ಶಾಂತಿ ಮತ್ತು ಸೌಹಾರ್ದತೆಯ ಸಂಕೇತ ಎಂದು ಕರೆಯಲ್ಪಡುವ ರೆಡ್‌ಕ್ರಾಸ್ ಸೊಸೈಟಿ, ಪ್ರತಿ ವರ್ಷ ಮೇ 8 ರಂದು ವಿಶ್ವ ರೆಡ್‌ಕ್ರಾಸ್ ದಿನವನ್ನು ಆಚರಿಸುತ್ತದೆ. ಇದು ರೆಡ್‌ಕ್ರಾಸ್‌ನ ಸಂಸ್ಥಾಪಕ ಹೆನ್ರಿ ಡುನಾಂಟ್ ಅವರ ಜನ್ಮದಿನವೂ ಆಗಿದೆ ಇವರಿಗೆ ಶಾಂತಿ ನೊಬೆಲ್ ಪ್ರಶಸ್ತಿ ಸಹ ಲಭಿಸಿದೆ. ಈ ವರ್ಷದ ಥೀಮ್ ‘ ಟುಗೆದರ್ ವಿ ಆರ್ # ಅನ್ಸ್ಟಾಪಬಲ್!’ ಎಂಬುದಾಗಿದೆ. 1863 ರಲ್ಲಿ ರೂಪುಗೊಂಡ ಅಂತಾರಾಷ್ಟ್ರೀಯ ರೆಡ್‌ಕ್ರಾಸ್ ಸಮಿತಿ (ಐಸಿಆರ್‌ಸಿ) ಅನ್ನು 1864 ರಲ್ಲಿ ಜಿನೀವಾ ಒಪ್ಪಂದದ ಸಮಯದಲ್ಲಿ ಹೆನ್ರಿ ಡುನಾಂಟ್ ಅವರ ಪ್ರಯತ್ನದಿಂದ ಅಂತಾರಾಷ್ಟ್ರೀಯ ರೆಡ್‌ಕ್ರಾಸ್ ಚಳವಳಿಯಡಿ ಸ್ಥಾಪಿಸಲಾಯಿತು. ರೆಡ್‌ಕ್ರಾಸ್ ಸೊಸೈಟಿಯ ಪ್ರಧಾನ ಕಚೇರಿ ಸ್ವಿಟ್ಜರ್‌ಲ್ಯಾಂಡ್‌ನ ಜಿನೀವಾದಲ್ಲಿದೆ. ಆರಂಭದಲ್ಲಿ, ಹಿಂಸಾಚಾರ ಮತ್ತು ಯುದ್ಧಕ್ಕೆ ಬಲಿಯಾದ ಜನರನ್ನು ಹಾಗೂ ಯುದ್ಧ ಖೈದಿಗಳಾಗಿದ್ದವರನ್ನು ನೋಡಿಕೊಳ್ಳುವುದು ಮತ್ತು ಪುನರ್ವಸತಿ ಕಲ್ಪಿಸುವುದು ಈ ಸಂಸ್ಥೆಯ ಮುಖ್ಯ ಉದ್ದೇಶವಾಗಿತ್ತು. ಈ ಸಂಸ್ಥೆಯು ವಿಶ್ವದಾದ್ಯಂತದ ಸರ್ಕಾರಗಳಿಂದ ಮತ್ತು ರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಗಳಿಂದ ಹಣಕಾಸಿನ ನೆರವು ಪಡೆಯುತ್ತದೆ.
ರೆಡ್ ಕ್ರಾಸ್ ಇತಿಹಾಸ ಸಂಸ್ಥೆ ಇತಿಹಾಸ:
ಫೆಬ್ರವರಿ 1863 ರಲ್ಲಿ, ಜಿನೀವಾ ಸಾರ್ವಜನಿಕ ಕಲ್ಯಾಣ ಸೊಸೈಟಿ ಒಂದು ಸಮಿತಿಯನ್ನು ರಚಿಸಿತು, ಇದರಲ್ಲಿ ಸ್ವಿಟ್ಜರ್ಲೆಂಡ್‌ನ ಐದು ಜನ ಇದ್ದಾರೆ. ಸಮಿತಿಯ ಮುಖ್ಯ ಉದ್ದೇಶ ಹೆನ್ರಿ ಡುನಾಂಟ್ ಅವರ ಸಲಹೆಗಳನ್ನು ಚರ್ಚಿಸುವುದು. ಈ ಐದು ಸದಸ್ಯರ ಸಮಿತಿಯು ಜನರಲ್ ಗುಯೆಮ್ ಹೆನ್ರಿ ಡುಫೂರ್, ಗುಸ್ಟಾವ್ ಮೊನಿಯರ್, ಲೂಯಿಸ್ ಅಪ್ಪಿಯಾ, ಥಿಯೋಡರ್ ಮೊನೊಯಿರ್ ಮತ್ತು ಹೆನ್ರಿ ದಿನಾಂತ್ ಅವರನ್ನು ಒಳಗೊಂಡಿತ್ತು. ಇವರಲ್ಲಿ, ಸ್ವಿಸ್ ಸೈನ್ಯದ ಜನರಲ್ ಆಗಿದ್ದ ಗೋಮ್ ಹೆನ್ರಿ ಡುಫೂರ್ ಒಂದು ವರ್ಷ ಸಮಿತಿ ಅಧ್ಯಕ್ಷರಾಗಿ ಮತ್ತು ನಂತರ ಗೌರವ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.
ಅಕ್ಟೋಬರ್ 1863 ರಲ್ಲಿ, ಅಂತಾರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಯಿತು, ಇದರಲ್ಲಿ 16 ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಈ ಸಮ್ಮೇಳನದಲ್ಲಿ ಅನೇಕ ತತ್ವಗಳನ್ನು ಅಂಗೀಕರಿಸಲಾಯಿತು ಮತ್ತು ಸಮಿತಿಯ ಅಂತಾರಾಷ್ಟ್ರೀಯ ಚಿಹ್ನೆಯನ್ನು ಸಹ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ, ಯುದ್ಧದ ಸಮಯದಲ್ಲಿ ಅನಾರೋಗ್ಯ ಮತ್ತು ಗಾಯಗೊಂಡ ಜನರನ್ನು ನೋಡಿಕೊಳ್ಳುವಂತಹ ಸ್ವಯಂಪ್ರೇರಿತ ಸಂಸ್ಥೆಗಳನ್ನು ಸ್ಥಾಪಿಸಲು ವಿಶ್ವದ ಎಲ್ಲ ರಾಷ್ಟ್ರಗಳಿಗೆ ಮನವಿ ಮಾಡಲಾಯಿತು. ಈ ಘಟಕಗಳನ್ನು ರಾಷ್ಟ್ರೀಯ ರೆಡ್‌ಕ್ರಾಸ್ ಸಂಘಗಳು ಎಂದು ಕರೆಯಲಾಗುತ್ತಿತ್ತು. ಉಳಿದ ಐದು ಸದಸ್ಯರ ಸಮಿತಿಯನ್ನು ಆರಂಭದಲ್ಲಿ "ಗಾಯಗೊಂಡವರಿಗೆ ಪರಿಹಾರಕ್ಕಾಗಿ ಅಂತಾರಾಷ್ಟ್ರೀಯ ಸಮಿತಿ" ಎಂದು ಕರೆಯಲಾಗುತ್ತಿತ್ತು, ನಂತರ ಇದನ್ನು "ಅಂತಾರಾಷ್ಟ್ರೀಯ ರೆಡ್‌ಕ್ರಾಸ್ ಸಮಿತಿ" ಎಂದು ಮರುನಾಮಕರಣ ಮಾಡಲಾಯಿತು.