ಜೋಧ್ಪುರ (ರಾಜಸ್ತಾನ): ಎರಡರಿಂದ ಮೂರು ಅಡಿ ಎತ್ತರದ ವಿಶ್ವದ ಅತ್ಯಂತ ಚಿಕ್ಕ ಕುದುರೆ ಫಲಬೆಲ್ಲಾ(Falabella) ವು ಜೋಧ್ಪುರದ ಮಾರ್ವಾರ್ ಕುದುರೆ ಪ್ರದರ್ಶನದಲ್ಲಿ ಕಾಣಿಸಿಕೊಂಡಿದ್ದು, ಎಲ್ಲರ ಗಮನ ಸೆಳೆಯಿತು. ಶುಕ್ರವಾರ ನಡೆದ ಮಾರ್ವಾರ್ ಕುದುರೆ ಪ್ರದರ್ಶನದಲ್ಲಿ ಅತಿ ಚಿಕ್ಕ ಕುದುರೆಯು ವಿಶೇಷವಾಗಿ ಆಕರ್ಷಿಸಿತು. ಇದಲ್ಲದೇ ಅರೇಬಿಯನ್ ಕುದುರೆಗಳು ಕೂಡ ಪಾಲ್ಗೊಂಡಿದ್ದವು. ಜೊತೆಗೆ ಜೋಧ್ಪುರದ ಮಾರ್ವಾರಿ ತಳಿಯ ಕುದುರೆಗಳು ಪ್ರಮುಖ ಆಕರ್ಷಣೆಯಾಗಿದ್ದವು. ಈ ಬಾರಿ ಸುಮಾರು 150 ಮಾರ್ವಾರಿ ತಳಿಯ ಕುದುರೆಗಳು ಪ್ರದರ್ಶನದಲ್ಲಿ ಭಾಗವಹಿಸಿದ್ದವು.
ಎರಡು ದಿನಗಳ ಮಾರ್ವಾರ್ ಕುದುರೆ ಪ್ರದರ್ಶನವನ್ನು ಶುಕ್ರವಾರ ಬೆಳಗ್ಗೆ ರಾಜಸ್ತಾನದ ಜೋಧ್ಪುರದಲ್ಲಿ ಉದ್ಘಾಟಿಸಲಾಯಿತು. ಪ್ರಮುಖ ಗಣ್ಯರು ಅಶ್ವದೇವನಿಗೆ ಪೂಜೆ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಡಲಾಯಿತು. ಅಖಿಲ ಭಾರತ ಮಾರ್ವಾರಿ ಹಾರ್ಸ್ ಸೊಸೈಟಿ ಹಾಗೂ ಜೋಧ್ಪುರ ಮತ್ತು ಮಾರ್ವಾರಿ ಹಾರ್ಸ್ ಬುಕ್ ರಿಜಿಸ್ಟ್ರೇಷನ್ ಸೊಸೈಟಿ ಆಫ್ ಇಂಡಿಯಾ ಆಶ್ರಯದಲ್ಲಿ ಮಹಾರಾಜ ಗಜ್ ಸಿಂಗ್ ಸ್ಪೋರ್ಟ್ಸ್ ಫೌಂಡೇಶನ್ ಪೋಲೋ ಗ್ರೌಂಡ್ನಲ್ಲಿ ಪ್ರದರ್ಶನ ನಡೆಯಿತು.
ಉದ್ಘಾಟನಾ ಸಮಾರಂಭವು ಸಮೂಹ ಜಾನಪದ ನೃತ್ಯ 'ಲಂಗಾ', ಮಂಗನಿಯಾರ್ ಜಾನಪದ ಕಲಾವಿದರಿಂದ ಜಾನಪದ ಹಾಡುಗಳು, ಜೊತೆಗೆ ಮಹ್ರಾನ್ಗಡ್ ಬ್ಯಾಂಡ್, ಸುಂದರ್ ಬ್ಯಾಂಡ್ ಮತ್ತು ಬಿಎಸ್ಎಫ್ನ ಒಂಟೆ ಬ್ಯಾಂಡ್ ಮೂಲಕ ಗಮನ ಸೆಳೆಯಿತು. ಈ ವೇಳೆ, ಕಾರ್ಯಕ್ರಮ ಉದ್ಘಾಟಿಸಿದ ಗಣ್ಯರೊಬ್ಬರು ಮಾತನಾಡಿ, "ಕುದುರೆ ಪ್ರದರ್ಶನಗಳನ್ನು ಏರ್ಪಡಿಸುವುದರಿಂದ ಕುದುರೆ ಸಾಕಾಣೆದಾರರಿಗೆ ಸಾಕಷ್ಟು ಅನುಕೂಲವಾಗಿದೆ. ಮಾರ್ವಾರಿ ತಳಿಯ ಕುದುರೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯವಾಗಿದ್ದು, ಉತ್ತಮ ಬೆಲೆ ಪಡೆಯುತ್ತಿದೆ" ಎಂದರು.
ಇದನ್ನೂ ಓದಿ:ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬರಲಿವೆ ಮತ್ತೆ 12 ಚೀತಾಗಳು!
"ಆರು ಅಡಿಗೂ ಹೆಚ್ಚು ಎತ್ತರವಿರುವ ಕುದುರೆಗೆ ನಿತ್ಯ ಒಂದೂವರೆಯಿಂದ ಎರಡು ಗಂಟೆ ಮೀಸಲಿಡಬೇಕು. ಮಾರ್ವಾರಿ ಕುದುರೆಯಲ್ಲಿ ಎಂಟರಿಂದ ಹತ್ತು ತಳಿಗಳಿವೆ. ಅವುಗಳನ್ನು ಮೂಗು ಮತ್ತು ಕಿವಿಗಳಿಂದ ಗುರುತಿಸಲಾಗುತ್ತದೆ" ಎಂದು ಪ್ರತಾಪಗಢದಿಂದ ತನ್ನ 27 ತಿಂಗಳ ಮಾರ್ವಾರಿ ಕುದುರೆಯೊಂದಿಗೆ ಬಂದಿದ್ದ ಸಾಕಾಣೆದಾರರೊಬ್ಬರು ತಿಳಿಸಿದರು.
ಇದೇ ರೀತಿ ಪಂಬಾಬ್ನ ನಿವಾಸಿಯೊಬ್ಬರು ಫಲಬೆಲ್ಲಾ ಮತ್ತು ಅರೇಬಿಯನ್ ಕುದುರೆಗಳನ್ನು ಪ್ರದರ್ಶನಕ್ಕೆ ತಂದಿದ್ದರು. ಈ ತಳಿಯ ವಿಶೇಷತೆಗಳ ಕುರಿತು ಮಾಹಿತಿ ನೀಡಿದ ಅವರು, "ಇನ್ನೂರು ವರ್ಷಗಳ ಹಿಂದೆ ಫಲಬೆಲ್ಲಾ ಕುದುರೆ ತಳಿಯನ್ನು ಪಾಶ್ಚಿಮಾತ್ಯ ದೇಶಗಳಲ್ಲಿ ಕಲ್ಲಿದ್ದಲು ಗಣಿಗಳಲ್ಲಿ ಕಲ್ಲಿದ್ದಲುಗಳನ್ನು ಲೋಡ್ ಮಾಡಲು ಬಳಸಲಾಗುತ್ತಿತ್ತು. ಆಗ ಈ ಕುದುರೆಗಳ ಮೈಕಟ್ಟು ಸದೃಢವಾಗಿರುತ್ತಿತ್ತು. ಕ್ರಮೇಣ ಯಂತ್ರಗಳು ಬಂದ ನಂತರ ಫಲಬೆಲ್ಲಾ ತಳಿಗಳ ಬಳಕೆ ನಿಂತು ಹೋಯಿತು. ಈಗ ಬರೀ ಕಾರ್ಯಕ್ರಮಗಳಲ್ಲಿ ಮಾತ್ರ ಪ್ರದರ್ಶಿಸಲಾಗುತ್ತಿದೆ. ನನ್ನ ಸಹೋದರ ಐರ್ಲೆಂಡ್ನಲ್ಲಿ ವೈದ್ಯನಾಗಿದ್ದು, ಆತ ಬರುವಾಗ ಅಲ್ಲಿಂದ ಫಲಬೆಲ್ಲಾ ಮತ್ತು ಅರೇಬಿಯನ್ ಕುದುರೆಗಳನ್ನು ತಂದಿರುವುದಾಗಿ ಹೇಳಿದರು.
ಶುಕ್ರವಾರ ಸಂಜೆ ಪ್ರದರ್ಶನದಲ್ಲಿ ಭಾಗವಹಿಸಿದ್ದ ಕೇಂದ್ರ ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವ ಪುರುಷೋತ್ತಮ ರೂಪಲಾ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಕುದುರೆ ಪ್ರದರ್ಶನದ ಜೊತೆಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಎರಡು ದಿನಗಳ ಕುದುರೆ ಪ್ರದರ್ಶನ ಇಂದಿಗೆ ಕೊನೆಗೊಳ್ಳಲಿದೆ.
'ಫಲಬೆಲ್ಲಾ' ವಿಶೇಷತೆ:ಈ ತಳಿಯ ಕುದುರೆಗಳು ಕೇವಲ ಎರಡರಿಂದ ಮೂರು ಅಡಿ ಎತ್ತರವನ್ನು ಹೊಂದಿದ್ದು, ಕೆಲವು ನಾಯಿಗಳಿಗಿಂತಲೂ ಚಿಕ್ಕದಾಗಿದೆ. ಫಲಬೆಲ್ಲಾ ಕುದುರೆ ತಳಿಯ ಸರಾಸರಿ ಜೀವಿತಾವಧಿಯು 45 ವರ್ಷಗಳು ಅಂದರೆ ಸಾಮಾನ್ಯ ಕುದುರೆಗಳಿಗಿಂತ ಹೆಚ್ಚಾಗಿದೆ. ಈ ತಳಿ ಸಾಮಾನ್ಯವಾಗಿ ಕುದುರೆ ಪ್ರದರ್ಶನಗಳಲ್ಲಿ ಮಾತ್ರವೇ ಕಾಣಸಿಗುತ್ತದೆ. ಇವು ಅರ್ಜೆಂಟೀನಾದ ಕುದುರೆ ತಳಿಯಾಗಿದ್ದರೂ ಸಹ ಯುರೋಪಿನ ಅನೇಕ ದೇಶಗಳಲ್ಲಿ ಕಂಡುಬರುತ್ತದೆ.
ಇದನ್ನೂ ಓದಿ:ಅಂಗಾಂಗ ದಾನ ಮತ್ತು ಸಾರಿಗೆ: ಒಂದು ರಾಷ್ಟ್ರ ಒಂದು ನೀತಿ ಜಾರಿಗೆ ಕೇಂದ್ರದ ಚಿಂತನೆ