸಚಿವರಿಂದ ಭರವಸೆ ಪಡೆದ ನಂತರ ನಾವು ಪ್ರತಿಭಟನೆಯನ್ನು ಹಿಂಪಡೆಯಲು ನಿರ್ಧರಿಸಿದ್ದೇವೆ" ಎಂದು ಪುನಿಯಾ ಹೇಳಿದ್ದಾರೆ.
'ತಮ್ಮ ಸಚಿವಾಲಯವು ಕುಸ್ತಿಪಟುಗಳ ಕುಂದುಕೊರತೆಗಳನ್ನು ಆಲಿಸಿದೆ. ಅದರಂತೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಕುಸ್ತಿಪಟುಗಳ ಬೇಡಿಕೆಗಳನ್ನು ಈಡೇರಿಸಲಾಗುವುದು. ನಾವು ಇತ್ತೀಚಿನ ದಿನಗಳಲ್ಲಿ ಅನೇಕ ಕ್ರೀಡಾ ಒಕ್ಕೂಟಗಳಲ್ಲಿ ಬದಲಾವಣೆಗಳನ್ನು ನೋಡಿದ್ದೇವೆ ಮತ್ತು ಇದನ್ನು ಪರಿಶೀಲಿಸಲಾಗುವುದು. ಕ್ರೀಡೆಯನ್ನು ಮುಂದಕ್ಕೆ ಕೊಂಡೊಯ್ಯುವ ಬಗ್ಗೆ ಚರ್ಚೆ ನಡೆಸಲಾಗಿದೆ. ಎಲ್ಲ ಆಟಗಾರರು ನಮ್ಮ ಮನವಿಗೆ ಬೆಲೆ ಕೊಟ್ಟು ಪ್ರತಿಭಟನೆ ಕೈಬಿಟ್ಟ ಕಾರಣ, ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಕುಸ್ತಿಪಟುಗಳು ಇಟ್ಟಿರುವ ಬೇಡಿಕೆಗಳನ್ನು ಈಡೇರಿಸಲಾಗುವುದು. ನಾವು ಮೇಲುಸ್ತುವಾರಿ ಸಮಿತಿಯನ್ನು ರಚಿಸುತ್ತೇವೆ ಮತ್ತು ಸದಸ್ಯರ ಹೆಸರನ್ನು ನಾಳೆ ಪ್ರಕಟಿಸುತ್ತೇವೆ' ಎಂದು ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.