ಇಂದು (ಫೆ.20) ರಂದು ಜಗತ್ತಿನಾದ್ಯಂತ ಅಂತಾರಾಷ್ಟ್ರೀಯ ಸಾಮಾಜಿಕ ನ್ಯಾಯ ದಿನವನ್ನಾಗಿ ಆಚರಿಸಲಾಗುತ್ತಿದೆ. ಸಾಮಾಜಿಕ ನ್ಯಾಯ ದಿನ ಆಚರಣೆಯ ಮಹತ್ವ ಹಾಗೂ ಈ ದಿನ ಆಚರಿಸುವ ಸಂಪ್ರದಾಯ ಯಾವಾಗ ಆರಂಭವಾಯಿತು ಎಂಬ ಬಗ್ಗೆ ಒಂದು ಕಿರುನೋಟ ಇಲ್ಲಿದೆ:
ಅಂತಾರಾಷ್ಟ್ರೀಯ ನ್ಯಾಯ ದಿನ ಆಚರಣೆ ಏಕೆ?
ಪ್ರತಿವರ್ಷದ ಫೆ.20ನೇ ದಿನಾಂಕದಂದು ಅಂತಾರಾಷ್ಟ್ರೀಯ ಸಾಮಾಜಿಕ ನ್ಯಾಯ ದಿನವನ್ನಾಗಿ ಆಚರಿಸಬೇಕೆಂದು 2007ರ ನವೆಂಬರ್ 26ರಂದು ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯವೊಂದನ್ನು ಅಂಗೀಕರಿಸಲಾಯಿತು. ಇದರ ನಂತರ ಪ್ರತಿವರ್ಷ ಫೆ.20 ರಂದು ಅಂತಾರಾಷ್ಟ್ರೀಯ ಸಾಮಾಜಿಕ ನ್ಯಾಯ ದಿನ ಆಚರಿಸಲಾಗುತ್ತಿದೆ. ಲಿಂಗ ಸಮಾನತೆ, ಸ್ಥಳೀಯ ಜನತೆ ಹಾಗೂ ವಲಸಿಗರ ಹಕ್ಕುಗಳ ರಕ್ಷಣೆ ಹಾಗೂ ಆ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ಸಾಮಾಜಿಕ ನ್ಯಾಯ ದಿನ ಆಚರಿಸಲಾಗುತ್ತದೆ.
ಸಾಮಾಜಿಕ ತಾರತಮ್ಯ ನಿವಾರಣೆಗಾಗಿ ಹಾಗೂ ಬಡತನ, ಲಿಂಗ ಅಸಮಾನತೆ, ದೈಹಿಕ ಅಸಮಾನತೆಯ ಪಿಡುಗನ್ನು ನಿವಾರಿಸಲು ಅಂತಾರಾಷ್ಟ್ರೀಯ ಸಮುದಾಯಗಳನ್ನು ಒಂದುಗೂಡಿಸುವ ಉದ್ದೇಶ ಈ ದಿನಾಚರಣೆ ಹೊಂದಿದೆ. ಜಗತ್ತಿನಾದ್ಯಂತ ಜನರ ಜೀವನಮಟ್ಟ ಸುಧಾರಣೆಗಾಗಿ ಜಾಗತೀಕರಣದ ಲಾಭಗಳನ್ನು ಪಡೆದುಕೊಳ್ಳುವುದು, ಐಟಿ ತಂತ್ರಜ್ಞಾನ ಸೇರಿದಂತೆ ಇತರ ಆಧುನಿಕ ತಂತ್ರಜ್ಞಾನಗಳ ಮೂಲಕ ಹೊಸ ಅವಕಾಶಗಳನ್ನು ಸೃಷ್ಟಿಸುವುದು ಸಹ ಸಾಮಾಜಿಕ ನ್ಯಾಯ ದಿನದ ಗುರಿಯಾಗಿದೆ.
ಹಿನ್ನೆಲೆ
ಅಂತಾರಾಷ್ಟ್ರೀಯ ಕಾರ್ಮಿಕ ಒಕ್ಕೂಟವು, ಪಾರದರ್ಶಕ ಜಾಗತೀಕರಣಕ್ಕಾಗಿ 2008ರ ಜೂನ್ 10 ರಂದು ಸಾಮಾಜಿಕ ನ್ಯಾಯದ ಕುರಿತಾದ ಪ್ರಮುಖ ಗೊತ್ತುವಳಿಯೊಂದನ್ನು ಅಂಗೀಕರಿಸಿತು. ಜಾಗತೀಕರಣದ ಬೆನ್ನಲ್ಲಿ ಅಭಿವೃದ್ಧಿಗೆ ವೇಗ ನೀಡುವುದು ಹಾಗೂ ಸಾಮಾಜಿಕ ನ್ಯಾಯದ ಪರಿಪಾಲನೆಯಾಗುವಂತೆ ನೋಡಿಕೊಳ್ಳುವುದು ಈ ಗೊತ್ತುವಳಿಯ ಪ್ರಮುಖ ಅಂಶವಾಗಿದೆ.
2021ರ ಘೋಷವಾಕ್ಯ: ಡಿಜಿಟಲ್ ಅರ್ಥವ್ಯವಸ್ಥೆಯಲ್ಲಿ ಸಾಮಾಜಿಕ ನ್ಯಾಯ
ಡಿಜಿಟಲ್ ಅರ್ಥವ್ಯವಸ್ಥೆಯು ಜಗತ್ತು ಕೆಲಸ ಮಾಡುವ ವಿಧಾನವನ್ನೇ ಬದಲಾಯಿಸುತ್ತಿದೆ. ಕಳೆದೊಂದು ದಶಕದಲ್ಲಿ ಉಂಟಾದ ಬ್ರಾಡ್ಬ್ಯಾಂಡ್ ಕ್ರಾಂತಿ, ಕ್ಲೌಡ್ ಕಂಪ್ಯೂಟಿಂಗ್ ತಂತ್ರಜ್ಞಾನದ ಬೆಳವಣಿಗೆಗಳು ದೇಶದ ಅರ್ಥಿಕ ಹಾಗೂ ಸಾಮಾಜಿಕ ವ್ಯವಸ್ಥೆಗಳ ಮೇಲೆ ಗಮನಾರ್ಹ ಬದಲಾವಣೆಗಳನ್ನು ತಂದಿವೆ. 2020ರ ಆರಂಭದಲ್ಲಿ ಉಂಟಾದ ಕೋವಿಡ್ ಬಿಕ್ಕಟ್ಟಿನಿಂದ ಹಲವಾರು ಕ್ಷೇತ್ರಗಳ ಜನತೆ ರಿಮೋಟ್ ಆಧಾರದಲ್ಲಿ ಕೆಲಸ ಮಾಡುವಂತಾಯಿತು. ಇದು ಡಿಜಿಟಲ್ ಆರ್ಥಿಕತೆಯು ಇನ್ನಷ್ಟು ವೇಗವಾಗಿ ಹಾಗೂ ಅಗಾಧವಾಗಿ ಬೆಳೆಯಲು ಕಾರಣವಾಯಿತು. ಆದರೆ ಡಿಜಿಟಲ್ ಆರ್ಥಿಕತೆ ಹಾಗೂ ಡಿಜಿಟಲ್ ಅವಲಂಬನೆ ಹೆಚ್ಚಾಗಿದ್ದರಿಂದ ಬಡ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಡಿಜಿಟಲ್ ತಾರತಮ್ಯವೂ ಹೆಚ್ಚಾಯಿತು. ಈ ಡಿಜಿಟಲ್ ಡಿವೈಡ್ ನಿವಾರಣೆಗೂ ಸಾಮಾಜಿಕ ನ್ಯಾಯ ಅತಿ ಮುಖ್ಯವಾಗಿದೆ.
ಒಟ್ಟಾರೆಯಾಗಿ ಜಾಗತಿಕ ಮಟ್ಟದಲ್ಲಿ ಮಾನವರ ಜೀವನದ ಎಲ್ಲ ಅಂಗಗಳಲ್ಲೂ ಸಾಮಾಜಿಕ ಸಮಾನತೆಯನ್ನು ಸಾಧಿಸಿ, ಸಾಮಾಜಿಕ ನ್ಯಾಯ ಒದಗಿಸಿ ಸುಸ್ಥಿರ ಹಾಗೂ ನಿರಂತರ ಬೆಳವಣಿಗೆ ಸಾಧಿಸಲು ಜಾಗೃತಿ ಮೂಡಿಸುವಲ್ಲಿ ಅಂತಾರಾಷ್ಟ್ರೀಯ ಸಾಮಾಜಿಕ ನ್ಯಾಯ ದಿನಾಚರಣೆ ಪ್ರಮುಖ ಪಾತ್ರ ವಹಿಸುತ್ತಿದೆ.