ಮಕ್ಕಳು ಬೇಕಾ ಅಥವಾ ಬೇಡ ಎಂಬುದು ಮಹಿಳೆಯ ಕೈಯಲ್ಲಿ ಇಲ್ಲ, ಮಾಸ್ಕ್ ಹಾಕಬೇಕಾ? ಬೇಡಾ ಎಂಬುದನ್ನು ಮತ್ತೊಬ್ಬರು ನಿರ್ಧರಿಸುತ್ತಾರೆ. ಇವಷ್ಟೆ ಅಲ್ಲ ಇನ್ನು ಹಲವು ಮಾನವ ಹಕ್ಕುಗಳ ವಿಚಾರವಾಗಿ ಭಿನ್ನತೆ ಇದೆ. ಮಹಿಳಾ ಹಕ್ಕುಗಳೂ ಕೂಡಾ ಭಿನ್ನವಾಗಿವೆ. ಈ ವರ್ಷ ತುಳಿತ, ತಾರಾತಮ್ಯದ ವಿರುದ್ಧ ಜಗತ್ತಿನೆಲ್ಲೆಡೆ ಅನೇಕ ಮಹಿಳಾ ಹೋರಾಟಗಳು ನಡೆದಿವೆ. ಅಷ್ಟೇ ಅಲ್ಲ ಗಮನ ಸೆಳೆದಿವೆ ಕೂಡಾ. ಇದರಲ್ಲಿ ಇನ್ನು ಕೆಲವು ನಡೆಯುತ್ತಲೇ ಇವೆ.
ದಮನ ಬಲವಾದಷ್ಟೂ ಪ್ರತಿರೋಧವೂ ಬಲವಾಗಿರುತ್ತದೆ: ಇರಾನ್ನಲ್ಲಿ ನಡೆದ ಹಿಂಸಾತ್ಮಕ ಚಳವಳಿ ಇದಕ್ಕೆ ಸ್ಪಷ್ಟತೆ ನೀಡಿದೆ. 22 ವರ್ಷದ ಮಶಾ ಅಮಿನಿ ಕಟ್ಟುನಿಟ್ಟಿನ ನಿಯಮ ಪಾಲಿಸುವ ದೇಶದಲ್ಲಿ ವಿಶ್ವವೇ ಆ ದೇಶದ ಕಡೆ ನೋಡುವಂತೆ ಗಮನೆ ಸೆಳೆದು ಹೋರಾಟಕ್ಕೆ ಜೀವ ತುಂಬಿದವರು. ಸಾಮಾನ್ಯ ಯುವತಿ ಮಶಾ, ಸಾರ್ವಜನಿಕ ಸ್ಥಳದಲ್ಲಿ ಸರಿಯಾಗಿ ಹಿಜಾಬ್ ಧರಿಸಲಿಲ್ಲ ಎಂಬ ಕಾಣಕ್ಕೆ ನೈತಿಕ ಪೊಲೀಸ್ ಗಿರಿ ನಡೆಸಿ ಹತ್ಯೆ ಮಾಡಲಾಯಿತು.
ಈ ಘಟನೆ ಇಡೀ ಪ್ರಪಂಚವನ್ನೇ ಕೆರಳಿಸಿತು. ಮಶಾಗೆ ಬೆಂಬಲವಾಗಿ ಕೋಟ್ಯಂತರ ಮಹಿಳೆಯರು ಸರ್ಕಾರದ ನಿರ್ಧಾರ ಖಂಡಿಸಿ ರಸ್ತೆಗಿಳಿದು ಪ್ರತಿಭಟಿಸಿದರು. ಅಲ್ಲದೇ ತಮ್ಮ ಹಿಜಾಬ್ ಸುಟ್ಟು, ಕೂದಲು ಕತ್ತರಿಸಿ, ಆಕ್ರೋಶ ವ್ಯಕ್ತಪಡಿಸಿದರು. ವುಮೆನ್ ಲೈಫ್ ಫ್ರಿಡಂ (ಮಹಿಳಾ ಜೀವನ ಸ್ವಾತಂತ್ರ್ಯ) ಎಂಬ ಹೆಸರಿನಲ್ಲಿ 8 ಕೋಟಿ ಮಹಿಳೆಯರು ಈ ಹೋರಾಟದ ಭಾಗವಾದರು. ಅಮಿನಿ ಎಂಬ ಹ್ಯಾಷ್ಟ್ಯಾಗ್ನಲ್ಲಿ ನಡೆದ ಈ ಹೋರಾಟ ಈ ವರ್ಷದ ಪ್ರೇರಣಾದಾಯಕ ಹೋರಾಟ ಎಂದು ಟೈಮ್ ಮ್ಯಾಗಜಿನ್ ಘೋಷಿಸಿದೆ.
ತೀವ್ರತೆ ಹೊಂದಿದ ದೀರ್ಘವಾದ ಈ ಹೋರಾಟಕ್ಕೆ ಮಣಿದ ಸರ್ಕಾರ ನೈತಿಕ ಪೊಲೀಸ್ ವ್ಯವಸ್ಥೆಯನ್ನು ರದ್ದು ಮಾಡಿತು. ಇದು ಸಣ್ಣ ಜಯ. ಆದರೂ ಈ ಉತ್ಸಾಹದಲ್ಲಿ ಇನ್ನಷ್ಟು ಬದಲಾವಣೆಗಾಗಿ ಹೋರಾಟ ಮುಂದುವರಿಯುವಂತೆ ಮಾಡಿದೆ.
ಈ ಹಿಂದಿಗಿಂತ ಹೆಚ್ಚಿನ ಸ್ವಾತಂತ್ರ್ಯ ಸಿಕ್ಕಿದೆಯಾ? :ಅಜ್ಜಿ...ತಾಯಿ...ಹುಡುಗಿ... ಸಾಮಾನ್ಯವಾಗಿ ಅಜ್ಜಿಯ ಕಾಲಮಾನಕ್ಕೆ ಹೋಲಿಸಿದಾಗ ಇಂದಿನ ಹುಡುಗಿಯರು ಹೆಚ್ಚಿನ ಸ್ವಾತಂತ್ರ್ಯದ ಹಕ್ಕನ್ನು ಹೊಂದಿರುತ್ತಾರೆ. ಆದರೆ, ಅಫ್ಘಾನಿಸ್ತಾನದಲ್ಲಿ ಈ ಪರಿಸ್ಥಿತಿ ತದ್ವಿರುದ್ದವಾಗಿದೆ. ಇಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ, ತಾಲಿಬಾನ್ ಸರ್ಕಾರ ಹೆಣ್ಣು ಮಕ್ಕಳಿಗೆ ವಿಶ್ವವಿದ್ಯಾಲಯದಲ್ಲಿನ ಕಲಿಕೆಗೆ ನಿರ್ಬಂಧ ವಿಧಿಸಿದೆ. ಪ್ರೌಢ ಶಿಕ್ಷಣದವರೆಗೆ ಮಾತ್ರ ಓದಲು ಅನುಮತಿ ನೀಡಿದೆ,
ಪುರುಷರ ಅಂಗರಕ್ಷಣೆಯಿಲ್ಲದೇ ಒಬ್ಬರೇ ತಿರುಗುವಂತಿಲ್ಲ ಎಂಬ ನಿಯಮ ಜಾರಿಗೆ ತಂದಿದೆ. ಇದು ದಶಕಗಳ ಹಿಂದಿನ ಪರಿಸ್ಥಿತಿಯನ್ನು ಮರುಕಳಿಸುವಂತೆ ಮಾಡಿದೆ. ಪ್ರತಿಭಟನೆಗೆ ಇಳಿದರೆ ಪ್ರಾಣ ಕಳೆದುಕೊಳ್ಳುತ್ತೇವೆ ಎಂದು ಗೊತ್ತಿದ್ದರೂ ಕಾಬೂಲ್‌ನಲ್ಲಿರುವ ಮಹಿಳೆಯರೆಲ್ಲ ಒಗ್ಗೂಡಿ ‘ಶಾಲೆ ತೆರೆಯಿರಿ’ ಎನ್ನುತ್ತಿದ್ದಾರೆ