ಪಂಜಾಬ್ನಲ್ಲಿ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ಕುಸ್ತಿಪಟು ವಿನೇಶ್ ಫೋಗಟ್ ಪಟಿಯಾಲ (ಪಂಜಾಬ್): ಇಲ್ಲಿ ರೈತರು ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹಕ್ಕೆ ವಿನೇಶ್ ಫೋಗಟ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ರೈತರು ತಮ್ಮ 21 ಬೇಡಿಕೆಗಳಿಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಧರಣಿಯಲ್ಲಿ ರೈತ ಜಗಜಿತ್ ಸಿಂಗ್ ದಲ್ಲೆವಾಲ್ ಮತ್ತು ಅವರ ಇತರ 4 ಸಹೋದ್ಯೋಗಿಗಳು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಪ್ರತಿ ಸಣ್ಣ ಬೇಡಿಕೆಗೂ ಧರಣಿ ನಡೆಸಬೇಕು:ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಅವರು ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರೈತರನ್ನು ಬೆಂಬಲಿಸಲು ಪಟಿಯಾಲ ವಿದ್ಯುತ್ ಮಂಡಳಿಯ ಕೇಂದ್ರ ಕಚೇರಿಗೆ ತಲುಪಿದರು. ಅಲ್ಲಿ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ದೇಶದಲ್ಲಿ ಪ್ರತಿಯೊಂದಕ್ಕೂ ಧರಣಿ ಕೂರಬೇಕಾಗಿದೆ. ಇದು ದೇಶಕ್ಕೆ ಒಳ್ಳೆಯದಲ್ಲ. ಜನರು ತುಂಬಾ ದುಃಖಿತರಾಗಿದ್ದಾರೆ, ಅವರು ತಮ್ಮ ಕುಟುಂಬವನ್ನು ಬಿಟ್ಟು ಹೋಗುತ್ತಿದ್ದಾರೆ. ಜನರು ತುಂಬಾ ತೊಂದರೆ ಅನುಭವಿಸಬಾರದು. ಇಂದು ನಾನು ಈ ಜನರಿಗಾಗಿ ಇಲ್ಲಿದ್ದೇನೆ, ನಮ್ಮ ಹೋರಾಟ ಮುಂದುವರಿಯುತ್ತದೆ ಎಂದಿದ್ದಾರೆ.
ರೈತರಾಗಲಿ, ಕ್ರೀಡಾಪಟುವಾಗಲಿ ಯಾರಿಗೂ ಬೆಲೆ ಇಲ್ಲ. ಸರ್ಕಾರದ ಮೇಲೆ ಕುಳಿತ ಶ್ರೀಸಾಮಾನ್ಯನ ನೋವು ಮರೆತಂತಿದೆ. ನಮ್ಮ ದೇಶದಲ್ಲಿ ಜನಸಾಮಾನ್ಯರಿಗೆ ಕಿಮ್ಮತ್ತಿಲ್ಲ, ಯಾರೇ ಬೀದಿಯಲ್ಲಿ ಕುಳಿತರೂ ಸರ್ಕಾರ ತಲೆಕೆಡಿಸಿಕೊಳ್ಳುವುದಿಲ್ಲ. ರೈತರ ಆತ್ಮ ಕೆಟ್ಟದಾದರೆ ದೇಶ ಎಲ್ಲಿಗೆ ಹೋಗಿದೆಯೋ ಗೊತ್ತಿಲ್ಲ ಎಂದು ವಿನೇಶ್ ಫೋಗಟ್ ಹೇಳಿದರು.
ನಮ್ಮ ಹೋರಾಟ ಚಿಕ್ಕದು, ಹೆಣ್ಣು ಮಕ್ಕಳಿಗೂ ನ್ಯಾಯ ಕೊಡಿಸಿ: ಇದೇ ವೇಳೆ, ರೈತ ಮುಖಂಡ ಜಗಜೀತ್ ಸಿಂಗ್ ದಲ್ಲೆವಾಲ್ ಮಾತನಾಡಿ, ಕುಸ್ತಿಪಟು ಹೆಣ್ಣು ಮಕ್ಕಳು ಧರಣಿ ಕುಳಿತಾಗ ನಮಗೂ ಇಷ್ಟವಾಗಲಿಲ್ಲ. ಹಾಗಾಗಿ ಅಲ್ಲಿಗೆ ತೆರಳಿ ಬೆಂಬಲಿಸಿದ್ದೇವೆ. ಅವರ ಹೋರಾಟಕ್ಕೆ ಹೋಲಿಸಿದರೆ ನಮ್ಮ ಹೋರಾಟ ಚಿಕ್ಕದು. ಹೆಣ್ಣು ಮಕ್ಕಳೊಂದಿಗೆ ಅನುಚಿತವಾಗಿ ವರ್ತಿಸುವವರನ್ನು ಆಡಳಿತ ಪಕ್ಷದವರು ರಕ್ಷಿಸುತ್ತಿದ್ದಾರೆ. ಇದರೊಂದಿಗೆ ಕಿಸಾನ್ ಆಂದೋಲನದ ವೇಳೆ ರೈತರೊಂದಿಗೆ ತಪ್ಪಾಗಿ ನಡೆದುಕೊಂಡವರನ್ನು ರಕ್ಷಿಸಲಾಗುತ್ತಿದೆ ಎಂದರು.
ಕಳೆದ 4 ದಿನಗಳಿಂದ ಸಂಯುಕ್ತ ಕಿಸಾನ್ ಮೋರ್ಚಾದಿಂದ ಪಟಿಯಾಲ ವಿದ್ಯುಚ್ಛಕ್ತಿ ಮಂಡಳಿ ಕೇಂದ್ರ ಕಚೇರಿ ಎದುರು ಧರಣಿ ನಡೆಸಲಾಗುತ್ತಿದೆ. ಇದರಲ್ಲಿ ರೈತರು ತಮ್ಮ 21 ಬೇಡಿಕೆಗಳ ಕುರಿತು ಪ್ರತಿಭಟನೆ ನಡೆಸುತ್ತಿದ್ದು, ಈ ಧರಣಿಯಲ್ಲಿ ರೈತ ಜಗಜಿತ್ ಸಿಂಗ್ ದಲ್ಲೆವಾಲ್ ಮತ್ತು ಅವರ 4 ಸಹೋದ್ಯೋಗಿಗಳು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಕುಸ್ತಿ ಪಟುಗಳಿಗೆ ಬೆಂಬಲ ನೀಡಿದ್ದ ಕಿಸಾನ್ ಮೋರ್ಚಾ:ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿ ಪಟುಗಳು ಮಾಡುತ್ತಿದ್ದ ಹೋರಾಟಕ್ಕೆ ಕಿಸಾನ್ ಮೋರ್ಚಾ ಬೆಂಬಲ ವ್ಯಕ್ತಪಡಿಸಿತ್ತು. ದೆಹಲಿ ಯಲ್ಲಿ ರಾಕೇಶ್ ಟಿಕಾಯತ್ ನೇತೃತ್ವದಲ್ಲಿ ಬೆಂಬಲ ವ್ಯಕ್ತಪಡಿಸಿದ್ದರು. ಈಗ ರೈತ ಹೋರಾಟ ಪರ ವಿನೇಶ್ ಫೋಗಟ್ ಪಂಜಾಬ್ನಲ್ಲಿ ಬೆಂಬಲ ಸೂಚಿಸಿದ್ದಾರೆ.
ಇದನ್ನೂ ಓದಿ:ಸಿಂಗ್ ಬಂಧಿಸದಿದ್ದರೆ ಜೂನ್ 9 ರಂದು ದೇಶಾದ್ಯಂತ ರೈತ ಪ್ರತಿಭಟನೆ: ಡಬ್ಲ್ಯುಎಫ್‌ಐ ಅಧ್ಯಕ್ಷರ ಮೇಲೆ ದಾಖಲಾದ ಎಫ್ಐಆರ್ ಹೀಗಿದೆ..