ನವದೆಹಲಿ :ಇಂದು ನೂತನ ಸಂಸತ್ ಭವನದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಲಾಗಿದೆ. ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸಿದರು. ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿ ನಿಗದಿ ಕುರಿತ ಈ ಸಾಂವಿಧಾನಿಕ ಮಸೂದೆಯು ಕಳೆದ 13 ವರ್ಷಗಳಿಂದ ಲೋಕಸಭೆಯಲ್ಲಿ ಅಂಗೀಕಾರ ಪಡೆದಿರಲಿಲ್ಲ. ಇದೀಗ ಮಸೂದೆ ಬಗ್ಗೆ ಸುದೀರ್ಘ ಚರ್ಚೆ ನಡೆಯಲಿದೆ.
ಕಳೆದ 27 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮಹಿಳಾ ಮೀಸಲಾತಿ ಮಸೂದೆಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಂಗಳವಾರ ಮಂಡಿಸಿದೆ. ಈ ಮಸೂದೆ ಅಂಗೀಕಾರಕ್ಕೆ 1992ರಿಂದ ಪ್ರಯತ್ನ ನಡೆಯುತ್ತಿದೆಯಾದರೂ, ಇದರ ಅಂಗೀಕಾರಕ್ಕೆ ಸಂವಿಧಾನ ತಿದ್ದುಪಡಿ ಮತ್ತು ರಾಜಕೀಯ ಒಮ್ಮತದ ಕೊರತೆ ಅಂದಿನ ಸರ್ಕಾರಗಳಿಗೆ ಎದುರಾಗಿತ್ತು. ಇದಕ್ಕೂ ಮೊದಲು ಈ ಮಸೂದೆಯನ್ನು ಮಾರ್ಚ್ 2010ರಲ್ಲಿ ರಾಜ್ಯಸಭೆಯಲ್ಲಿ ಮಂಡಿಸಲಾಗಿತ್ತು. ಆದರೆ ಲೋಕಸಭೆಯಲ್ಲಿ ಇದಕ್ಕೆ ಅಂಗೀಕಾರ ಸಿಗದ ಕಾರಣ ಕಳೆದ 13 ವರ್ಷಗಳಿಂದ ಹಾಗೆಯೇ ಉಳಿದಿತ್ತು.
ಈ ಮಸೂದೆಯ ಬಗ್ಗೆ ತಿಳಿದುಕೊಳ್ಳಬೇಕಾದರೆ ಮೂರು ದಶಕಗಳ ಹಿಂದೆ ಹೋಗಬೇಕಾಗುತ್ತದೆ. 1992ರಲ್ಲಿ ಅಂದಿನ ಪ್ರಧಾನಿ ನರಸಿಂಹರಾವ್ ಸರ್ಕಾರದ ಆಡಳಿತಾವಧಿಯಲ್ಲಿ ಸಂವಿಧಾನದ 73 ಮತ್ತು 74ನೇ ತಿದ್ದುಪಡಿ ತರುವ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆ ಜಾರಿ ಮಾಡಲಾಯಿತು. ಇದು ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಹಿಳಾ ಸಶಕ್ತಿಕರಣದ ಬೇಡಿಕೆಗೆ ಬಲ ನೀಡಿತು.
ಈ ಎರಡು ಸಾಂವಿಧಾನಿಕ ತಿದ್ದುಪಡಿಗಳು ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮೂರನೇ ಒಂದು ಭಾಗದಷ್ಟು ಮಹಿಳಾ ಮೀಸಲಾತಿಗೆ ಕಾರಣವಾದವು. ಆದರೆ ಕಾನೂನು ಸಚಿವಾಲಯವು ರಾಜ್ಯಸಭೆಯ ಸಂಸದೀಯ ಸ್ಥಾಯಿ ಸಮಿತಿಗೆ ಸಲ್ಲಿಸಿದ ಟಿಪ್ಪಣಿಯ ಪ್ರಕಾರ, 1996, 1998 ಮತ್ತು 1999ರಲ್ಲಿ ಕ್ರಮವಾಗಿ ಈ ಮೂರು ಮಸೂದೆಗಳನ್ನು ಸಂಸತ್ತಿನಲ್ಲಿ ಮಂಡಿಸಲಾಯಿತು. ಆದರೆ ಕಾರಣಾಂತರಗಳಿಂದ ಮಸೂದೆಗಳು ಅಂಗೀಕಾರವಾಗಲಿಲ್ಲ.
ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ಒದಗಿಸುವ ವಿಷಯವು ಮೊದಲ ಬಾರಿಗೆ 11ನೇ ಲೋಕಸಭೆಯಲ್ಲಿ ಚರ್ಚೆಯಾಯಿತು. 1996ರ ಸೆಪ್ಟೆಂಬರ್ 12ರಂದು ಸಂವಿಧಾನ 89ಕ್ಕೆ ತಿದ್ದುಪಡಿ ತಂದು ಮಹಿಳಾ ಮೀಸಲಾತಿ ಬಗ್ಗೆ ಚರ್ಚೆ ನಡೆಸಲಾಯಿತು. ಈ ವೇಳೆ ಈ ಮಸೂದೆಯು ಸೂಕ್ಷ್ಮವಾದ ರಾಜಕೀಯ ಸ್ವರೂಪ ಪಡೆಯಿತು. ಇದರಿಂದ ಅಂದಿನ ಪಶ್ಚಿಮ ಬಂಗಾಳದ ಲೋಕಸಭೆ ಸದಸ್ಯರಾಗಿದ್ದ ಗೀತಾ ಮುಖರ್ಜಿ ಅವರ ಅಧ್ಯಕ್ಷತೆಯಲ್ಲಿ ರಚಿಸಿದ್ದ ಸಂಸತ್ತಿನ ಉಭಯ ಸದನಗಳ ಜಂಟಿ ಸಮಿತಿಗೆ ಇದನ್ನು ವಹಿಸಲಾಯಿತು.