ನವದೆಹಲಿ: ವಿಶ್ವದಾದ್ಯಂತ ಸೆಪ್ಟೆಂಬರ್ 8ರಂದು ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಿಸಲಾಗುತ್ತದೆ. ವಿಶ್ವದಲ್ಲಿ ಶಿಕ್ಷಣದ ಮಹತ್ವ ತೋರಿಸಲು ಮತ್ತು ಅನಕ್ಷರತೆ ತೊಲಗಿಸುವುದು ಹಾಗೂ ಶಿಕ್ಷಣದ ಪಡೆಯಲು ಉತ್ತೇಜಿಸುವುದು ಇದರ ಉದ್ದೇಶ. ಈ ದಿನದಂದು ವಿಶ್ವಸಂಸ್ಥೆಯ ಯುನೆಸ್ಕೋ ಸಂಸ್ಥೆಯು ಹಲವು ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವುದರೊಂದಿಗೆ ಅಂತಾರಾಷ್ಟ್ರೀಯ ಸಾಕ್ಷರತಾ ಪ್ರಶಸ್ತಿಗಳನ್ನು ಸಹ ನೀಡುತ್ತದೆ.
1965ರಲ್ಲಿ ಸೆಪ್ಟೆಂಬರ್ 8ರಿಂದ 19ವರೆಗೆ ಇರಾನ್‌ನ ಟೆಹ್ರಾನ್‌ನಲ್ಲಿ ನಡೆದ ಶಿಕ್ಷಣ ಮಂತ್ರಿಗಳ ವಿಶ್ವ ಸಮ್ಮೇಳನದಲ್ಲಿ ಅನಕ್ಷರತೆಯನ್ನು ತೊಡೆದುಹಾಕುವ ಉದ್ದೇಶದಿಂದ ಅಂತಾರಾಷ್ಟ್ರೀಯ ಸಾಕ್ಷರತಾ ದಿನ ಆಚರಿಸುವ ಕಲ್ಪನೆಯನ್ನು ಮೊದಲು ಪರಿಚಯಿಸಲಾಯಿತು. ಈ ಚರ್ಚೆಯ ಸಂದರ್ಭದಲ್ಲೇ ಯುನೆಸ್ಕೋ 1965ರಲ್ಲಿ ವಿಶ್ವ ಸಾಕ್ಷರತಾ ದಿನವನ್ನು ಘೋಷಿಸಿತು. ಇದರ ಮರು ವರ್ಷವೇ ಎಂದರೆ 1966ರ ಸೆಪ್ಟೆಂಬರ್ 8ರಂದು ಮೊದಲ ವಿಶ್ವ ಸಾಕ್ಷರತಾ ದಿನವನ್ನು ಆಚರಿಸಲಾಯಿತು. ಇಷ್ಟೇ ಅಲ್ಲ, 2009-2010ರಲ್ಲಿ ವಿಶ್ವಸಂಸ್ಥೆಯ ಸಾಕ್ಷರತಾ ದಶಕವನ್ನು ಘೋಷಿಸಲಾಯಿತು.
ವಿಶ್ವ ಸಾಕ್ಷರತಾ ದಿನ 2022ರ ಥೀಮ್: ಪ್ರತಿ ವರ್ಷ ವಿಶ್ವ ಸಾಕ್ಷರತಾ ದಿನದಂದು ಯಾವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಥೀಮ್ ಸಿದ್ಧಪಡಿಸಲಾಗುತ್ತದೆ. ಈ ಬಾರಿಯ ಥೀಮ್ ಸಾಕ್ಷರತಾ ಕಲಿಕೆಯ ಸ್ಥಳಗಳನ್ನು ಪರಿವರ್ತಿಸುವುದು; ಅವಕಾಶಗಳು ಮತ್ತು ಸಾಧ್ಯತೆಗಳನ್ನು ಅನ್ವೇಷಿಸುವುದು ಎಂದು ಇರಿಸಲಾಗಿದೆ. ಇದೇ ರೀತಿ ಪ್ರತಿ ವರ್ಷ ಥೀಮ್ಗೆ ಅನುಗುಣವಾಗಿ ಕಾರ್ಯಕ್ರಮಗಳು ಮತ್ತು ಪ್ರಶಸ್ತಿಗಳನ್ನು ಘೋಷಿಸಲಾಗುತ್ತದೆ.
ಹಿಂದಿನ ಥೀಮ್ಗಳು
- 2015 - ಸಾಕ್ಷರತೆ ಮತ್ತು ಸುಸ್ಥಿರ ಸಮಾಜ
- 2016 - ಇತಿಹಾಸವನ್ನು ಓದಿ ಮತ್ತು ಭವಿಷ್ಯವನ್ನು ಬರೆಯಿರಿ
- 2017 - ಡಿಜಿಟಲ್ ಜಗತ್ತಿನಲ್ಲಿ ಶಿಕ್ಷಣ
- 2018 - ಸಾಕ್ಷರತೆ ಮತ್ತು ಕೌಶಲ್ಯ ಅಭಿವೃದ್ಧಿ
- 2019 - ಸಾಕ್ಷರತೆ ಮತ್ತು ಬಹುಭಾಷಾ
- 2020 - ಸಾಕ್ಷರತೆಯ ಶಿಕ್ಷಣ ಮತ್ತು ಕೋವಿಡ್ ಬಿಕ್ಕಟ್ಟಿನ ಬಿಕ್ಕಟ್ಟು ಮತ್ತು ಆಚೆಗೆ
- 2021 - ಮಾನವ ಕೇಂದ್ರಿತ ಚೇತರಿಕೆಗಾಗಿ ಸಾಕ್ಷರತೆ: ಡಿಜಿಟಲ್ ವಿಭಜನೆಯನ್ನು ಸಂಕುಚಿತಗೊಳಿಸುವುದು
- 2022 - ಸಾಕ್ಷರತೆಯ ಕಲಿಕೆಯ ಸ್ಥಳಗಳನ್ನು ಪರಿವರ್ತಿಸುವುದು; ಅವಕಾಶಗಳು ಮತ್ತು ಸಾಧ್ಯತೆಗಳನ್ನು ಅನ್ವೇಷಿಸುವುದು
ಸಾಕ್ಷರತೆಯ ಅಂಕಿ-ಅಂಶಗಳು ಹೀಗಿವೆ: ವಿಶ್ವಸಂಸ್ಥೆ ನೀಡಿರುವ ಅಂಕಿ - ಅಂಶಗಳ ಪ್ರಕಾರ, ಜಗತ್ತಿನಲ್ಲಿ ಕೇವಲ ನಾಲ್ಕು ಶತಕೋಟಿ ಜನರು ಮಾತ್ರ ಸಾಕ್ಷರರಾಗಿದ್ದಾರೆ. ಇಡೀ ಪ್ರಪಂಚದಲ್ಲಿ ಪ್ರತಿ 5 ವಯಸ್ಕರಲ್ಲಿ ಒಬ್ಬರು ಇನ್ನೂ ಅನಕ್ಷರಸ್ಥರು ಎಂದು ಹೇಳಲಾಗುತ್ತದೆ.