ನವದೆಹಲಿ:ಇಂದು ವಿಶ್ವ ವನ್ಯ ಜೀವಿಗಳ ದಿನ. ವನ್ಯಜೀವಿಗಳು ಮತ್ತು ಅರಣ್ಯ ಸಂಪತ್ತಿನ ಬಗ್ಗೆ ಸಾಮಾನ್ಯ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವದಾದ್ಯಂತ ವಿಶ್ವ ವನ್ಯಜೀವಿ ದಿನವನ್ನು ಪ್ರತಿವರ್ಷ ಮಾರ್ಚ್ 3ರಂದು ಆಚರಿಸಲಾಗುತ್ತದೆ. ನಮ್ಮ ಪರಿಸರ ವ್ಯವಸ್ಥೆಯ ಭಾಗವಾದ ವನ್ಯಜೀವಿಗಳ ಉಳಿವಿಗೆ ಈ ದಿನದಂದು ವಿಶೇಷ ಜಾಗೃತಿ ಮೂಡಿಸಲಾಗುತ್ತದೆ.
ಪ್ರತಿ ವರ್ಷ ವಿಶ್ವ ವನ್ಯಜೀವಿ ದಿನ ಆಚರಣೆ ವೇಳೆ ಒಂದು ಘೋಷವಾಕ್ಯವನ್ನು ಇಟ್ಟುಕೊಳ್ಳಲಾಗುತ್ತದೆ. 2022ರ ವಿಶ್ವ ವನ್ಯಜೀವಿಗಳ ದಿನಕ್ಕೆ 'ಪರಿಸರ ವ್ಯವಸ್ಥೆಯ ಪುನಃಸ್ಥಾಪನೆಗಾಗಿ ಪ್ರಮುಖ ಜೀವಿಗಳನ್ನು ಮರುಪಡೆಯುವುದು' (Recovering key species for ecosystem restoration) ಎಂಬ ಘೋಷವಾಕ್ಯವನ್ನು ಇಟ್ಟುಕೊಳ್ಳಲಾಗಿದೆ. ಈ ಘೋಷವಾಕ್ಯವನ್ನು ಅಳಿವಿನಂಚಿನಲ್ಲಿರುವ ಕೆಲವು ಕಾಡು ಪ್ರಾಣಿಗಳು ಮತ್ತು ಸಸ್ಯಗಳನ್ನು ಸಂರಕ್ಷಿಸುವ ಸಲುವಾಗಿ ಇಟ್ಟುಕೊಳ್ಳಲಾಗಿದೆ.
2021ರಲ್ಲಿ ವಿಶ್ವ ವನ್ಯಜೀವಿ ದಿನವನ್ನು 'ಅರಣ್ಯ ಮತ್ತು ಜೀವನೋಪಾಯಗಳು: ಜನರು ಮತ್ತು ಭೂಮಿಯನ್ನು ಉಳಿಸಿಕೊಳ್ಳುವುದು' ಎಂಬ ಘೋಷ ವಾಕ್ಯದೊಂದಿಗೆ ಆಚರಣೆ ಮಾಡಲಾಗಿತ್ತು.