ನವದೆಹಲಿ:ಮಹಿಳಾ ಸಂಸದರು ಲೋಕಸಭೆಯಲ್ಲಿ ಶೇಕಡಾ 15ಕ್ಕಿಂತ ಕಡಿಮೆ ಸ್ಥಾನ ಹೊಂದಿದ್ದಾರೆ. ಅವರ ಪ್ರಾತಿನಿಧ್ಯವು ಅನೇಕ ರಾಜ್ಯ ವಿಧಾನಸಭೆಗಳಲ್ಲಿ ಶೇ 10 ಕ್ಕಿಂತಲೂ ಕಡಿಮೆ ಇದೆ. ಹೀಗಾಗಿ, ಕಳೆದ 27 ವರ್ಷಗಳಿಂದಲೂ ಮಹಿಳಾ ಮೀಸಲಾತಿ ಮಸೂದೆಯ ಚರ್ಚೆ ನಡೆಯುತ್ತಲೇ ಇದೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಸ್ಥಾನಗಳನ್ನು ಮೀಸಲಿಡುವ ಕ್ರಮಕ್ಕೆ ಸಾಕಷ್ಟು ಗದ್ದಲವೂ ನಡೆದಿತ್ತು. ಇದರ ಪರಿಣಾಮ, ರಾಜ್ಯಸಭೆ 2010ರಲ್ಲಿ ಮಸೂದೆಯನ್ನು ಅಂಗೀಕರಿಸಿತ್ತು. ಆದರೆ ಲೋಕಸಭೆಯ ಒಪ್ಪಿಗೆ ಪಡೆಯುವಲ್ಲಿ ಯಶಸ್ಸು ಕಾಣಲಿಲ್ಲ.
ಬಿಜೆಪಿ, ಕಾಂಗ್ರೆಸ್ ಈ ಮಸೂದೆಯನ್ನು ಬೆಂಬಲಿಸಿವೆ. ಆದರೆ ಕೆಲವು ಪಕ್ಷಗಳ ವಿರೋಧ ಮತ್ತು ಮಹಿಳಾ ಕೋಟಾದಲ್ಲಿ ಹಿಂದುಳಿದ ವರ್ಗಗಳ ಕೋಟಾಕ್ಕಾಗಿ ಕೇಳಿಬಂದಿರುವ ಬೇಡಿಕೆಗಳು ಈ ಮಸೂದೆಗೆ ಅಡ್ಡಿಯಾಗಿವೆ. ಇಂದಿನಿಂದ ಶುರುವಾಗುವ ಐದು ದಿನಗಳ ವಿಶೇಷ ಅಧಿವೇಶನದಲ್ಲಿ ಮೀಸಲಾತಿ ಮಸೂದೆ ಮಂಡಿಸಲು ಮತ್ತು ಅಂಗೀಕರಿಸಲು ಭಾನುವಾರ ಹಲವಾರು ಪಕ್ಷಗಳು ಒತ್ತಾಯಿಸಿವೆ. ಆದರೆ ಕೇಂದ್ರ ಸರ್ಕಾರ, "ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು" ಎಂದಿದೆ.
ಪ್ರಸ್ತುತ ಲೋಕಸಭೆಯಲ್ಲಿ 78 ಮಹಿಳಾ ಸದಸ್ಯರಿದ್ದಾರೆ. ಇದು ಶೇಕಡಾ 15 ಕ್ಕಿಂತ ಕಡಿಮೆ. ರಾಜ್ಯಸಭೆಯಲ್ಲೂ ಮಹಿಳಾ ಪ್ರಾತಿನಿಧ್ಯ ಶೇ 14ರಷ್ಟಿದೆ ಎಂದು ಕೇಂದ್ರ ಸರ್ಕಾರ ಕಳೆದ ಡಿಸೆಂಬರ್‌ನಲ್ಲಿ ಸಂಸತ್ತಿಗೆ ಅಂಕಿಅಂಶಗಳು ನೀಡಿದೆ. ಹಲವಾರು ರಾಜ್ಯಗಳ ವಿಧಾನಸಭೆಗಳು ಶೇ 10ಕ್ಕಿಂತ ಕಡಿಮೆ ಮಹಿಳಾ ಪ್ರಾತಿನಿಧ್ಯ ಹೊಂದಿವೆ. ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಅಸ್ಸಾಂ, ಗೋವಾ, ಗುಜರಾತ್, ಹಿಮಾಚಲ ಪ್ರದೇಶ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಒಡಿಶಾ, ಸಿಕ್ಕಿಂ, ತಮಿಳುನಾಡು, ತೆಲಂಗಾಣ, ತ್ರಿಪುರ ಮತ್ತು ಪುದುಚೇರಿ ಈ ಪಟ್ಟಿಯಲ್ಲಿವೆ.