ಕರ್ನಾಟಕ

karnataka

ETV Bharat / bharat

ವಿಶ್ವ ಏಡ್ಸ್ ಲಸಿಕೆ ದಿನ: ಲಸಿಕೆ ಅಭಿವೃದ್ಧಿಯ ಅಗತ್ಯತೆ, ಜನ ಜಾಗೃತಿ - ಈಟಿವಿ ಭಾರತ ಕನ್ನಡ

ಮೇ 18ರಂದು ವಿಶ್ವ ಏಡ್ಸ್ ಲಸಿಕೆ ದಿನ ಆಚರಿಸಲಾಗುತ್ತದೆ. ಏಡ್ಸ್​​ ತಡೆಗಟ್ಟುವಲ್ಲಿ ಲಸಿಕೆಯ ಮಹತ್ವದ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಇಂದು ಮಾಡಲಾಗುತ್ತದೆ.

world-aids-vaccine-day-2023-promoting-urgency-to-develop-vaccine-to-prevent-aids
ವಿಶ್ವ ಏಡ್ಸ್ ಲಸಿಕೆ ದಿನ : ಏಡ್ಸ್ ತಡೆಗಟ್ಟಲು ಲಸಿಕೆ ಅಭಿವೃದ್ಧಿಯ ಅಗತ್ಯತೆ ಮತ್ತು ಜನ ಜಾಗೃತಿ

By

Published : May 18, 2023, 9:54 AM IST

ಪ್ರತಿ ವರ್ಷ ಮೇ 18ರಂದು ವಿಶ್ವ ಏಡ್ಸ್ ಲಸಿಕೆ ದಿನವನ್ನು ಆಚರಿಸಲಾಗುತ್ತದೆ. ಈ ದಿನ ವಿಶೇಷವಾಗಿ ಏಡ್ಸ್​​ ಲಸಿಕೆಗಳ ಅಗತ್ಯತೆ ಮತ್ತು ಏಡ್ಸ್​​ ತಡೆಗಟ್ಟುವಲ್ಲಿ ಲಸಿಕೆಗಳ ಮಹತ್ವ ಮತ್ತು ಅಗತ್ಯತೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸ ನಡೆಯುತ್ತದೆ.

ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್ ಅಥವಾ ಹೆಚ್‌ಐವಿ/ಏಡ್ಸ್ ಅನ್ನು ಜಾಗತಿಕ ಆರೋಗ್ಯ ಸವಾಲು ಎಂದು ಪರಿಗಣಿಸಲಾಗಿದೆ. ವಿಜ್ಞಾನ, ತಂತ್ರಜ್ಞಾನ ಎಷ್ಟೇ ಅಭಿವೃದ್ಧಿಯಾಗಿದ್ದರೂ ಈ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಲು ಇಂದಿಗೂ ಸಾಧ್ಯವಾಗಿಲ್ಲ. ಆದರೆ ರೋಗವನ್ನು ಸರಿಯಾದ ಕ್ರಮಗಳೊಂದಿಗೆ ನಿಯಂತ್ರಿಸಬಹುದು.

ಒಂದು ಲಸಿಕೆಯನ್ನು ಯಾವುದೇ ರೋಗದ ವಿರುದ್ಧದ ಪ್ರಮುಖ ರಕ್ಷಣಾ ಕವಚ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಹೆಚ್ಐವಿ/ಏಡ್ಸ್ ತಡೆಗಟ್ಟಲು ಲಸಿಕೆ ರೂಪದಲ್ಲಿ ಚಿಕಿತ್ಸೆ ನೀಡಲು ಕಳೆದ ಹಲವಾರು ವರ್ಷಗಳಿಂದ ಪ್ರಯತ್ನಗಳು ನಡೆಯುತ್ತಿವೆ. ಈ ದಿಸೆಯಲ್ಲಿ ಇದುವರೆಗೆ ಹೆಚ್ಚಿನ ಯಶಸ್ಸು ಸಿಕ್ಕಿಲ್ಲವಾದರೂ ಸಂಶೋಧನೆ ನಡೆಯುತ್ತಲೇ ಇದೆ. ಹಾಗಾಗಿ ಮೇ 18 ರಂದು, ವಿಶ್ವ ಏಡ್ಸ್ ಲಸಿಕೆ ದಿನವನ್ನು ಆಚರಿಸಲಾಗುತ್ತದೆ. ಈ ಮೂಲಕ ಹೆಚ್ಚಿನ ಸಂಶೋಧನೆಗೆ ಅವಕಾಶಗಳನ್ನು ಸೃಷ್ಟಿಸಲು ಮತ್ತು ಏಡ್ಸ್ ನಂತಹ ರೋಗಗಳನ್ನು ತಡೆಗಟ್ಟಲು ಪರಿಣಾಮಕಾರಿ ಲಸಿಕೆಯ ಅಗತ್ಯತೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಆಚರಿಸಲಾಗುತ್ತದೆ.

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, 2019ರ ಅಂತ್ಯದ ವೇಳೆಗೆ ಸುಮಾರು 38 ಮಿಲಿಯನ್ ಜನರು ಏಡ್ಸ್​​ನಿಂದ ಬಳಲುತ್ತಿದ್ದರು. ಈ ವರ್ಷದಲ್ಲಿ ಏಡ್ಸ್ ಮತ್ತು ಇತರ ಸಂಬಂಧಿತ ಕಾಯಿಲೆಗಳಿಂದ ಸುಮಾರು 6,90,000 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. 2020ರ ಅಂತ್ಯದ ವೇಳೆಗೆ, ಹೆಚ್​ಐವಿ ಪೀಡಿತರ ಸಂಖ್ಯೆ ಸುಮಾರು 37.7 ಮಿಲಿಯನ್ ಇತ್ತು. ಇದರಲ್ಲಿ ಸುಮಾರು 1.7 ಮಿಲಿಯನ್ ಜನರು 15 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂದು ಹೇಳಲಾಗಿದೆ. ರೋಗ ಮತ್ತು ಇತರ ಸಂಬಂಧಿತ ಕಾಯಿಲೆಗಳಿಂದ 2020ರಲ್ಲಿಸುಮಾರು 6,80,000 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

ರೋಗದ ಬಗ್ಗೆ ಅರಿವು ಮತ್ತು ಚಿಕಿತ್ಸೆಯಲ್ಲಿನ ಪ್ರಗತಿಯ ಪರಿಣಾಮ ಏಡ್ಸ್ ಮತ್ತು ಇತರ ಸಂಬಂಧಿತ ಕಾಯಿಲೆಗಳಿಂದ ಸಾವನ್ನಪ್ಪುವವರ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. ಅಂಕಿ ಅಂಶಗಳ ಪ್ರಕಾರ, 2004ರ ಅಂಕಿ ಅಂಶಗಳಿಗೆ ಹೋಲಿಸಿದರೆ 2020ರಲ್ಲಿ ಮೃತರ ಸಂಖ್ಯೆಯಲ್ಲಿ ಶೇ. 64 ಇಳಿಕೆಯಾಗಿದೆ ಎಂದು ತಿಳಿದುಬಂದಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 1983ರಲ್ಲಿ ಮೊದಲ ಬಾರಿಗೆ ಹೆಚ್ಐವಿ ಸೋಂಕು ಪತ್ತೆಯಾದ ಬಳಿಕ ಸುಮಾರು 79.3 ಮಿಲಿಯನ್ ಜನರು ವೈರಸ್ ಸೋಂಕಿಗೆ ತುತ್ತಾಗಿದ್ದಾರೆ. ಸೋಂಕಿನಿಂದ ಉಂಟಾಗುವ ಗಂಭೀರ ಆರೋಗ್ಯ ಪರಿಣಾಮಗಳು ಮತ್ತು ಹೆಚ್ಚಿದ ಸಾವಿನ ಪ್ರಕರಣಗಳನ್ನು ಗಮನಿಸಿದ ವೈದ್ಯರು, ವಿಜ್ಞಾನಿಗಳು ಈ ರೋಗ ಮತ್ತು ಅದರ ಕಾರಣಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾದರು. ಮಾತ್ರವಲ್ಲದೆ ಇದರ ಚಿಕಿತ್ಸೆಗೆ ಸಾಕಷ್ಟು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಏಡ್ಸ್ ತಡೆಗಟ್ಟಲು ಒಂದು ಪೂರ್ಣ ಪ್ರಮಾಣದ ಲಸಿಕೆ ಕಂಡುಹಿಡಿಯಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ.

ವಿಶ್ವ ಏಡ್ಸ್ ಲಸಿಕೆ ದಿನವನ್ನು 1998ರಲ್ಲಿ ಮೊದಲ ಬಾರಿಗೆ ಆಚರಿಸಲಾಯಿತು. 1997ರಲ್ಲಿ, ಅಂತಾರಾಷ್ಟ್ರೀಯ ಏಡ್ಸ್ ಲಸಿಕೆಯ ಪರೀಕ್ಷೆ ನಡೆಸಲಾಯಿತು. ಇದರ ನೆನಪಿಗಾಗಿಯೇ 1998 ಮೇ 18 ನ್ನು ಹೆಚ್​ಐವಿ ಲಸಿಕೆ ಜಾಗೃತಿ ದಿನವನ್ನಾಗಿ ಆಚರಿಸಲಾಯಿತು. ಪ್ರಸ್ತುತ ಪ್ರಪಂಚದಾದ್ಯಂತದ ಹಲವು ಸರ್ಕಾರ, ಸರ್ಕಾರೇತರ, ಆರೋಗ್ಯ ಮತ್ತು ಸಾಮಾಜಿಕ ಸಂಸ್ಥೆಗಳು ಈ ದಿನವನ್ನು ಆಚರಿಸುತ್ತವೆ. ಜೊತೆಗೆ ವಿವಿಧ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ.

ಹೆಚ್​​ಐವಿ ರೋಗವು ದೇಹದ ರೋಗ ನಿರೋಧಕ ಶಕ್ತಿಯ ಮೇಲೆ ದಾಳಿ ಮಾಡುತ್ತದೆ. ಹೆಚ್​ಐವಿಯು ಸೋಂಕಿತ ವ್ಯಕ್ತಿ ಬಳಸಿದ ಸೂಜಿಯ ಮರು ಬಳಕೆ, ಸೋಂಕಿತ ವ್ಯಕ್ತಿಯ ರಕ್ತ ವರ್ಗಾವಣೆ ಮತ್ತು ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಹರಡುತ್ತದೆ. ತಾಯಿ ಎಚ್‌ಐವಿ ಸೋಂಕಿಗೆ ಒಳಗಾಗಿದ್ದರೆ ಗರ್ಭಾವಸ್ಥೆಯಲ್ಲಿರುವ ಮಗುವಿಗೂ ಸೋಂಕು ತಗುಲುವ ಸಾಧ್ಯತೆ ಇದೆ.

ಸೋಂಕಿಗೆ ಒಳಗಾದ ವ್ಯಕ್ತಿಗೆ ಕೆಲವೇ ವಾರಗಳಲ್ಲಿ, ಜ್ವರ, ಗಂಟಲು ನೋವು ಮತ್ತು ದಣಿವು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ರೋಗಕ್ಕೆ ಸದ್ಯಕ್ಕೆ ಯಾವುದೇ ಶಾಶ್ವತ ಚಿಕಿತ್ಸೆ ಇಲ್ಲ. ಆದರೆ ಕೆಲವು ಆರೋಗ್ಯಕರ ಅಭ್ಯಾಸಗಳಿಂದ ಸ್ವಲ್ಪ ಮಟ್ಟಿಗೆ ರೋಗವನ್ನು ನಿಯಂತ್ರಿಸಬಹುದು.

ಹೆಚ್​ಐವಿ ತಡೆಗಟ್ಟಲು ಲಸಿಕೆಗಳ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ. ಹೆಚ್​ಐವಿಯನ್ನು ತಡೆಗಟ್ಟುವುದು ಮತ್ತು ಗುಣಪಡಿಸಲು ಬೇಕಾದ ಲಸಿಕೆಗಳ ಅಭಿವೃದ್ಧಿ ಇಂದು ಅಗತ್ಯವಾಗಿದೆ. ಏಕೆಂದರೆ ಈ ಸೋಂಕಿಗೆ ಒಳಗಾಗುವ ಮುನ್ನವೇ ದೇಹದಲ್ಲಿ ಅದರ ವಿರುದ್ಧ ಹೋರಾಡುವ ರಕ್ಷಣೆ ಇದ್ದರೆ, ರೋಗಕ್ಕೆ ತುತ್ತಾಗುವುದನ್ನು ತಪ್ಪಿಸಬಹುದು. ಇಂತಹ ಸಂದರ್ಭಗಳಲ್ಲಿ, ಹೆಚ್ಐವಿ ತಡೆಗಟ್ಟುವ ಲಸಿಕೆಯನ್ನು ಕಂಡುಹಿಡಿಯುವುದು ಬಹಳ ಮುಖ್ಯ.

ಇದನ್ನೂ ಓದಿ :ತೂಕ ಹೆಚ್ಚಳವಾದರೆ ಪ್ರಾಸ್ಟೇಟ್​ ಕ್ಯಾನ್ಸರ್​ ಅಪಾಯ: ಅಧ್ಯಯನ

ABOUT THE AUTHOR

...view details