ಕರ್ನಾಟಕ

karnataka

ETV Bharat / bharat

ಮಹಿಳಾ ಮೀಸಲಾತಿ ನಾನು ನೀಡುತ್ತಿರುವ ಗ್ಯಾರಂಟಿ: ಗುಜರಾತ್​ನಲ್ಲಿ ಪ್ರಧಾನಿ ಮೋದಿ ಘೋಷಣೆ - Womens reservation bill

ಮಹಿಳಾ ಮೀಸಲಾತಿ ಕಾಯ್ದೆಯನ್ನು ಲೋಕಸಭೆಯಲ್ಲಿ ಅಂಗೀಕಾರ ಪಡೆದಿದ್ದು, ಅದನ್ನು ಜಾರಿ ಮಾಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದರು.

ಪ್ರಧಾನಿ ಮೋದಿ ಘೋಷಣೆ
ಪ್ರಧಾನಿ ಮೋದಿ ಘೋಷಣೆ

By ETV Bharat Karnataka Team

Published : Sep 26, 2023, 10:53 PM IST

ಅಹಮದಾಬಾದ್ (ಗುಜರಾತ್):ಚುನಾವಣಾ ರಾಜ್ಯಗಳಾದ ಮಧ್ಯಪ್ರದೇಶ ಮತ್ತು ರಾಜಸ್ಥಾನದ ನಂತರ ಪ್ರಧಾನಿ ಮೋದಿ ಗುಜರಾತ್ ಪ್ರವಾಸ ಕೈಗೊಂಡಿದ್ದರು. ಪಕ್ಷ ಆಯೋಜಿಸಿದ್ದ ನಾರಿ ಶಕ್ತಿ ವಂದನ್ - ಅಭಿನಂದನ್ ಕಾರ್ಯಕ್ರಮದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದರು. ಇದಕ್ಕೂ ಮೊದಲು ನಡೆದ ಬೃಹತ್​ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ತೆರೆದ ಜೀಪಿನಲ್ಲಿ ಜನರತ್ತ ಪ್ರಧಾನಿ ಕೈಬೀಸಿದರು. ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಸೇರಿದ್ದ ಅಸಂಖ್ಯಾತ ಜನರು ಪ್ರಧಾನಿಯನ್ನು ಅದ್ಧೂರಿಯಾಗಿ ಬರಮಾಡಿಕೊಂಡರು.

ಬಳಿಕ ನಡೆದ ನಾರಿ ಶಕ್ತಿ ವಂದನ್-ಅಭಿನಂದನ್ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಮಹಿಳಾ ಮೀಸಲಾತಿಯನ್ನು ಕೇಂದ್ರ ಸರ್ಕಾರ ಕೊಟ್ಟೇ ಕೊಡುತ್ತದೆ. ಇದು ನಾನು ನೀಡುತ್ತಿರುವ ಗ್ಯಾರಂಟಿ. ನಮ್ಮ ಸರ್ಕಾರ ಕಳೆದ 9 ವರ್ಷಗಳಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಈಗ ಮೀಸಲಾತಿ ಮಸೂದೆಯನ್ನು ಮಂಡಿಸಿದ್ದೇವೆ ಎಂದು ಹೇಳಿದರು.

ಲಿಂಗಾನುಪಾತ ಸುಧಾರಣೆ:ನಾವು ಮಹಿಳೆಯರ ಜೀವನವನ್ನು ಉತ್ತಮಗೊಳಿಸಲು ಸತತವಾಗಿ ಶ್ರಮಿಸಿದ್ದೇವೆ. ಹೆಣ್ಣು ಶಿಶು ಹತ್ಯೆಯಿಂದ ಯುವತಿಯರವರೆಗೆ ನಾವು ಹಲವಾರು ಸಾಮಾಜಿಕ ಸಮಸ್ಯೆಗಳನ್ನು ಕಾಣುತ್ತೇವೆ. ಅನಕ್ಷರತೆ ಹೋಗಲಾಡಿಸಲು ಬೇಟಿ ಪಢಾವೋ, ಬೇಟಿ ಬಚಾವೋ ಅಭಿಯಾನವನ್ನು ಪ್ರಾರಂಭಿಸಿದ್ದೇವೆ. ಆಗಿದ್ದಕ್ಕಿಂತಲೂ ಗಂಡು-ಹೆಣ್ಣಿನ ಲಿಂಗ ಅನುಪಾತದಲ್ಲಿ ಈಗ ಸುಧಾರಣೆ ಕಂಡಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಸುಕನ್ಯಾ ಸಮೃದ್ಧಿ ಯೋಜನೆಯಿಂದ ಹೆಣ್ಣು ಮಕ್ಕಳಿಗೆ ಆರ್ಥಿಕ ಭದ್ರತೆ ಸಿಕ್ಕಿದೆ ಎಂದು ಪ್ರಧಾನಿ ಹೇಳಿದರು.

ಹೆಣ್ಣು ಸಮಾಜದ ಎಲ್ಲ ಸ್ತರಗಳಲ್ಲಿ ಹೊಣೆಗಾರಿಗೆ ಹೊಂದಿದ್ದಾಳೆ. ಸೈನ್ಯದಿಂದ ಹಿಡಿದು ಗಣಿಗಾರಿಕೆಯವರೆಗೂ ಆಕೆ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಬಲ್ಲಳು. ಉದ್ಯಮವಾಗಲಿ ಅಥವಾ ಕ್ರೀಡೆಯಾಗಲಿ ಮಹಿಳೆಯರು ಹೊಸ ವಿಕ್ರಮ ಸಾಧಿಸುತ್ತಿದ್ದಾರೆ. ನಮ್ಮ ಮಹಿಳಾ ಕ್ರಿಕೆಟ್ ತಂಡವು ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ಗೆದ್ದು ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ ಎಂದರು.

ಮಹಿಳೆಯರ ನಾಯಕತ್ವ ತಡೆಯಲಾಗಲ್ಲ:ಗುಜರಾತ್‌ನಲ್ಲಿ ಪೊಲೀಸ್ ಸೇರಿದಂತೆ ಎಲ್ಲಾ ಸರ್ಕಾರಿ ನೇಮಕಾತಿಗಳಲ್ಲಿ ಶೇಕಡಾ 33 ರಷ್ಟು ಮಹಿಳಾ ಮೀಸಲಾತಿ ಇದೆ. ನಾರಿ ಶಕ್ತಿ ವಂದನಾ ಕಾಯ್ದೆಯು ರಕ್ಷಾ ಬಂಧನದ ಕೊಡುಗೆಯಾಗಿದೆ. ನೀವು ನನಗೆ ರಾಖಿಗಳನ್ನು ಕಳುಹಿಸಿದಾಗಲೇ ಮಸೂದೆ ತರುವ ಬಗ್ಗೆ ನಿರ್ಧರಿಸಲಾಯಿತು. ಆದರೆ ನಾನು ಆಗ ಹೇಳಲು ಸಾಧ್ಯವಾಗಲಿಲ್ಲ. ನಾರಿ ಶಕ್ತಿ ವಂದನ ಕಾಯಿದೆಯು ಅಭಿವೃದ್ಧಿ ಹೊಂದಿದ ಭಾರತದ ಮಾದರಿಯಾಗಿದೆ. ದೇಶದಲ್ಲಿ ಮಹಿಳೆಯರ ನಾಯಕತ್ವವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.

ಪ್ರಧಾನಿಗೆ ಅದ್ಧೂರಿ ಸ್ವಾಗತ:ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಪಕ್ಷದ ಕಾರ್ಯಕರ್ತರು, ಜನರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭವ್ಯ ಸ್ವಾಗತ ಕೋರಿದರು. ನಾರಿ ಶಕ್ತಿ ವಂದನ್-ಅಭಿನಂದನ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮಹಿಳೆಯರಿಗೆ ಹಸ್ತಲಾಘವ ಮಾಡುವ ಮೂಲಕ ಶುಭಾಶಯ ಕೋರಿದರು. ಈ ವೇಳೆ ಸಿಎಂ ಭೂಪೇಂದ್ರ ಪಟೇಲ್, ಎಲ್ಲಾ ಮಹಿಳಾ ಶಾಸಕರು, ಮಹಿಳಾ ಮೇಯರ್‌ಗಳು, ಮಹಿಳಾ ಮಾಜಿ ಮೇಯರ್‌ಗಳು ಮತ್ತು ಜಿಲ್ಲಾ ಪರಿಷತ್ತಿನ ಮಹಿಳಾ ಮುಖ್ಯಸ್ಥರು ವೇದಿಕೆಯಲ್ಲಿದ್ದರು.

ಇದನ್ನೂ ಓದಿ:ಸುಪ್ರೀಂಕೋರ್ಟ್​ನಲ್ಲಿ ಶ್ರವಣ ಮತ್ತು ವಾಕ್​ ದೋಷವುಳ್ಳ ವಕೀಲೆಯಿಂದ ವಾದ ಮಂಡನೆ .. ದೇಶದ ನ್ಯಾಯಾಂಗ ಇತಿಹಾಸದಲ್ಲಿ ಇದೇ ಮೊದಲು

ABOUT THE AUTHOR

...view details