ವಿರುಧ್ನಗರ(ತಮಿಳುನಾಡು):ಪಟಾಕಿ ತಯಾರಿಕೆಗೆ ಕಚ್ಚಾವಸ್ತು ಸಿದ್ಧಪಡಿಸುತ್ತಿದ್ದ ಸಂದರ್ಭದಲ್ಲಿ ಸ್ಫೋಟ ಸಂಭವಿಸಿ ಕಾರ್ಮಿಕ ಮೃತಪಟ್ಟಿರುವ ಘಟನೆ ತಮಿಳುನಾಡಿನಲ್ಲಿ ಇಂದು ನಡೆದಿದೆ. ವಿರುಧ್ನಗರದ ಸಾತೂರು ಸಮೀಪದ ಬನೈಯಾಡಿಪಟ್ಟಿ ಗ್ರಾಮದಲ್ಲಿ ಜಯಪಾಲ್ ಮಾಲೀಕತ್ವದ ಕಾರ್ಖಾನೆಯು ಪರವಾನಗಿ ಪಡೆದು ಕಾರ್ಯನಿರ್ವಹಿಸುತ್ತಿದೆ. ಇಲ್ಲಿ 30ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಬೆಳಿಗ್ಗೆ ಕಚ್ಚಾವಸ್ತು ಸಿದ್ಧಪಡಿಸುತ್ತಿದ್ದಾಗ ಸ್ಫೋಟ ಸಂಭವಿಸಿತು. ತೀವ್ರತೆಗೆ ಕೊಠಡಿಯೊಂದು ಧ್ವಂಸಗೊಂಡಿದೆ. ಕಂಡಿಯಾಪುರದ ಕಾರ್ಮಿಕ ಷಣ್ಮುಗರಾಜ್ (36) ಎಂಬವರು ಸ್ಥಳದಲ್ಲೇ ಅಸುನೀಗಿದ್ದಾರೆ. ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ.
ಮೃತಪಟ್ಟ ಕಾರ್ಮಿಕನ ಮೃತದೇಹವನ್ನು ಅವಶೇಷಗಳಿಂದ ಹೊರತೆಗೆದು, ಸಾತೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.