ಹೈದರಾಬಾದ್ (ತೆಲಂಗಾಣ): ರಾಷ್ಟ್ರ ರಾಜಧಾನಿ ದೆಹಲಿಯ ಆಡಳಿತಾತ್ಮಕ ಸೇವೆಗಳ ನಿಯಂತ್ರಣ ವಿಷಯವಾಗಿ ಕೇಂದ್ರ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆ ಸಂಬಂಧ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಕೇಂದ್ರದ ಸುಗ್ರೀವಾಜ್ಞೆ ವಿರುದ್ಧ ಹೋರಾಟಕ್ಕೆ ಕೆಸಿಆರ್ ಬೆಂಬಲ ಕೋರಿದರು.
ದೆಹಲಿಯಿಂದ ಸಿಎಂ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ್ ಮಾನ್, ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಅವರೊಂದಿಗೆ ಹೈದರಾಬಾದ್ಗೆ ಆಗಮಿಸಿದರು. ಸಿಎಂ ಕೆಸಿಆರ್ ಹಾಗೂ ಬಿಆರ್ಎಸ್ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ನಂತರ ಕೇಜ್ರಿವಾಲ್ ಹಾಗೂ ಕೆಸಿಆರ್ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಈ ವೇಳೆ, ಕೇಂದ್ರದ ಮೋದಿ ಸರ್ಕಾರದ ವಿರುದ್ಧ ಕೆಸಿಆರ್ ವಾಗ್ದಾಳಿ ನಡೆಸಿದರು.
"ನೀವೇ ಸುಗ್ರೀವಾಜ್ಞೆ ಹಿಂಪಡೆಯಬೇಕೆಂದು ನಾವು ಪ್ರಧಾನಿಯವರನ್ನು ಒತ್ತಾಯಿಸುತ್ತೇವೆ. ಇಲ್ಲದಿದ್ದರೆ ನಾವೆಲ್ಲರೂ ಕೇಜ್ರಿವಾಲ್ ಅವರನ್ನು ಬೆಂಬಲಿಸಿ, ಅವರೊಂದಿಗೆ ನಿಲ್ಲುತ್ತೇವೆ. ನಾವು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ನಮ್ಮ ಎಲ್ಲ ಶಕ್ತಿಯನ್ನು ಬಳಸಿಕೊಂಡು ಸುಗ್ರೀವಾಜ್ಞೆಯನ್ನು ಸೋಲಿಸುತ್ತೇವೆ. ಅನಗತ್ಯವಾಗಿ ವಿವಾದ ಮಾಡಬೇಡಿ. ಚುನಾಯಿತ ಸರ್ಕಾರ ಕೆಲಸ ಮಾಡಲಿ'' ಎಂದು ಕೆಸಿಆರ್ ಹೇಳಿದರು.
ಮುಂದುವರಿದು, ''ದೆಹಲಿಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳನ್ನು ಸೋಲಿಸುವ ಮೂಲಕ ಕೇಜ್ರಿವಾಲ್ ಅದ್ಭುತ ಗೆಲುವು ಸಾಧಿಸಿದ್ದಾರೆ. ಸುಗ್ರೀವಾಜ್ಞೆ ತರುವ ಮೂಲಕ ಮೋದಿ ಸರ್ಕಾರ ದೆಹಲಿ ಜನರಿಗೆ ಮಾಡಿದ ಅವಮಾನ ಎಂದು ನಾನು ನಿಸ್ಸಂದೇಹವಾಗಿ ಹೇಳಬಲ್ಲೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ರಾಜ್ಯ ಸರ್ಕಾರಗಳಿಗೆ ಕಿರುಕುಳ ನೀಡುತ್ತಿದೆ. ತುರ್ತು ಪರಿಸ್ಥಿತಿ ಜಾರಿಯಾದ ಸಂದರ್ಭಕ್ಕೂ ಈಗಿನ ಪರಿಸ್ಥಿತಿಗೂ ಯಾವುದೇ ವ್ಯತ್ಯಾಸವಿಲ್ಲ.ತುರ್ತು ಪರಿಸ್ಥಿತಿಯನ್ನು ವಿರೋಧಿಸುವ ಬಿಜೆಪಿ ನಾಯಕರೂ ಈಗ ಅದನ್ನೇ ಅನುಸರಿಸುತ್ತಿದ್ದಾರೆ. ಇತ್ತೀಚೆಗೆ ಕರ್ನಾಟಕದ ಜನತೆ ಸುಟ್ಟ ಬರೆ ಎಳೆದರೂ ಬಿಜೆಪಿಗೆ ಬುದ್ಧಿ ಬಂದಿಲ್ಲ'' ಎಂದು ಕೆಸಿಆರ್ ಟೀಕಿಸಿದರು.