ನವದೆಹಲಿ : ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷರ ವಿರುದ್ಧ ಎಫ್ಐಆರ್ ದಾಖಲಿಸಿ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿ ದೇಶದ ಕುಸ್ತಿಪಟುಗಳು ನಡೆಸುತ್ತಿರುವ ಧರಣಿ ಸತ್ಯಾಗ್ರಹ ಮೂರನೇ ದಿನಕ್ಕೆ ಮುಂದುವರೆದಿದೆ. ಕೆಲ ಮಹಿಳಾ ಕುಸ್ತಿಪಟುಗಳ ಮೇಲೆ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರ್ಮಾ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಬ್ರಿಜ್ ಭೂಷಣ್ ಶರ್ಮಾ ಬಿಜೆಪಿಯ ಲೋಕಸಭಾ ಸಂಸದರೂ ಆಗಿದ್ದಾರೆ.
ಈ ಮಧ್ಯೆ ಬ್ರಿಜ್ ಭೂಷಣ್ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ಗೆ ತುರ್ತು ವಿಚಾರಣಾ ಅರ್ಜಿ ಸಲ್ಲಿಸಲಾಗಿದೆ. ಅರ್ಜಿಯನ್ನು ತಕ್ಷಣ ಗಮನಕ್ಕೆ ತೆಗೆದುಕೊಂಡಿರುವ ಸುಪ್ರೀಂಕೋರ್ಟ್ ಈ ಬಗ್ಗೆ ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ. ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಗುರುತು ಮರೆಮಾಚುವ ಸಲುವಾಗಿ ಏಳು ದೂರುದಾರರ ಕುಸ್ತಿಪಟುಗಳ ಹೆಸರನ್ನು ನ್ಯಾಯಾಂಗ ದಾಖಲೆಗಳಿಂದ ಅಳಿಸಿಹಾಕುವಂತೆ ನ್ಯಾಯಾಲಯ ಆದೇಶಿಸಿದೆ ಮತ್ತು ವಿಚಾರಣೆಗೆ ಏಪ್ರಿಲ್ 28 ರಂದು ಮುಂದಿನ ವಿಚಾರಣೆ ನಡೆಸಲಿದೆ.
ತಮ್ಮ ಮೇಲಿನ ಲೈಂಗಿಕ ಕಿರುಕುಳ ಆರೋಪದ ಮೇಲೆ ಪೊಲೀಸರು ಈವರೆಗೂ ಎಫ್‌ಐಆರ್ ದಾಖಲಿಸಿಲ್ಲ ಎಂದು ಆರೋಪಿಸಿ ಏಳು ಮಹಿಳಾ ಕುಸ್ತಿಪಟುಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. "ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಕುಸ್ತಿಪಟುಗಳು ಲೈಂಗಿಕ ಕಿರುಕುಳದ ಬಗ್ಗೆ ಅರ್ಜಿಯಲ್ಲಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ವಿಷಯವನ್ನು ಈ ನ್ಯಾಯಾಲಯವು ಪರಿಗಣಿಸಬೇಕಾಗಿದೆ" ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠ ಹೇಳಿದೆ. ಮುಚ್ಚಿದ ಕವರ್‌ನಲ್ಲಿ ನೀಡಲಾಗುತ್ತಿರುವ ದೂರುಗಳನ್ನು ಮತ್ತೊಮ್ಮೆ ಮರುಮುದ್ರಿಸಿ ಅರ್ಜಿ ಅಡಿ ಇರಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.