ಕರ್ನಾಟಕ

karnataka

ETV Bharat / bharat

ತ್ರಿವಳಿ ರೈಲು ದುರಂತ: ಆಸ್ಟ್ರೇಲಿಯಾ, ಶ್ರೀಲಂಕಾ, ಕೆನಡಾ ನಾಯಕರ ತೀವ್ರ ಸಂತಾಪ - Odisha train accident

ಒಡಿಶಾ ರೈಲು ದುರಂತಕ್ಕೆ ದೇಶವಲ್ಲದೇ ವಿದೇಶದಲ್ಲೂ ಆಘಾತ ವ್ಯಕ್ತವಾಗಿದೆ. ವಿವಿಧ ರಾಷ್ಟ್ರಗಳ ನಾಯಕರು ಘಟನೆಗೆ ಸಂತಾಪ ಸೂಚಿಸಿದ್ದಾರೆ.

ತ್ರಿವಳಿ ರೈಲು ದುರಂತ
ತ್ರಿವಳಿ ರೈಲು ದುರಂತ

By

Published : Jun 3, 2023, 12:45 PM IST

ನವದೆಹಲಿ:ಒಡಿಶಾದಲ್ಲಿ ಕಂಡು ಕೇಳರಿಯದಂತೆ ನಡೆದ ಭೀಕರ ರೈಲು ದುರಂತದಲ್ಲಿ 250 ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದು ದೇಶ ವಿದೇಶಗಳ ಜನರ ಮನ ಕಲುಕಿದೆ. ಶ್ರೀಲಂಕಾ, ಆಸ್ಟ್ರೇಲಿಯಾ, ಕೆನಡಾ, ತೈವಾನ್​ ಸೇರಿದಂತೆ ಹಲವು ರಾಷ್ಟ್ರಗಳ ನಾಯಕರು ಘಟನೆಯ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ, 'ನಾವು ನಿಮ್ಮೊಂದಿಗಿದ್ದೇವೆ' ಎಂದು ಧೈರ್ಯ ತುಂಬಿದ್ದಾರೆ.

ಒಡಿಶಾದ ಬನಹಗಾ ರೈಲು ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ತ್ರಿವಳಿ ರೈಲುಗಳ ಘರ್ಷಣೆ ನಡೆದಿದೆ. 900 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಗಳು ಭರದಿಂದ ಸಾಗಿವೆ. ಪ್ರಧಾನಿ ನರೇಂದ್ರ ಮೋದಿ, ಸಿಎಂ ನವೀನ್​ ಪಟ್ನಾಯಕ್​, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ರೈಲ್ವೆ ಸಚಿವ ಅಶ್ವಿನಿ ವೈಷ್ಟಣ್​ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ದುರಂತದ ಬಗ್ಗೆ ಟ್ವೀಟ್​ ಮಾಡಿ ಕಳವಳ ವ್ಯಕ್ತಪಡಿಸಿರುವ ಆಸ್ಟ್ರೇಲಿಯಾದ ವಿದೇಶಾಂಗ ವ್ಯವಹಾರಗಳ ಸಚಿವ ಪೆನ್ನಿ ವಾಂಗ್ ಅವರು, ವಿನಾಶಕಾರಿ ರೈಲು ಅಪಘಾತ ಹಲವು ಪ್ರಾಣಗಳನ್ನು ಬಲಿ ಪಡೆದಿದೆ. ಇದು ದುಃಖಕರ ಸಂಗತಿ. ಘಟನೆಯ ಬಗ್ಗೆ ಸಂತಾಪವಿದೆ ಎಂದು ಹೇಳಿದ್ದಾರೆ. ಶ್ರೀಲಂಕಾದ ವಿದೇಶಾಂಗ ಸಚಿವ ಅಲಿ ಸಬ್ರಿ ಅವರು, ಒಡಿಶಾದಲ್ಲಿ ಸಂಭವಿಸಿದ ರೈಲು ಅಪಘಾತದ ಬಗ್ಗೆ ತಿಳಿದು ತೀವ್ರ ದುಃಖವಾಗಿದೆ. ಅಪಘಾತದಲ್ಲಿ ಗಾಯಗೊಂಡಿರುವ ಎಲ್ಲರೂ ಶೀಘ್ರ ಗುಣಮುಖರಾಗಲಿ. ಈ ದುಃಖದ ಸಮಯದಲ್ಲಿ ಶ್ರೀಲಂಕಾ ಭಾರತದೊಂದಿಗೆ ನಿಂತಿರುತ್ತದೆ ಎಂದು ಹೇಳಿದ್ದಾರೆ.

ಇನ್ನೊಂದೆಡೆ, ಒಡಿಶಾದ ರೈಲು ಅಪಘಾತದಲ್ಲಿ ಸಾವನ್ನಪ್ಪಿದ ಸಂತ್ರಸ್ತರ ಕುಟುಂಬಗಳಿಗೆ ತೈವಾನ್ ಅಧ್ಯಕ್ಷ ತ್ಸೈ ಇಂಗ್-ವೆನ್ ಶನಿವಾರ ಸಂತಾಪ ಸೂಚಿಸಿದರು. "ಭಾರತದಲ್ಲಿ ಸಂಭವಿಸಿದ ರೈಲು ಅಪಘಾತದಿಂದ ಸಂತ್ರಸ್ತರಾದ ಪ್ರತಿಯೊಬ್ಬರ ಗುಣಮುಖಕ್ಕಾಗಿ ಪ್ರಾರ್ಥಿಸುವೆ. ಸಂತ್ರಸ್ತರಿಗೆ ಮತ್ತು ಅವರ ಕುಟುಂಬಗಳಿಗೆ ತೀವ್ರ ಸಂತಾಪ ಸೂಚಿಸುವೆ ಎಂದು ಟ್ವೀಟ್​ ಮಾಡಿದ್ದಾರೆ.

ಕೆನಡಾ ಪಿಎಂ ಜಸ್ಟಿನ್ ಟ್ರುಡೊ ಸಂತಾಪ:ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಕೂಡ ರೈಲು ದುರಂತಕ್ಕೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ತ್ರಿವಳಿ ರೈಲು ಅಪಘಾತದಲ್ಲಿ ಸಂಭವಿಸಿದ ಜೀವಹಾನಿ ದುಃಖಕ್ಕೀಡು ಮಾಡಿದೆ. ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಸಂತ್ರಸ್ತರ ಕುಟುಂಬಗಳಿಗೆ ನನ್ನ ಸಾಂತ್ವನಗಳು. ಅಪಘಾತದ ಚಿತ್ರಗಳು ಮತ್ತು ವರದಿಗಳು ನನ್ನ ಹೃದಯವನ್ನು ಕಲುಕಿದವು. ಈ ಕಷ್ಟದ ಸಮಯದಲ್ಲಿ ಕೆನಡಿಯನ್ನರು ಭಾರತದ ಜನರೊಂದಿಗೆ ನಿಂತಿರುತ್ತಾರೆ ಎಂದು ಟ್ವೀಟ್​ ಮೂಲಕ ತಿಳಿಸಿದ್ದಾರೆ.

ಹೇಗಾಯ್ತು ಅನಾಹುತ:ಹೌರಾದಿಂದ ಪಯಣಿಸಿದ್ದ ಶಾಲಿಮಾರ್-ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲುಗಳು ಒಡಿಶಾದ ಬನಹಗಾ ರೈಲು ನಿಲ್ದಾಣದಲ್ಲಿ ಗೂಡ್ಸ್​​ ರೈಲಿಗೆ ಗುದ್ದಿದೆ. ಮೊದಲು ಹಳಿತಪ್ಪಿದ ಕೋರಮಂಡಲ್​ ಎಕ್ಸ್​ಪ್ರೆಸ್​ ಗೂಡ್ಸ್​ ರೈಲಿಗೆ ಗುದ್ದಿದೆ. ಇದರಿಂದ ಅದರ ಬೋಗಿಗಳು ಇನ್ನೊಂದ ಲೈನ್​ ಮೇಲೆ ಬಿದ್ದಿವೆ. ಇದೇ ಲೈನ್​ ಮೇಲೆ ಬಂದ ಬೆಂಗಳೂರಿನಿಂದ ಹೊರಟ ಹೌರಾ ಎಕ್ಸ್‌ಪ್ರೆಸ್ ಈ ​ ಬೋಗಿಗಳಿಗೆ ಬಲವಾಗಿ ಗುದ್ದಿದ ಕಾರಣ ತೀವ್ರ ಪ್ರಾಣ ಹಾನಿ ಸಂಭವಿಸಿದೆ.

238 ಕ್ಕೂ ಅಧಿಕ ಸಾವಾಗಿದ್ದು, ಸಾವಿರಾರು ಜನರು ಗಾಯಗೊಂಡಿದ್ದಾರೆ. ಎಲ್ಲರನ್ನೂ ಗೋಪಾಲ್‌ಪುರ, ಖಾಂತಪಾರಾ, ಬಾಲಸೋರ್, ಭದ್ರಕ್ ಮತ್ತು ಸೊರೊ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಗ್ನೇಯ ರೈಲ್ವೆ ತಿಳಿಸಿದೆ. ಅಪಾಯದಿಂದ ಪಾರಾದ ಪ್ರಯಾಣಿಕರಿಗೆ ಖರಗ್‌ಪುರ ನಿಲ್ದಾಣದಲ್ಲಿ ನೀರು, ಚಹಾ ಮತ್ತು ಆಹಾರ ಪ್ಯಾಕೆಟ್‌ಗಳನ್ನು ಒದಗಿಸಲಾಗುತ್ತಿದೆ. ವಿಶೇಷ ರೈಲಿನ ಮೂಲಕ ಜನರನ್ನು ಅವರ ಊರಿಗೆ ತಲುಪಿಸಲಾಗುತ್ತಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಘಟನಾ ಸ್ಥಳದಲ್ಲಿ ಸುಮಾರು 200 ಆಂಬ್ಯುಲೆನ್ಸ್‌ಗಳು, 45 ಸಂಚಾರಿ ಆರೋಗ್ಯ ತಂಡಗಳು, ಎನ್​ಡಿಆರ್​ಎಫ್​ ತಂಡ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಇದರೊಂದಿಗೆ ಎಸ್‌ಸಿಬಿಯ 25 ವೈದ್ಯರ ತಂಡದೊಂದಿಗೆ 50 ಹೆಚ್ಚುವರಿ ವೈದ್ಯರನ್ನೂ ಸಜ್ಜುಗೊಳಿಸಲಾಗಿದೆ. ಫೋರೆನ್ಸಿಕ್ ಮೆಡಿಸಿನ್ ತಜ್ಞರೂ ಸ್ಥಳದಲ್ಲಿದ್ದಾರೆ.

ಇದನ್ನೂ ಓದಿ:ಕೋರಮಂಡಲ್​ಗೆ ರೈಲಿಗೆ 'ಕರಾಳ ಶುಕ್ರವಾರ': 14 ವರ್ಷಗಳ ಹಿಂದೆ ಹಳಿತಪ್ಪಿ ನಡೆದಿತ್ತು ದುರಂತ!

ABOUT THE AUTHOR

...view details