ನವದೆಹಲಿ:ಪಂಜಾಬ್ ಕಾಂಗ್ರೆಸ್ನಲ್ಲಿರುವ ಒಳಜಗಳ ಸೇರಿದಂತೆ ಅನೇಕ ವಿಚಾರಗಳ ಕುರಿತು ಬಹಿರಂಗವಾಗಿ ಮಾತನಾಡಿರುವ ಕಪಿಲ್ ಸಿಬಲ್ ವಿರುದ್ಧ ಇದೀಗ ಟೀಕೆ ವ್ಯಕ್ತವಾಗ್ತಿದೆ. ಪಕ್ಷದ ಅನೇಕ ಕಾರ್ಯಕರ್ತರು ಅವರ ನಿವಾಸದೆದುರು ಪ್ರತಿಭಟನೆ ನಡೆಸಿದ್ದಾರೆ.
ನವದೆಹಲಿಯಲ್ಲಿರುವ ಸಿಬಲ್ ನಿವಾಸದ ಎದುರು ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, 'Get Well Soon Kapil Sibal'(ಬೇಗ ಚೇತರಿಸಿಕೊಳ್ಳಿ ಕಪಿಲ್ ಸಿಬಲ್) ಎಂಬ ಘೋಷಣೆ ಕೂಗಿದರು. ಇದೇ ವೇಳೆ ಅವರ ಕಾರಿನ ಗ್ಲಾಸ್ ಜಖಂಗೊಳಿಸಿದ್ದು, ಕಾಂಗ್ರೆಸ್ ಪಕ್ಷ ತೊರೆಯುವಂತೆ ಆಗ್ರಹಿಸಿದ್ದಾರೆ.
ಕಪಿಲ್ ಸಿಬಲ್ ಹೇಳಿಕೆಗೆ ಕಾಂಗ್ರೆಸ್ನ ಹಿರಿಯ ಮುಖಂಡ ಟಿ.ಎಸ್.ಸಿಂಗ್ ಡಿಯೋ, ಕಪಿಲ್ ಸಿಬಲ್ ದಾರಿ ತಪ್ಪಿಸುತ್ತಿದ್ದಾರೆ. ಪಕ್ಷದಲ್ಲಿ ಸೋನಿಯಾ ಗಾಂಧಿ ಅವರೇ ಎಲ್ಲ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಕಪಿಲ್ ಸಿಬಲ್ರಂತಹ ಹಿರಿಯ ಅನುಭವಿ ವ್ಯಕ್ತಿ ಈ ರೀತಿಯ ಹೇಳಿಕೆ ನೀಡಿರುವುದು ದುರಾದೃಷ್ಟಕರ. ಕಾಂಗ್ರೆಸ್ ಸಿದ್ಧಾಂತಕ್ಕೆ ಬದ್ಧರಾಗಿರುವವರು ಎಂದಿಗೂ ಪಕ್ಷ ತೊರೆಯುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ ಪಕ್ಷಕ್ಕೆ ಅಧ್ಯಕ್ಷರೇ ಇಲ್ಲ, ನಿರ್ಧಾರ ಯಾರು ತೆಗೆದುಕೊಳ್ತಿದ್ದಾರೆಂದು ಗೊತ್ತಿಲ್ಲ: ಕಪಿಲ್ ಸಿಬಲ್
ಪಂಜಾಬ್ ರಾಜಕೀಯ ವಿಚಾರವಾಗಿ ಮಾತನಾಡಿದ್ದ ಕಪಿಲ್ ಸಿಬಲ್, ನಾವು ಜಿ-23 ಸದಸ್ಯರು. ಜಿ ಹುಜೂರ್-23 ಎನ್ನುವವರಲ್ಲ(ಪ್ರಶ್ನಾತೀತ ವಿಧೇಯತೆ). ಪಕ್ಷದಲ್ಲಿನ ಸಮಸ್ಯೆಗಳ ಬಗ್ಗೆ ಈ ಹಿಂದಿನಿಂದಲೂ ನಾವು ಪ್ರಸ್ತಾಪ ಮಾಡುತ್ತಲೇ ಇದ್ದೇವೆ. ಪಕ್ಷದಲ್ಲಿ ಮಹತ್ವದ ಬದಲಾವಣೆ ಬರಬೇಕು ಎಂದು ಅವರು ಒತ್ತಾಯಿಸಿದ್ದರು.