ಶ್ರೀನಗರ: 370ನೇ ವಿಧಿ ಮತ್ತೆ ಬರುವವರೆಗೂ ನಾನು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಆದ್ರೆ ರಾಜಕೀಯವನ್ನು ತೊರೆಯುವುದಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಹೇಳಿದ್ದಾರೆ.
ಪೀಪಲ್ಸ್ ಅಲೈಯನ್ಸ್ ಫಾರ್ ಗುಪ್ಕರ್ ಡಿಕ್ಲರೇಷನ್ (ಪಿಎಜಿಡಿ) ಮತ್ತು ನ್ಯಾಷನಲ್ ಕಾನ್ಫರೆನ್ಸ್ ಮೊದಲ ಬಾರಿಗೆ ಜಿಲ್ಲಾ ಅಭಿವೃದ್ಧಿ ಮಂಡಳಿ ಚುನಾವಣೆಯಲ್ಲಿ ಉತ್ತಮ ಸ್ಥಾನಗಳನ್ನು ಗೆದ್ದಿದೆ. ಈ ಸಂಬಂಧ ಈಟಿವಿ ಭಾರತಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಒಮರ್ ಅಬ್ದುಲ್ಲಾ ಅವರು, ಈ ಫಲಿತಾಂಶವು ಜಮ್ಮು ಮತ್ತು ಕಾಶ್ಮೀರ ಜನತೆ 370 ನೇ ವಿಧಿ ರದ್ದುಗೊಳಿಸುವಿಕೆ ಹಾಗೂ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸುವ ಬಿಜೆಪಿ ಸರ್ಕಾರದ ನಿರ್ಧಾರದ ವಿರುದ್ಧ ಇರುವುದನ್ನು ಸೂಚಿಸುತ್ತದೆ ಎಂದಿದ್ದಾರೆ.