ವಿಶ್ವ ಆರೋಗ್ಯ ಸಂಸ್ಥೆ (WHO) ಏಪ್ರಿಲ್ ಕೊನೆಯ ವಾರವನ್ನು 24 ರಿಂದ 30 ರವರೆಗೆ ವಿಶ್ವ ರೋಗನಿರೋಧಕ ವಾರ ಎಂದು ಗುರುತಿಸುತ್ತದೆ. ಈ ವರ್ಷ ವಾರದ ಥೀಮ್ 'ಲಾಂಗ್ ಲೈಫ್ ಫಾರ್ ಆಲ್' (Long Life For All). ಈ ವಾರವು ಎಲ್ಲಾ ವಯಸ್ಸಿನ ಜನರನ್ನು ರೋಗದ ವಿರುದ್ಧ ರಕ್ಷಿಸಲು ಲಸಿಕೆಗಳ ಬಳಕೆಯನ್ನು ಉತ್ತೇಜಿಸುವ ಗುರಿ ಹೊಂದಿದೆ. ಸಕಾಲಿಕ ವ್ಯಾಕ್ಸಿನೇಷನ್‌ನಿಂದಾಗಿ ವಿಶ್ವಾದ್ಯಂತ ಸುಮಾರು 1.5 ಮಿಲಿಯನ್ ಸಾವುಗಳನ್ನು ತಡೆಯಬಹುದು ಎಂದು ಅದು ಅಂದಾಜಿಸಿದೆ.
1796ರಿಂದ ಲಸಿಕೆಗಳು ಅರಿವಿಗೇ ಬಾರದಂತೆ ಜೀವಗಳನ್ನು ಉಳಿಸುತ್ತಿವೆ. ಸಿಡುಬು ರೋಗಕ್ಕೆ ಮೊದಲು ಲಸಿಕೆ ನೀಡಲಾಯಿತು. ಮೊದಲು ಒಂದು ಲಸಿಕೆ ಒಂದು ಜೀವದ ಅವಕಾಶವನ್ನು ಕಲ್ಪಿಸಿತು. ನಂತರ ಬಂದ ನೂರಾರು ಲಸಿಕೆಗಳು ಎರಡು ಕಾಲು ಶತಮಾನದಲ್ಲಿ ಶತಕೋಟಿ ಜನರ ಜೀವ ಉಳಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ.
ಗರ್ಭಕಂಠದ ಕ್ಯಾನ್ಸರ್, ಕಾಲರಾ, ಡಿಫ್ತೀರಿಯಾ, ಹೆಪಟೈಟಿಸ್ ಬಿ, ಇನ್ಫ್ಲುಯೆನ್ಸ, ಜಪಾನೀಸ್ ಎನ್ಸೆಫಾಲಿಟಿಸ್, ದಡಾರ, ಮೆನಿಂಜೈಟಿಸ್, ಮಂಪ್ಸ್, ನ್ಯುಮೋನಿಯಾ, ಪೋಲಿಯೊ, ಹಳದಿ ಜ್ವರ ಇತ್ಯಾದಿ ಸೇರಿದಂತೆ ಸುಮಾರು 20 ಕಾಯಿಲೆಗಳಿಗೆ ಲಸಿಕೆ ಇರುವುದರಿಂದ ಕಾಯಿಲೆ ಮತ್ತು ಮರಣವನ್ನು ತಡೆಗಟ್ಟುವಲ್ಲಿ ಸಹಾಯವಾಗಿದೆ. ಕೋವಿಡ್-19 ವಿರುದ್ಧ ಅಭಿವೃದ್ಧಿಪಡಿಸಲಾದ ಲಸಿಕೆಯಿಂದ ಕೂಡ ರೋಗದ ಪರಿಣಾಮ ಕಡಿಮೆಯಾಗುವುದು, ಆಸ್ಪತ್ರೆಗೆ ದಾಖಲು ಮತ್ತು ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಿದೆ.
ಲಸಿಕೆಗಳು ತಮ್ಮ ಪರಿಣಾಮಕಾರಿತ್ವವನ್ನು ಪದೇ ಪದೇ ಸಾಬೀತುಪಡಿಸಿವೆ ಮತ್ತು ಇಂದಿನ ಸಮಯದಲ್ಲಿ ಲಸಿಕೆ ಹಾಕಿದ ಜನರು ಉತ್ತಮ ಜೀವನವನ್ನು ನಡೆಸುವ ಅವಕಾಶಗಳನ್ನು ಹೊಂದಿದ್ದಾರೆ ಎಂದು ಕೋಲ್ಕತ್ತಾದ ಸಿಎಮ್ಆರ್ಐನ ಶ್ವಾಸಕೋಶಶಾಸ್ತ್ರಜ್ಞ ಡಾ. ರಾಜಾ ಧರ್ ತಿಳಿಸಿದರು.
ಲಸಿಕೆಗಳು ಬಹಳ ಮುಖ್ಯವಾಗಿ ರೋಗ ತಡೆಗಟ್ಟುವ ಕ್ರಮವಾಗಿದೆ. ಇದು ಜೀವ ರಕ್ಷಣೆಗೆ ಸಹಾಯ ಮಾಡುತ್ತದೆ ಮತ್ತು ಮರಣ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಲಸಿಕೆಯನ್ನು ಸಮಯೋಚಿತವಾಗಿ ನೀಡಿದಾಗ ವಯಸ್ಸನ್ನು ಲೆಕ್ಕಿಸದೆ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ. ಪ್ರಸ್ತುತ 29ಕ್ಕೂ ಹೆಚ್ಚು ಲಸಿಕೆಗಳಿರುವುದರಿಂದ ಲಸಿಕೆಯ ಬಗ್ಗೆ ಮಾತನಾಡಲು ಉತ್ತಮ ಸಮಯ ಎನಿಸುತ್ತದೆ ಎಂದು ಮುಂಬೈ ಮೂಲದ ಶ್ವಾಸಕೋಶಶಾಸ್ತ್ರಜ್ಞ ಡಾ. ಆಗಮ್ ವೋರಾ ಹೇಳುತ್ತಾರೆ.