ನವದೆಹಲಿ: ಹೊಸ ಸಂಸತ್ ಕಟ್ಟಡದ ಉದ್ಘಾಟನಾ ದಿನದಂದು ಸಂಸದರಿಗೆ ನೀಡಲಾದ ಸಂವಿಧಾನದ ಹೊಸ ಪ್ರತಿಗಳಲ್ಲಿ 'ಸಮಾಜವಾದಿ ಜಾತ್ಯತೀತ' ಎಂಬ ಪದಗಳು ಕಾಣೆಯಾಗಿವೆ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.
"ನಮಗೆ ಇಂದು ನೀಡಲಾದ ಹೊಸ ಸಂವಿಧಾನದ ಪ್ರತಿಗಳ ಪೀಠಿಕೆಯಲ್ಲಿ 'ಸಮಾಜವಾದಿ ಜಾತ್ಯತೀತ' ಎಂಬ ಪದಗಳಿಲ್ಲ. ಇದೇ ಸಂವಿಧಾನದ ಪ್ರತಿಗಳನ್ನು ಕೈಯಲ್ಲಿ ಹಿಡಿದು ನಾವು ಹೊಸ ಸಂಸತ್ ಭವನದ ಕಟ್ಟಡ ಪ್ರವೇಶಿಸಿದ್ದೆವು" ಎಂದು ಅವರು ಮಂಗಳವಾರ ಎಎನ್ಐಗೆ ತಿಳಿಸಿದರು. "1976 ರಲ್ಲಿ ತಿದ್ದುಪಡಿಯ ನಂತರ ಈ ಪದಗಳನ್ನು ಸೇರಿಸಲಾಗಿತ್ತು ಎಂಬುದು ನಮಗೆಲ್ಲ ಗೊತ್ತಿದೆ. ಆದರೆ ಇಂದು ನೀಡಲಾದ ಸಂವಿಧಾನದ ಪ್ರತಿಗಳಲ್ಲಿ ಆ ಪದಗಳು ಇಲ್ಲದಿರುವುದು ಕಳವಳಕಾರಿ ವಿಷಯವಾಗಿದೆ" ಎಂದು ಅವರು ಹೇಳಿದರು. "ಅವರ ಉದ್ದೇಶ ಅನುಮಾನಾಸ್ಪದವಾಗಿದೆ. ಅತ್ಯಂತ ಬುದ್ಧಿವಂತಿಕೆಯಿಂದ ಈ ಕೆಲಸ ಮಾಡಲಾಗಿದ್ದು, ಇದು ನನಗೆ ಕಾಳಜಿಯ ವಿಷಯವಾಗಿದೆ." ಎಂದು ಅವರು ತಿಳಿಸಿದರು.
"ನಾನು ಈ ವಿಷಯವನ್ನು ಆಗಲೇ ಎತ್ತಲು ಪ್ರಯತ್ನಿಸಿದ್ದೆ, ಆದರೆ ನನಗೆ ಅವಕಾಶ ಸಿಗಲಿಲ್ಲ" ಎಂದು ಚೌಧರಿ ನುಡಿದರು. ಐದು ದಿನಗಳ ವಿಶೇಷ ಅಧಿವೇಶನದ ಎರಡನೇ ದಿನವಾದ ಮಂಗಳವಾರ ಲೋಕಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಭಾರತದ ಸಂವಿಧಾನದ ಪ್ರಕಾರ 'ಇಂಡಿಯಾ' ಮತ್ತು 'ಭಾರತ' ನಡುವೆ ಯಾವುದೇ ವ್ಯತ್ಯಾಸವಿಲ್ಲದ ಕಾರಣ ಯಾರೂ 'ಇಂಡಿಯಾ' ಮತ್ತು 'ಭಾರತ' ನಡುವೆ ಅನಗತ್ಯ ಬಿರುಕು ಸೃಷ್ಟಿಸಲು ಪ್ರಯತ್ನಿಸಬಾರದು ಎಂದು ಹೇಳಿದರು.