ಹೈದರಾಬಾದ್:ವಿಶ್ವಾದ್ಯಂತ 100 ಅತ್ಯಂತ ಪ್ರಭಾವಿ ಮಹಿಳೆಯರ ವಾರ್ಷಿಕ ಶ್ರೇಯಾಂಕವನ್ನು ಫೋರ್ಬ್ಸ್ ಇಂದು ಬಿಡುಗಡೆ ಮಾಡಿದೆ. ಇದರಲ್ಲಿ ನಾಲ್ವರು ಭಾರತೀಯ ಮಹಿಳೆಯರು ಸ್ಥಾನ ಪಡೆದಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 32ನೇ ಸ್ಥಾನ ಗಳಿಸಿದ್ದು, ಉದಾರದಾನಿ (Philanthropist) ರೋಶನಿ ನಾಡರ್ ಮಲ್ಹೋತ್ರಾ, ಭಾರತೀಯ ಸ್ಟೀಲ್ ಪ್ರಾಧಿಕಾರದ ಅಧ್ಯಕ್ಷೆ ಸೋಮಾ ಮೊಂಡಲ್ ಮತ್ತು ಬಿಲಿಯನೇರ್ ಉದ್ಯಮಿ ಕಿರಣ್ ಮಜುಂದಾರ್ ಶಾ ಈ ಪಟ್ಟಿಯಲ್ಲಿದ್ದಾರೆ.
ಫೋರ್ಬ್ಸ್ ಪ್ರಭಾವಿ ಮಹಿಳೆಯರ 20ನೇ ಆವೃತ್ತಿಯಲ್ಲಿ ದೊಡ್ಡ ಕಂಪನಿಗಳ ಸಿಇಒಗಳು ಮತ್ತು ಖ್ಯಾತ ನಟಿಯರಿಂದ ಹಿಡಿದು ರಾಜಕಾರಣಿಗಳು ಮತ್ತು ಉದಾರದಾನಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕಿಯರಿಗೆ ಸ್ಥಾನ ಸಿಕ್ಕಿದೆ. ಇದು 2023ನೇ ಸಾಲಿನಲ್ಲಿ ಅವರ ಮಹತ್ವ ಹಾಗೂ ಪ್ರಭಾವವನ್ನು ಗುರುತಿಸುತ್ತದೆ. ಭಾರತೀಯ ಮಹಿಳೆಯರಲ್ಲಿ ನಿರ್ಮಲಾ ಸೀತಾರಾಮನ್ ಅಗ್ರಸ್ಥಾನ ಹೊಂದಿದ್ದಾರೆ. ಇದರೊಂದಿಗೆ ಅವರು ಕಳೆದ ವರ್ಷದ 36ನೇ ಸ್ಥಾನದಿಂದ 32ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಅಷ್ಟೇ ಅಲ್ಲ, ಸತತ ಐದನೇ ವರ್ಷವೂ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದ ಖ್ಯಾತಿಗೂ ಪಾತ್ರರಾಗಿದ್ದಾರೆ.
ನಿರ್ಮಲಾ ಅವರ ನಂತರ ರೋಶನಿ ನಾಡರ್ ಮಲ್ಹೋತ್ರಾ ಸ್ಥಾನ ಗಳಿಸಿದ್ದಾರೆ. ಲಿಸ್ಟೆಡ್ ಐಟಿ ಕಂಪನಿಯನ್ನು ಮುನ್ನಡೆಸಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಯ ಮಲ್ಹೋತ್ರಾ 60ನೇ ಸ್ಥಾನ ಪಡೆದಿದ್ದಾರೆ. ಭಾರತೀಯ ಸ್ಟೀಲ್ ಪ್ರಾಧಿಕಾರದ ಅಧ್ಯಕ್ಷರಾದ ಸೋಮಾ ಮೊಂಡಲ್ 70ನೇ ಹಾಗೂ ಖ್ಯಾತ ಉದ್ಯಮಿ ಕಿರಣ್ ಮಜುಂದಾರ್ ಶಾ 76ನೇ ಸ್ಥಾನ ಗಳಿಸಿದ್ದಾರೆ.