ಕರ್ನಾಟಕ

karnataka

ವಿಶ್ವ ಅಸ್ತಮಾ ದಿನ: ರೋಗ ಲಕ್ಷಣ, ಮುನ್ನೆಚ್ಚರಿಕೆ ಕ್ರಮಗಳು ಗೊತ್ತಿರಲಿ..

By

Published : May 2, 2023, 8:34 AM IST

ಅಸ್ತಮಾ ಶ್ವಾಸಕೋಶವನ್ನು ಬಾಧಿಸುತ್ತದೆ. ಉಸಿರಾಟದ ಸಮಸ್ಯೆ ತರುವ ಕಾಯಿಲೆ. ಇದರ ಲಕ್ಷಣ ವಯಸ್ಕರಲ್ಲಿ ಮಾತ್ರವಲ್ಲ, ಚಿಕ್ಕ ಮಕ್ಕಳಲ್ಲಿಯೂ ಕಂಡುಬರುತ್ತದೆ.

World Asthma Day
ವಿಶ್ವ ಆಸ್ತಮಾ ದಿನ ಇಂದು

ಅಸ್ತಮಾ ಖಾಯಿಲೆ ನಿರ್ಮೂಲನೆಗಾಗಿ ಜಗತ್ತಿನಾದ್ಯಂತ ಪ್ರತಿ ವರ್ಷ ವಿಶ್ವ ಅಸ್ತಮಾ ದಿನ ಆಚರಿಸುವುದರೊಂದಿಗೆ ಅರಿವು ಮೂಡಿಸಲಾಗುತ್ತಿದೆ. ಅಸ್ತಮಾ ದಿನವನ್ನು ಮೇ ತಿಂಗಳ ಮೊದಲ ಮಂಗಳವಾರ ಆಚರಿಸಲಾಗುತ್ತದೆ. ಗ್ಲೋಬಲ್ ಇನಿಶಿಯೇಟಿವ್ ಫಾರ್ ಅಸ್ತಮಾ (GINA) ಎಂಬ ಸಂಸ್ಥೆ ವಾರ್ಷಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಖಾಯಿಲೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು, ಜಗತ್ತಿನಾದ್ಯಂತ ರೋಗಿಗಳನ್ನು ಆರೈಕೆ ಮಾಡುವ ಮೂಲಕ ಆರೋಗ್ಯ ಸುಧಾರಿಸುವುದು ಇದರ ಮುಖ್ಯ ಗುರಿ.

ಭಾರತದಲ್ಲಿರು ಅಸ್ತಮಾ ರೋಗಿಗಳೆಷ್ಟು?: ಅಸ್ತಮಾ ದಿನವನ್ನು ಮೊದಲ ಬಾರಿಗೆ 1998ರಲ್ಲಿ ಆಚರಿಸಲಾಯಿತು. ವಿಶ್ವ ಆರೋಗ್ಯ ಸಂಸ್ಥೆ(WHO) ಮಾಹಿತಿ ಪ್ರಕಾರ, ಭಾರತದಲ್ಲಿ ಮಗುವಿನಿಂದ ಹಿಡಿದು ಹಿರಿಯರವರೆಗೂ ಸುಮಾರು 20 ಮಿಲಿಯನ್ ಅಸ್ತಮಾ ರೋಗಿಗಳಿದ್ದಾರೆ. ಇದೊಂದು ಉಸಿರಾಟದ ಕಾಯಿಲೆ. ಸೋಂಕಿನ ಅಪಾಯ ಹೆಚ್ಚು. ಎಚ್ಚರಿಕೆ ಮತ್ತು ಅರಿವಿನ ಅಗತ್ಯವಿರುವ ಕೋವಿಡ್ ಸಾಂಕ್ರಾಮಿಕದಂತಹ ಕಾಯಿಲೆ ತಪ್ಪಿಸಲು ಅಸ್ತಮಾಗೆ ಚಿಕಿತ್ಸೆ ಅವಶ್ಯಕ.

ಎಲ್ಲ ವಯೋಮಾನದವರಲ್ಲೂ ಹೆಚ್ಚುತ್ತಿದೆ ಅಸ್ತಮಾ: ಅಸ್ತಮಾ ದಾಳಿಯು ನಿಮ್ಮ ದೇಹದ ವಾಯುಮಾರ್ಗಗಳ ಸುತ್ತ ಸ್ನಾಯುಗಳನ್ನು ಬಿಗಿಗೊಳಿಸುವುದರಿಂದ ಉಂಟಾಗುವ ಸಾಧ್ಯತೆ ಇದೆ. ವಾಯುಮಾರ್ಗಗಳ ಒಳಪದರವು ಊದಿಕೊಳ್ಳುತ್ತದೆ ಅಥವಾ ಉರಿಯುತ್ತದೆ. ಇತ್ತೀಚಿನ ದಿನಗಳಲ್ಲಿ ವಿವಿಧ ಕಾರಣಗಳಿಂದಾಗಿ ಎಲ್ಲ ವಯಸ್ಸಿನ ಜನರಲ್ಲಿ ಹೆಚ್ಚುತ್ತಿದೆ. ಅಸ್ತಮಾದ ಹಲವು ಲಕ್ಷಣಗಳು ವಯಸ್ಕರಲ್ಲಿ ಮಾತ್ರವಲ್ಲದೇ ಮಕ್ಕಳಲ್ಲಿಯೂ ಕಂಡುಬರುತ್ತವೆ. ಶ್ವಾಸನಾಳಗಳು ನಿಸ್ತೇಜಗೊಂಡು ಉಸಿರಾಟದ ಸೋಂಕು ಉಂಟುಮಾಡುತ್ತದೆ. ಪರಿಣಾಮ ರೋಗಿ ತೀವ್ರ ಉಸಿರಾಟದ ತೊಂದರೆ ಅನುಭವಿಸುತ್ತಾನೆ.

ಅಸ್ತಮಾ ಬಾಧಿಸಲು ಕಾರಣವೇನು?: ಅಸ್ತಮಾ 6 ತಿಂಗಳ ಮಗುವಿನಿಂದ ಹಿಡಿದು ವಯಸ್ಸಾದ ವ್ಯಕ್ತಿಯಲ್ಲಿಯೂ ಸಂಭವಿಸುವ ಸಮಸ್ಯೆ. ಆನುವಂಶಿಕತೆ, ಆರೋಗ್ಯ ಸಮಸ್ಯೆಗಳು, ಅಲರ್ಜಿ, ಸೋಂಕು, ಕಾಲೋಚಿತ ಬದಲಾವಣೆಗಳು ಮತ್ತು ಮಾಲಿನ್ಯದಂತಹ ಅಂಶಗಳು ಇದಕ್ಕೆ ಕಾರಣವಾಗುತ್ತವೆ. ಮಕ್ಕಳಿಗೆ ಆನುವಂಶಿಕ ಅಂಶಗಳೂ ಕಾರಣವಂತೆ.

ಆನುವಂಶಿಕತೆಯ ಹೊರತಾಗಿ ಕೆಲವೊಮ್ಮೆ ದೈಹಿಕ ಬಲಹೀನತೆ ಪರಿಸ್ಥಿತಿ ಮತ್ತು ಪರಿಸರ ಹಾನಿಕಾರಕ ಅಂಶಗಳೂ ಸಹ ಈ ಕಾಯಿಲೆಗೆ ಕಾರಣವಾಗುತ್ತವೆ. ಉದಾಹರಣೆಗೆ, ಮಗುವಿನ ಪೋಷಕರಿಬ್ಬರೂ ಅಸ್ತಮಾ ಹೊಂದಿದ್ದರೆ ಮಗುವಿಗೆ ಕಾಯಿಲೆ ಬರುವ ಸಾಧ್ಯತೆ ಹೆಚ್ಚು. ಇದರೊಂದಿಗೆ ಕೆಲವು ದೈಹಿಕ ಕಾಯಿಲೆಗಳು, ಅಲರ್ಜಿ, ಸೋಂಕು ಮತ್ತು ಕೆಲವು ಔಷಧಿಗಳ ಅಡ್ಡ ಪರಿಣಾಮಗಳಿಂದಲೂ ಅಸ್ತಮಾ ಬಾಧಿಸಬಹುದು.

ಅಸ್ತಮಾ ವಿಧಗಳು:ವಯಸ್ಸು, ಆರೋಗ್ಯ ಸ್ಥಿತಿಗತಿ ಹಂತವನ್ನು ಪರಿಗಣಿಸಿ ಅಸ್ತಮಾವನ್ನು ವಿವಿಧ ವಿಧಗಳಿಂದ ಗುರುತಿಸಬಹುದು. ಅಲರ್ಜಿಕ್ ಅಸ್ತಮಾ, ಅಲರ್ಜಿಯಲ್ಲದ ಅಸ್ತಮಾ, ಔದ್ಯೋಗಿಕ ಅಸ್ತಮಾ, ಮಿಮಿಕ್ ಅಸ್ತಮಾ, ಮಗುವಿನ ಅಸ್ತಮಾ, ವಯಸ್ಕರ ಅಸ್ತಮಾ, ಒಣ ಕೆಮ್ಮು ಅಸ್ತಮಾ ಹಾಗು ಔಷಧ ಪ್ರತಿಕ್ರಿಯೆ ಆಸ್ತಮಾ ಸೇರಿದಂತೆ ವಿವಿಧ ಆಕಾರದಲ್ಲಿ ಗುರುತಿಸಬಹುದು.

ಅಸ್ತಮಾ ಲಕ್ಷಣಗಳು ಮತ್ತು ನಿವಾರಣೆ: ಅಸ್ತಮಾದಿಂದ ಬಳಲುತ್ತಿರುವ ಜನರು ವೈದ್ಯಕೀಯ ಸಲಹೆಯಿಲ್ಲದೆ ವೇಗವಾಗಿ ಚಲಿಸುವ ಮತ್ತು ತೀವ್ರ ಒತ್ತಡದ ವ್ಯಾಯಾಮಗಳನ್ನು ತಪ್ಪಿಸಬೇಕು. ಯಾವುದೇ ಕಾಯಿಲೆ ಬಂದಾಗ ದೇಹದಲ್ಲಿ ಬದಲಾವಣೆ ಆಗಿರುವುದರ ಕುರಿತು ಕಾಳಜಿ ವಹಿಸಬೇಕು. ಸ್ವಲ್ಪ ನಿರ್ಲಕ್ಷಿಸಿದರೂ ಅಸ್ತಮಾ ತಗಲುವ ಸಾಧ್ಯತೆ ಇದೆ. ಇಂಥ ಸಂದರ್ಭದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅವಶ್ಯಕ.

ಉಸಿರಾಟದ ತೊಂದರೆ, ವಿಪರೀತ ಕೆಮ್ಮು ಮತ್ತು ದೀರ್ಘಕಾಲದ ಶೀತ, ಎದೆ ನೋವು ಇವೆಲ್ಲ ಪುನರಾವರ್ತಿತ ಅಲರ್ಜಿಯ ಪ್ರತಿಕ್ರಿಯೆಗಳು. ನಿದ್ರಾ ಸಮಯದಲ್ಲಿ ಚಡಪಡಿಕೆ, ಎದೆಯಲ್ಲಿ ನೋವು, ನಿದ್ರಿಸಲು ಅಸಮರ್ಥತೆ ಅಥವಾ ಉಸಿರಾಟದ ತೊಂದರೆ ಉಂಟಾಗುತ್ತಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.

ಅಸ್ತಮಾ ನಿಯಂತ್ರಿಸುವಲ್ಲಿ ಇನ್ಹಲೇಷನ್ ಚಿಕಿತ್ಸೆ ಪರಿಣಾಮಕಾರಿ ಪಾತ್ರ ವಹಿಸುತ್ತದೆ. ಶ್ವಾಸಕೋಶಕ್ಕೆ ನೇರವಾಗಿ ಔಷಧ ಪೂರೈಸುವಲ್ಲಿ ಇನ್ಹಲೇಷನ್ ಚಿಕಿತ್ಸೆ ಉಪಯುಕ್ತ. ಆದರೆ, ರೋಗಿಗಳು ನಿಯಮಿತವಾಗಿ ಔಷಧ ತೆಗೆದುಕೊಳ್ಳಬೇಕಾಗುತ್ತದೆ. ಇದರಿಂದ ಖಾಯಿಲೆ ತಡೆಗಟ್ಟಬಹುದು ಎನ್ನುತ್ತಾರೆ ವೈದ್ಯರು.

ಸಕಾಲದಲ್ಲಿ ಚಿಕಿತ್ಸೆ ಪ್ರಾರಂಭಿಸಿದರೆ, ವ್ಯಕ್ತಿಯು ಈ ಕಾಯಿಲೆಯಿಂದ ಹೊರಬಂದು ಸಾಮಾನ್ಯ ಜೀವನ ನಡೆಸಬಹುದು. ಆದರೆ ಚಿಕಿತ್ಸೆ, ಔಷಧಿಗಳ ಜತೆಗೂ ರೋಗಿ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕು. ಇಲ್ಲದಿದ್ದರೆ ಕೆಲವೊಮ್ಮೆ ಮಾರಕವಾಗಲೂಬಹುದು. ಅಸ್ತಮಾದಿಂದ ಬಳಲುತ್ತಿರುವ ರೋಗಿ ಸಮಯಕ್ಕೆ ಸರಿಯಾಗಿ ಔಷಧಗಳನ್ನು ಸೇವಿಸಿ, ವೈದ್ಯರ ಸೂಚನೆಗಳನ್ನು ಅನುಸರಿಸಬೇಕು. ಆರೋಗ್ಯಕರ ಮತ್ತು ಸಮತೋಲಿತ ಜೀವನಶೈಲಿ ಹಾಗೂ ಸಮರ್ಪಕವಾದ ಆಹಾರ ಕ್ರಮ ಅನುಸರಿಸಿದರೆ, ಅಸ್ತಮಾವನ್ನು ಹೆಚ್ಚು ಪ್ರಮಾಣದಲ್ಲಿ ಗುಣಪಡಿಸಲು ಸಾಧ್ಯವಿದೆ.

ಇದನ್ನೂಓದಿ:ನೀವು 'ಆರೋಗ್ಯ ವಿಮೆ' ತೆಗೆದುಕೊಳ್ಳಲು ಬಯಸುವಿರಾ?: ಈ ಸಲಹೆಗಳನ್ನು ನೆನಪಿಡಿ

ABOUT THE AUTHOR

...view details