ಡೆಹ್ರಾಡೂನ್,ಉತ್ತರಾಖಂಡ್ :ಚುನಾವಣೆಯಲ್ಲಿ ಗೆಲ್ಲಲು ವಿವಿಧ ಪಕ್ಷಗಳು ಈಗಾಗಲೇ ಕಸರತ್ತುಆರಂಭಿಸಿವೆ. ರಾಜಕೀಯ ತಜ್ಞರು ಕೂಡ ತಮ್ಮದೇ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಯಾವ ದಾಳ ಉರುಳಿಸಿದರೆ ಗೆಲುವು ಸಾಧ್ಯವಿದೆ ಎಂಬುದನ್ನು ರಾಜಕೀಯ ಮುಖಂಡರು ಈಗಾಗಲೇ ಚಿಂತನೆಯಲ್ಲಿ ತೊಡಗಿದ್ದಾರೆ. ಈಗ ಉತ್ತರಾಖಂಡದಲ್ಲಿ ಒಂದು 'ಲೆಕ್ಕಾಚಾರ' ಬಯಲಾಗಿದೆ.
ಫೆಬ್ರವರಿ 14ರಂದು ಉತ್ತರಾಖಂಡದಲ್ಲಿ ಚುನಾವಣೆ ನಡೆಯಲಿದ್ದು, ಇಲ್ಲಿ ಮಹಿಳಾ ಶಕ್ತಿಯನ್ನು ಕಡೆಗಣಿಸುವುದು ಸಾಧ್ಯವಿಲ್ಲ. ನೋಂದಾಯಿತ ಮತದಾರರ ಪೈಕಿ ಶೇ.45ಕ್ಕೂ ಹೆಚ್ಚು ಮಂದಿ ಮಹಿಳೆಯರಿದ್ದಾರೆ. ವೋಟಿಂಗ್ ವಿಚಾರಕ್ಕೆ ಬರುವುದಾದರೆ, ಪುರುಷರಿಗಿಂತ ಮಹಿಳೆಯರ ಮತದಾನದ ಪ್ರಮಾಣವೇ ಹೆಚ್ಚಾಗಿದೆ. ಇದು ಹಿಂದಿನ ಚುನಾವಣೆಗಳಲ್ಲಿ ಸಾಬೀತಾಗಿದೆ.
ಇದನ್ನು ಗಮನದಲ್ಲಿಟ್ಟುಕೊಂಡೇ ರಾಜಕೀಯ ಪಕ್ಷಗಳು ಮಹಿಳೆಯರ ಮತಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿವೆ. 2017ರ ವಿಧಾನಸಭಾ ಚುನಾವಣೆಯಲ್ಲಿ ಪುರುಷರಿಗಿಂತ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ.
ಸೋಶಿಯಲ್ ಡೆವಲಪ್‌ಮೆಂಟ್ ಫಾರ್ ಕಮ್ಯುನಿಟೀಸ್ ಫೌಂಡೇಶನ್ (ಎಸ್‌ಡಿಸಿ) ಚುನಾವಣೆಯಲ್ಲಿ ಮಹಿಳೆಯರ ಪಾತ್ರದ ಕುರಿತು ಮಾಹಿತಿಯನ್ನು ಬಿಡುಗಡೆ ಮಾಡಿದೆ. ಈ ಮಾಹಿತಿಯ ಪ್ರಕಾರ 2017ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಉತ್ತರಾಖಂಡ್ನ 9 ಗುಡ್ಡಗಾಡು ಜಿಲ್ಲೆಗಳ 34 ಸ್ಥಾನಗಳಲ್ಲಿ ಶೇ.51.15 ಮಂದಿ ಪುರುಷರು, ಶೇ.65.12ರಷ್ಟು ಮಹಿಳೆಯರು ಮತದಾನ ಮಾಡಿದ್ದರು.
ಈ ಜಿಲ್ಲೆಗಳ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸರಾಸರಿ 28,202 ಮಹಿಳೆಯರು ಮತ್ತು 23,086 ಪುರುಷರು ತಮ್ಮ ಹಕ್ಕನ್ನು ಚಲಾಯಿಸಿದ್ದರು. ಅಂದರೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಪುರುಷರಿಗಿಂತ 5,116 ಮಹಿಳೆಯರು ತಮ್ಮ ಮತ ಚಲಾಯಿಸಿದ್ದರು.