ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಿಂದಾಗಿ ಜಗತ್ತು ಇಂದು ನವ ಭಾರತವನ್ನು ಕಾಣುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್.ಜೈಶಂಕರ್ ಗುರುವಾರ ತಿಳಿಸಿದ್ದಾರೆ. ಜಪಾನ್, ಪಪುವಾ ನ್ಯೂಗಿನಿಯಾ ಮತ್ತು ಆಸ್ಟ್ರೇಲಿಯಾ ಸೇರಿ ಮೂರು ರಾಷ್ಟ್ರಗಳ ಆರು ದಿನಗಳ ಪ್ರವಾಸ ಮುಗಿಸಿ ಮೋದಿ ದೆಹಲಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿ ಜೈಶಂಕರ್ ಹೇಳಿಕೆ ನೀಡಿದರು.
ಪಪುವಾ ನ್ಯೂಗಿನಿಯಾದ ಪ್ರಧಾನಿಯವರು ಪ್ರಧಾನಿ ಮೋದಿ ಅವರನ್ನು 'ವಿಶ್ವ ಗುರು' ಎಂದು ಹೇಳಿದರು. ಆಸ್ಟ್ರೇಲಿಯಾದ ಪ್ರಧಾನಿಗಳು ಮೋದಿ ಅವರನ್ನು 'ದಿ ಬಾಸ್' ಎಂದು ಕರೆದರು. ಇಂದು ಭಾರತದ ಚಿತ್ರಣ... ಭಾರತದ ಕೀರ್ತಿ... ವಿಶ್ವದಲ್ಲಿ ಭಾರತದ ಸ್ಥಾನ ಇಷ್ಟು ಎತ್ತರಕ್ಕೆ ಬೆಳೆದಿದ್ದರೆ ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಕಾರಣ. ಇದನ್ನು ನಾನು ಹೊಸ ಆರಂಭ ಎಂದೇ ಹೇಳುತ್ತೇನೆ ಎಂದು ವಿದೇಶಾಂಗ ಸಚಿವರು ಹೇಳಿದರು.
ಮೂರು ರಾಷ್ಟ್ರಗಳ ಪ್ರವಾಸದಿಂದ ಮರಳಿದ ಪ್ರಧಾನಿ ಮೋದಿ ಅವರನ್ನು ಇಂದು ಬೆಳಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸ್ವಾಗತಿಸಿದರು. ಮೋದಿ ಅವರನ್ನು ಉದ್ದೇಶಿಸಿ ನಡ್ಡಾ ಸಹ ಮಾತನಾಡಿ, ನಿಮ್ಮ ಆಡಳಿತದ ಮಾದರಿಯನ್ನು ಜಗತ್ತು ಮೆಚ್ಚುತ್ತದೆ. ಅಮೆರಿಕದ ಅಧ್ಯಕ್ಷ ಜೋ ಬೈಡನ್ ನಿಮ್ಮ ಆಟೋಗ್ರಾಫ್ ಕೇಳಿದರು. ಇದು ನಿಮ್ಮ ನಾಯಕತ್ವದಲ್ಲಿ ಜಗತ್ತು ಭಾರತವನ್ನು ಹೇಗೆ ನೋಡುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ:ಡೆಹ್ರಾಡೂನ್ - ದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ಮೋದಿ ಹಸಿರು ನಿಶಾನೆ