ತನ್ನ ಮಕ್ಕಳನ್ನು ಹೆಗಲ ಮೇಲೆ ಕೂರಿಸಿಕೊಂಡು ಪ್ರಪಂಚ ತೋರಿಸುವ ಪ್ರೀತಿಯ ಅಪ್ಪನಿಗೆ ಇಂದು ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು. ಇದು ಕೇವಲ ಅಪ್ಪನಿಗೆ ಶುಭಕೋರುವ ದಿನ ಮಾತ್ರವೇ ಅಲ್ಲ, ಅವರ ತ್ಯಾಗವನ್ನೂ ಸ್ಮರಿಸುವ ಸುದಿನ. ತಾಯಿಯ ಮಡಿಲಿನಷ್ಟೇ ವಾತ್ಸಲ್ಯ, ಮಮತೆ ತೋರುವ ಅಪ್ಪನ ಹೆಗಲು ಪ್ರತಿ ಮಗುವಿಗೂ ಸಿಂಹಾಸನವೇ. ಮಗುವಿನ ಜೀವನದಲ್ಲಿ ತಾಯಿಯೊಂದಿಗೆ, ತಂದೆಯ ಪಾತ್ರವು ಅಷ್ಟೇ ಮಹತ್ವದ್ದು. ತಂದೆಯ ತ್ಯಾಗವನ್ನು ಸ್ಮರಿಸುವ ಸಲುವಾಗಿ ಪ್ರಪಂಚದ ಒಟ್ಟು 70 ದೇಶಗಳು ಅಪ್ಪಂದಿರ ದಿನ ಆಚರಿಸುತ್ತಾರೆ.
ತಂದೆಯ ದಿನದ ಹುಟ್ಟು ಹೇಗೆ?: ಫಾದರ್ಸ್ ಡೇ ಆಚರಣೆ ಅಮೆರಿಕದಲ್ಲಿ 1909ರಲ್ಲಿ ಮೊದಲ ಬಾರಿಗೆ ಅನಧಿಕೃತವಾಗಿ ಪ್ರಾರಂಭವಾಗಿತ್ತು. ಆದರೆ ಅಧಿಕೃತವಾಗಿ 1910ರಲ್ಲಿ ಆಚರಣೆ ಶುರುವಾಗಿದೆ. ಈ ದಿನಾಚರಣೆಯ ದಿನದ ಹಿನ್ನೆಲೆಯ ಕುರಿತು ಹಲವಾರು ತಜ್ಞರು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಇತಿಹಾಸಕಾರರ ಪ್ರಕಾರ, ಅಪ್ಪಂದಿರ ದಿನದ ಸ್ಥಾಪಕಿ ಸೊನೊರಾ ಸ್ಮಾರ್ಟ್ ಡಾಡ್ ಎಂಬಾಕೆ.
ಈಕೆ 1882ರಲ್ಲಿ ಜನಿಸಿದಳು. ಇವರ ತಂದೆ ಅಮೆರಿಕನ್ ಅಂತರ್ಯುದ್ದದಲ್ಲಿ ಪಾಲ್ಗೊಂಡ ವಿಲಿಯಂ ಜಾಕ್ಸನ್ ಸ್ಮಾರ್ಟ್. ಸೊನೊರಾ ತನ್ನ 16ನೇ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಳ್ಳುತ್ತಾಳೆ. ಹೀಗಾಗಿ ಕುಟುಂಬದ ಜವಾಬ್ದಾರಿ ಹೊತ್ತುಕೊಂಡು ತಂದೆಯಂದಿಗೆ ಐವರು ಸಹೋದರರನ್ನು ಸಾಕುತ್ತಾಳೆ. ಒಂದು ದಿನ ಚರ್ಚ್ನಲ್ಲಿ ತಾಯಂದಿರ ದಿನದ ಧರ್ಮೋಪದೇಶ ಕೇಳುತ್ತಿದ್ದಾಗ, ಯಾಕೆ ಯಾರೂ ಕೂಡಾ ತಂದೆಯ ದಿನವನ್ನು ಆಚರಿಸುವುದಿಲ್ಲ ಎಂಬ ಪ್ರಶ್ನೆ ಆಕೆಯಲ್ಲಿ ಮೂಡುತ್ತದೆ. ಇದರಿಂದ ಪ್ರಪಂಚದಾದ್ಯಂತ ತಂದೆಯರನ್ನು ಗೌರವಿಸಲೇಬೇಕು ಎಂಬ ಉದ್ದೇಶದಿಂದ ತನ್ನ ತಂದೆಯ ಜನ್ಮದಿನವಾದ ಜೂನ್ 5 ಅನ್ನು ಅಪ್ಪಂದಿರ ದಿನವನ್ನಾಗಿ ಆಚರಿಸಲು ಮುಂದಾಗುತ್ತಾಳೆ. ಇದರ ಜೊತೆಗೆ, ಅಂದಿನ ಸರ್ಕಾರವನ್ನೂ ಆಕೆ ಮನವೊಲಿಸುತ್ತಾಳೆ. ಕ್ರಮೇಣ ಈ ಆಚರಣೆ ಅಮೆರಿಕದ ತುಂಬೆಲ್ಲ ಹರಡಿಕೊಂಡಿತು.