ಲಖಿಸರಾಯ್(ಬಿಹಾರ):ಕುಸ್ತಿ ಎಂದಾಗ ಅಖಾಡದಲ್ಲಿ ಹೊಡೆದಾಟ ಮುಖ್ಯ ಅದು ವೈಯುಕ್ತಿಕ ಆಗಬಾರದು. ಕ್ರೀಡಾ ಸ್ಫೂರ್ತಿ ಎಂಬುದು ಕುಸ್ತಿಯಲ್ಲಿ ಮುಖ್ಯವಾಗುತ್ತದೆ. ಎದುರಾಳಿಯನ್ನು ಹೊಡೆಯುವಾಗ ಪ್ರಾಣ ಹಾನಿ ಉದ್ದೇಶವಾಗಿರಬಾರದು. ಆದರೆ, ಆಟದ ನಡುವೆ ಆಕ್ರೋಶಕ್ಕೆ ಒಳಗಾಗಿ ಅನಗತ್ಯ ಹಲ್ಲೆಯೂ ತಪ್ಪು ಎನ್ನಲಾಗುತ್ತದೆ.
ಬಿಹಾರದಲ್ಲಿ ಕುಸ್ತಿ ವೇಳೆ ಎದುರಾಳಿಯ ಪ್ರಾಣವನ್ನೇ ತೆಗೆದಿರುವ ಘಟನೆ ಬೆಳಕಿಗೆ ಬಂದಿದೆ. ಗುರುವಾರ ಕುಸ್ತಿ ಪಂದ್ಯವನ್ನು ಆಯೋಜಿಸಲಾಗಿತ್ತು. ಈ ಪಂದ್ಯದಲ್ಲಿ ಎರಡು ಜಟ್ಟಿಗಳು ಹೊಡೆದಾಟದಲ್ಲಿ ಒಬ್ಬನ ಕುತ್ತಿಗೆ ತಿರುವಿ ಕೊಲ್ಲಲಾಗಿದೆ. ಇದು ಉದ್ದೇಶ ಪೂರಿತವಾಗಿ ಮಾಡಲಾಗಿದೆಯೇ ಎಂಬುದು ತಿಳಿದು ಬಂದಿಲ್ಲ. ಸಾವನ್ನಪ್ಪಿದ ಕುಸ್ತಿಪಟು ತ್ರಿಪುರಾರಿ ಯಾದವ್ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಬಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಲಖಿಸರಾಯ್ ಜಿಲ್ಲೆಯ ಮೆದ್ನಿಚೌಕಿ ಎಂಬಲ್ಲಿ ಬಹಳಾ ವರ್ಷಗಳಿಂದ ಕುಸ್ತಿ ಪಂದ್ಯವಳಿಗಳನ್ನು ಆಯೋಜಿಸಿಕೊಂಡು ಬರಲಾಗುತ್ತದೆ. ಅದರಂತೆ ಈ ವರ್ಷದ ಕುಸ್ತಿ ಪಂದ್ಯವಾಳಿಯನ್ನು ನಿನ್ನೆ ಗಣರಾಜ್ಯೋತ್ಸವದಂದು ಆಯೋಜಿಸಲಾಗಿತ್ತು. ಕೆಲವು ವರ್ಷಗಳಿಂದ ಪಂದ್ಯ ನಡೆಯುತ್ತಿರುವುದರಿಂದ ಹೆಚ್ಚಿನ ಸ್ಪರ್ಧಾಳುಗಳು ಭಾಗವಹಿಸಿದ್ದರು.
ಗುರುವಾರ ಮುಂಜಾನೆಯಿಂದ ಆಂಭವಾದ ಪಂದ್ಯ ಸುಮಾರು ರಾತ್ರಿಯವರೆಗೂ ಆಯೋಜಿಸಲಾಗಿತ್ತು. ವಿವಿಧ ಸುತ್ತುಗಳನ್ನು ರೂಪಿಸಲಾಗಿತ್ತು. ಮೆದ್ನಿಚೌಕಿಯಲ್ಲಿ ನಡೆಯುವ ಕುಸ್ತಿ ಖ್ಯಾತಿ ಪಡೆದಿದ್ದರಿಂದ ಬೇರೆ ಬೇರೆ ರಾಜ್ಯಗಳಿಂದಲೂ ಕುಸ್ತಿಪಟುಗಳು ಆಗಮಿಸಿದ್ದರು. ಬೆಳಗ್ಗೆಯಿಂದ ವಿರಾವೇಷದಿಂದ ಮತ್ತು ವಿಜೃಂಭಣೆಯಿಂದ ನಡೆಯುತ್ತಿದ್ದ ಸ್ಪರ್ಧೆಗೆ ಕುಸ್ತಿ ಪಟುವಿನ ಸಾವು ಕರಿನೆರಳಾಯಿತು.
ಸಂಜೆ ಮೊಕಾಮಾದ ಕುಸ್ತಿಪಟು ತ್ರಿಪುರಾರಿ ಯಾದವ್ ಮತ್ತು ಜೆನು ಕುಸ್ತಿಪಟು ನಡುವೆ ಕಾದಾಟ ನಡೆದಿತ್ತು. ಇಬ್ಬರು ಕುಸ್ತಿಪಟುಗಳ ಕಾಳಗ ಬಹಳ ಹೊತ್ತು ಸಾಗಿತು. ಇಬ್ಬರ ನಡುವೆ ಸಮಬಲದ ಕಾಳಗ ಕಂಡು ಬಂತು. ಕುಸ್ತಿಯ ವೇಳೆ ಹಠಾತ್ತನೆ ಜೆನು ಎಂಬ ಕುಸ್ತಿಪಟು ತ್ರಿಪುರಾರಿ ಯಾದವ್ ಅವರ ಕುತ್ತಿಗೆ ತಿರುವಿದ್ದಾರೆ. ಅಖಾಡದಲ್ಲೇ ಮೊಕಾಮಾದ ಕುಸ್ತಿಪಟು ಸಾವನ್ನಪ್ಪಿದ್ದಾರೆ.
ಕುಸ್ತಿಯ ಅಪಾಯಕಾರಿ ಪಟ್ಟು:ಮೊಕಾಮಾದ ಕುಸ್ತಿಪಟು ತ್ರಿಪುರಾರಿ ಯಾದವ್ ಮತ್ತು ಜೆನು ಕುಸ್ತಿಪಟು ನಡುವೆ ಬಿಗುವಿನ ಕಾದಾಟ ಇತ್ತು. ಇಬ್ಬರೂ ಸಮಬಲದ ಹೋರಾಟಗಾರರಾಗಿದ್ದರಿಂದ ಪಂದ್ಯ ಬಹಳ ಹೊತ್ತು ಸಾಗಿತ್ತು. ಇಬ್ಬರೂ ಸೋಲಲು ಸಾಧ್ಯವಿಲ್ಲದಂತೆ ಮದಗಜಗಳ ರೀತಿ ಅಖಾಡದಲ್ಲಿ ಗುದ್ದಾಡುತ್ತಿದ್ದರು. ಈ ವೇಳೆ, ಅಚಾನಕ್ಕಾಗಿ ಜೆನುವಿನ ಕುಸ್ತಿ ಪಟು ಅಪಾಯಕಾರಿ ಪಟ್ಟನ್ನು ಬಳಸಿದ್ದಾರೆ. ನೆಲಕ್ಕೆ ಬಿದ್ದ ಎದುರಾಳಿಕ ಕುತ್ತಿಗೆ ತಿರುವಿ ಘಾಸಿಮಾಡಲು ಮುಂದಾಗಿದ್ದಾರೆ. ಕುತ್ತಿಗೆ ತಿರುಗಿಸಿದ ಪರಿಣಾಮ ಎದುರಾಳಿ ತ್ರಿಪುರಾರಿ ಯಾದವ್ ಸಾವನ್ನಪ್ಪಿದ್ದಾರೆ.
ಆಯೋಜಕರು ಪರಾರಿ:ಕುಸ್ತಿಯ ವೇಳೆ ಪ್ರಾಣ ಹಾರಿ ಹೋಗಿದ್ದು ಕಂಡು ನೆರೆದಿದ್ದ ಜನ ಕಕ್ಕಾಬಿಕ್ಕಿಯಾದರು. ಬಹುತೇಕರು ಪಲಾಯನ ಮಾಡಿದರು. ಕುಸ್ತಿ ಪಂದ್ಯವನ್ನು ಆಯೋಜಿಸಿದ್ದ ಮೆದ್ನಿಚೌಕಿ ಜನರೂ ಕೂಡ ಈ ಘಟನೆಯ ನಂತರ ತಲೆ ಮರೆಸಿಕೊಂಡರು. ಘಟನೆ ಬಗ್ಗೆ ಪೊಲೀಸರಿಗೆ ಸ್ಥಳಿಯರೊಬ್ಬರು ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಪ್ರದೇಶವನ್ನು ಹತೋಟಿಗೆ ತೆಗೆದುಕೊಂಡಿದ್ದಾರೆ.
ಮೆದ್ನಿಚೌಕಿಯ ಠಾಣಾ ಪೊಲೀಸರು ನೀಡಿರುವ ಮಾಹಿತಿಯಂತೆ, ಇತರ ಕುಸ್ತಿ ಪಟುಗಳಿಂದ ಮಾಹಿತಿ ಪಡೆದು ಮೃತ ತ್ರಿಪುರಾರಿ ಯಾದವ್ ಮನೆಗೆ ಸುದ್ದಿ ತಿಳಿಸಲಾಯಿತು. ಮರಣೋತ್ತರ ಪರೀಕ್ಷೆಗಾಗಿ ಲಖಿಸರಾಯ್ ಸದರ್ ಆಸ್ಪತ್ರೆಗೆ ದೇಹವನ್ನು ಸಾಗಿಸಲಾಗಿತ್ತು. ನಂತರ ಸಂಬಂಧಿಕರಿಗೆ ಮೃತ ದೇಹವನ್ನು ಹಸ್ತಾಂತರಿಸಲಾಗಿದೆ. ಕುಸ್ತಿ ಆಯೋಜಕರಿಗಾಗಿ ಹುಡುಕಾಟ ಆರಂಭಿಸಿದ್ದೇವೆ. ರೆಫರಿ ಕೂಡ ತಲೆ ಮರೆಸಿಕೊಂಡಿದ್ದಾರೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಪೆರೋಲ್ ಮೇಲೆ ಹೊರಗಡೆ ಬಂದಿದ್ದ ವ್ಯಕ್ತಿ ನಾಪತ್ತೆ: ಪತ್ತೆ ಹಚ್ಚಿದವರಿಗೆ ಒಂದು ಲಕ್ಷ ರೂ ಬಹುಮಾನ