ನವದೆಹಲಿ:ಭಾರತದಲ್ಲಿ ಕಳೆದ ಕೆಲ ದಿನಗಳಿಂದ ಲಕ್ಷಾಂತರ ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗುತ್ತಿದ್ದು, ಇದರಿಂದ ವಿಶ್ವವೇ ನಡುಗಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಮಾತ್ರ ಬ್ರಾಂಡ್ ನಿರ್ಮಾಣದ ಮೇಲೆ ಕೇಂದ್ರೀಕೃತವಾಗಿದ್ದಾರೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಪಿಟಿಐ ಜೊತೆಗಿನ ಸಂದರ್ಶನದಲ್ಲಿ ಭಾಗಿಯಾಗಿ ಮಾತನಾಡಿದ ರಾಹುಲ್ ಗಾಂಧಿ, ಕೋವಿಡ್ ಮೇಲೆ ಮೋದಿ ಸರ್ಕಾರ ನಿಯಂತ್ರಣ ಸಂಪೂರ್ಣವಾಗಿ ಕಳೆದುಕೊಂಡಿದೆ. ಸಾಂಕ್ರಾಮಿಕ ರೋಗ ಎದುರಿಸುತ್ತಿರುವ ವಿಶ್ವದ ಏಕೈಕ ದೇಶ ಭಾರತವಾಗಿದೆ ಎಂದು ಹೇಳಿದರು.
ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವ ಕಾರಣ ಹೆಚ್ಚುತ್ತಿರುವ ಕೋವಿಡ್ ಪ್ರಕರಣದ ಬಗ್ಗೆ ಕಡೆಗಣಿಸಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಯಾವ ಸಂದೇಶ ನೀಡುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಪಶ್ಚಿಮ ಬಂಗಾಳ, ಅಸ್ಸೋಂ, ಕೇರಳ, ತಮಿಳುನಾಡು ಮತ್ತು ಪುದುಚೇರಿಯಲ್ಲಿ ಬಿಜೆಪಿ ಪ್ರಚಾರದ ಮೇಲೆ ಪ್ರಚಾರ ನಡೆಸಿತು. ಆದರೆ, ಕೋವಿಡ್ ಬಗ್ಗೆ ಯಾವುದೇ ಸೂಕ್ತ ನಿರ್ಧಾರ ಕೈಗೊಳ್ಳಲಿಲ್ಲ ಎಂದು ರಾಹುಲ್ ಇದೇ ವೇಳೆ ಹೇಳಿದ್ದಾರೆ.
ದೇಶದಲ್ಲಿ ಕೋವಿಡ್ ಲಸಿಕೆ ಬೆಲೆ ನಿಗದಿ ವಿಚಾರದಲ್ಲೂ ರಾಜಕೀಯ ಮಾಡ್ತಿದ್ದು, ಈ ಮೂಲಕ ಅವರು ಬ್ರಾಂಡ್ ನಿರ್ಮಿಸಲು ಮುಂದಾಗಿದ್ದಾರೆ ಎಂದರು. ಪರಿಸ್ಥಿತಿ ಕೈಮೀರಿ ಹೋಗಿರುವ ಕಾರಣ ರಾಜ್ಯಗಳಿಗೆ ಅದರ ಜವಾಬ್ದಾರಿ ನೀಡಲಾಗಿದೆ. ಮೋದಿ ಸರ್ಕಾರ ತೀವ್ರ ನಿರ್ಲಕ್ಷ್ಯ ಮತ್ತು ಕುರುಡುನ ರೀತಿಯ ಅತಿಯಾದ ಆತ್ಮವಿಶ್ವಾಸ ಹೊಂದಿದೆ. ಎರಡನೇ ಅಲೆ ಪ್ರಾರಂಭಗೊಳ್ಳುವುದಕ್ಕೂ ಮುಂಚಿತವಾಗಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರೆ ನಾವು ಈ ಪರಿಸ್ಥಿತಿ ಎದುರಿಸುತ್ತಿರಲಿಲ್ಲ ಎಂದಿದ್ದಾರೆ.